ಹುಬ್ಬಳ್ಳಿ: ಸಂಗೀತಕ್ಕೆ ವ್ಯಕ್ತಿಯನ್ನು ಅಂತರ್ಮುಖೀಗೊಳಿಸುವ ಶಕ್ತಿಯಿದೆ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಜೆ.ಸಿ. ನಗರದ ಎಸ್‌ಜೆಎಂವಿ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಭಾವಗೀತೆ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಂಗೀತಕ್ಕೆ ಅಗಾಧ ಸಾಮರ್ಥ್ಯವಿದೆ. ಸಂಗೀತ ಸಾಧನೆಯಿಂದಲೇ ಹಿಂದೆ ಹಲವರು ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ ಎಂದರು. ಸಂಗೀತದಲ್ಲಿ ಆಸಕ್ತಿ ಇಲ್ಲದಿದ್ದವರು ಮತಿಭ್ರಮಣೆಗೊಳಗಾಗಿರಬೇಕು ಇಲ್ಲವೇ ಪಶುವಾಗಿರಬೇಕು ಎಂದು ಸಂಸ್ಕೃತ ಶ್ಲೋಕವೊಂದರಲ್ಲಿ ಉಲ್ಲೇಖೀಸಲಾಗಿದೆ.
ಸಂಗೀತ ಕೇಳಿದರೆ ಮನಸು ಪ್ರಫುಲ್ಲಗೊಳ್ಳುತ್ತದೆ. ಸಂಗೀತದ ಬಗ್ಗೆ ಜ್ಞಾನವಿಲ್ಲದಿದ್ದರೂ ಕಂದಮ್ಮಗಳು ತಾಯಿ ಹಾಡುವುದನ್ನು ಕೇಳಿ ಮಲಗುತ್ತವೆ. ಸಂಗೀತದಿಂದ ಆಯುಷ್ಯ ಹೆಚ್ಚಾಗುತ್ತದೆ. ಗಿಡ-ಬಳ್ಳಿಗಳು ಹೂವು ಬಿಡುತ್ತವೆ. ಆದರೆ ಅವುಗಳ ಕಂಪು ಎಲ್ಲೆಡೆ ಪಸರಿಸಲು ಗಾಳಿ ಅವಶ್ಯ. ಅದೇ ರೀತಿ ಕವಿಗಳು ಕಾವ್ಯ ರಚನೆ ಮಾಡುತ್ತಾರೆ.
ಆದರೆ ಕಾವ್ಯದ ಮಹತ್ವ ತಿಳಿಸಿಕೊಡಲು ಗಾಯಕರ ಅವಶ್ಯಕತೆಯಿದೆ ಎಂದು ಹೇಳಿದರು. ಹಾನಗಲ್ಲ ಕುಮಾರಸ್ವಾಮಿಗಳು ಪಂಚಾಕ್ಷರಿ ಗವಾಯಿಗಳಿಗೆ ಸಂಗೀತ ತರಬೇತಿ ನೀಡಿ ದೊಡ್ಡ ಸಂಗೀತಗಾರರನ್ನಾಗಿ ಮಾಡಿದರು. ಮುಂದೆ ಪಂಚಾಕ್ಷರಿ ಗವಾಯಿಗಳು ಸುಮಾರು 10,000 ಶಿಷ್ಯರನ್ನು ಬೆಳೆಸಿ ದೊಡ್ಡ ಗಾಯಕರನ್ನಾಗಿ ರೂಪಿಸಿದರು ಎಂದರು.
ಪ್ರಸಿದ್ಧಿಗಿಂತ ಸಿದ್ಧಿ ಮುಖ್ಯ: ಸ್ಪರ್ಧೆಗೆ ಚಾಲನೆ ನೀಡಿದ ಪಂ| ಶ್ರೀಪಾದ ಹೆಗಡೆ ಮಾತನಾಡಿ, ಯುವ ಸಂಗೀತಗಾರರಿಗೆ ಪ್ರಸಿದ್ಧಿಯ ಹುಚ್ಚು ಹಿಡಿದಿದೆ. ಪ್ರಸಿದ್ಧಿಗಿಂತ ಸಿದ್ಧಿ ಮುಖ್ಯ. ಸಿದ್ಧಿಸಿಕೊಂಡರೆ ಪ್ರಸಿದ್ಧಿ ತಾನಾಗಿಯೇ ಬರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. 4-5 ದಶಕಗಳ ಹಿಂದೆ ಅವಕಾಶಗಳಿರಲಿಲ್ಲ. ಈಗಿನ ಯುವಕರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಮೊದಲು ಸಂಗೀತದ ಅಭ್ಯಾಸ ಮಾಡಿದ ನಂತರ ಸ್ಪರ್ಧೆಗಳಿಗೆ ಹೋಗುವುದು ಒಳಿತು ಎಂದರು.
ಮೂರುಸಾವಿರ ಮಠದ ಗೌರವಾಧ್ಯಕ್ಷ ಅರವಿಂದ ಕುಬಸದ ಮಾತನಾಡಿದರು. ಡಾ| ಸುಲಭಾ ದತ್ತ ನೀರಲಗಿ, ಹನುಮಂತ ಶಿಗ್ಗಾಂವಿ ಇದ್ದರು. ಸ್ಪರ್ಧೆಯ ನಿರ್ಣಾಯಕರಾಗಿ ಪಂ| ವಾದಿರಾಜ ನಿಂಬರಗಿ, ಪಂ| ಅಶೋಕ ನಾಡಿಗೇರ, ಪಂ| ಶ್ರೀನಿವಾಸ ಜೋಶಿ, ಡಾ| ಗಾಯತ್ರಿ ದೇಶಪಾಂಡೆ, ಡಾ| ವಿದ್ಯಾ ಕವಠೇಕರ, ವಿನಯಶ್ರೀ ಕೂಡಲಗಿ, ವೀಣಾ ಬಡಿಗೇರ, ಅನಿತಾ ಶೆಟ್ಟರ ಆಗಮಿಸಿದ್ದರು.