Advertisement
ಭಾರತೀಯ ನಾಯಿ ತಳಿಗಳಲ್ಲಿ ಅತಿ ಹೆಚ್ಚಿನ ಖ್ಯಾತಿ ಹೊಂದಿರುವ, ಈಚೆಗೆ ತಾನೆ ಸೇನಾ ಪಡೆ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿರುವ ಮುಧೋಳ್ ನಾಯಿಯಿಂದ ಹಿಡಿದು ಅತಿ ದುಬಾರಿ ಬೆಲೆಯ ವಿದೇಶಿ ತಳಿಗಳು ಗತ್ತು, ಗಮ್ಮತ್ತಿನ ಪ್ರದರ್ಶನ ನೀಡಿದವು.ಸೈಬಿರಿಯಾದ ಹಿಮ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ, ಭಾರತೀಯ ತಳಿಗಳ ನಾಯಿಗಿಂತಲೂ ನಾಲ್ಕು ಪಟ್ಟು ಶಕ್ತಿ, ಓಟದ ಸಾಮರ್ಥ್ಯ ಹೊಂದಿರುವ ಸೈಬೇರಿಯನ್ ಹಸ್ಕಿ, ಜರ್ಮನಿಯಲ್ಲಿ ಅತಿ ಹೆಚ್ಚಾಗಿ ಕುರಿಗಾಹಿಗಳು ಸಾಕುವ, ನಾಯಿ ಸಾಕಬೇಕು ಎಂದಾಗ ಥಟ್ಟನೆ ನೆನಪಿಗೆ ಬರುವ ಜರ್ಮನ್ ಶೆಫರ್ಡ್, ಚೀನಾದ ಚೌಚೌ, ಥೈಲ್ಯಾಂಡ್ ತಳಿ ಅಕಿಡಾ… ಹೀಗೆ ವಿವಿಧ ತಳಿಯ ನಾಯಿಗಳು ಎಲ್ಲರ ಗಮನ ಸೆಳೆದವು.
Related Articles
Advertisement
ಹೊಸಪೇಟೆ ಸಮೀಪದ ಮರಿಯಮ್ಮನಹಳ್ಳಿಯ ತರಬೇತುದಾರ ರಹಮಾನ್ ತರಬೇತಿಯಲ್ಲಿ ಪಳಗಿ ಈಗಾಗಲೇ 2 ಬಾರಿ ಚಾಂಪಿಯನ್ ಆಗಿ ಆಲ್ ಇಂಡಿಯಾ ಚಾಂಪಿಯನ್‌ಶಿಪ್‌ಗೆ ಸಿದ್ಧವಾಗಿರುವ ಸೈಬಿರಿಯನ್ ಹಸ್ಕಿ… ಪ್ರದರ್ಶನ ಗಮನ ಸೆಳೆಯುವಂತಿತ್ತು.
ಪ್ರಾರಂಭಿಕ ಹಂತದಲ್ಲಿ ನಾಯಿಗಳ ಬಗ್ಗೆ ಸಾಕಷ್ಟು ಕ್ರೇಜ್ ಇತ್ತು. ನಾಯಿಗಳ ಸಾಕಲಾರಂಭಿಸಿ, ಈ ರೀತಿಯ ಪ್ರದರ್ಶನದಲ್ಲಿ ಭಾಗವಹಿಸಲಾರಂಭಿಸಿದ ನಂತರ ಆಸಕ್ತಿ ಹೆಚ್ಚಾಯಿತು. ಕರ್ನಾಟಕ ಕೆನಲ್ ಕ್ಲಬ್ ಆಯೋಜಿಸಿರುವ ಸ್ಪರ್ಧೆಯಲ್ಲಿ ಸೈಬಿರಿಯನ್ ಹಸ್ಕಿ…ಎರಡು ಬಾರಿ ಚಾಂಪಿಯನ್ ಆಗಿದೆ.
ಇನ್ನೊಂದು ಬಾರಿ ಚಾಂಪಿಯನ್‌ಶಿಪ್ ಪಡೆದರೆ ಆಲ್ ಇಂಡಿಯಾ ಚಾಂಪಿಯನ್ ಆಗುತ್ತದೆ. ಈಗ ನಾಯಿಗಳ ಬಗೆಗಿನ ಕ್ರೇಜ್ ಮತ್ತು ಬ್ಯುಸಿನೆಸ್ ಕಾಂಬಿನೇಷನ್ ಚೆನ್ನಾಗಿ ಇರುವ ಕಾರಣಕ್ಕೆ 15ಕ್ಕೂ ಹೆಚ್ಚು ತಳಿಯ ನಾಯಿ ಸಾಕುತ್ತಿದ್ದೇನೆ ಎಂದು ರಹಮಾನ್ ತಿಳಿಸಿದರು.
ಇಷ್ಟೊಂದು ವಿವಿಧ ತಳಿಗಳ ನಾಯಿಗಳನ್ನು ಒಂದೇ ಕಡೆ ನೋಡುವುದು, ಅವುಗಳ ಕಾಂಪಿಟೇಷನ್ ಎಲ್ಲವೂ ಸೂಪರ್. ಇವತ್ತು ಭಾನುವಾರದ ರಜೆ ಬೇರೆ. ಶ್ವಾನಗಳ ಪ್ರದರ್ಶನ ಚೆನ್ನಾಗಿದೆ ಎಲ್ಲರೊಂದಿಗೆ ಎಂಜಾಯ್ ಮಾಡುತ್ತಿದ್ದೇವೆ ಎಂದು ದಾವಣಗೆರೆಯ ಮಮತಾ, ವಿದ್ಯಾರ್ಥಿನಿಯರಾದ ರಾಧಿಕಾ, ಭೂಮಿಕಾ ಇತರರು ಸಂತಸ ವ್ಯಕ್ತಪಡಿಸಿದರು.
ಅಂದ ಹಾಗೆ ಪ್ರಥಮ ಸ್ಥಾನಕ್ಕೆ 15 ಸಾವಿರ ನಗದು ಮತ್ತು ಟ್ರೋಫಿ, 2 ನೇ ಬಹುಮಾನವಾಗಿ 10 ಸಾವಿರ ನಗದು, ಟ್ರೋಫಿ, ಮೂರನೇ ಬಹುಮಾನವಾಗಿ 5 ಸಾವಿರ ಮತ್ತು ಟ್ರೋಫಿ, ದೇಶಿಯ ತಳಿಗಳಲ್ಲಿ ಪ್ರಥಮ ಸ್ಥಾನಕ್ಕೆ 3 ಸಾವಿರ ನಗದು, ಟ್ರೋಫಿ, ಬೆಸ್ಟ್ ಪಪ್ಪಿಗೆ 2 ಸಾವಿರ ನಗದು, ಟ್ರೋಫಿ, ಬೆಸ್ಟ್ ಜ್ಯೂನಿಯರ್ ಹ್ಯಾಂಡ್ಲರ್‌ಗೆ ಆಕರ್ಷಕ ಬಹುಮಾನ ನೀಡಲಾಯಿತು. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಭದ್ರಾವತಿ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಪೂನಾ, ತಮಿಳುನಾಡು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ 350ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿದ್ದವು. ದೇಶಿಯ ತಳಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು.
ದಾವಣಗೆರೆ: ನಿಯತ್ತಿನ ಪ್ರಾಣಿಯಾದ ಶ್ವಾನವನ್ನು ಇತ್ತೀಚಿನ ದಿನಗಳಲ್ಲಿ ಜನರು ಪ್ರೀತಿ, ಗೌರವದಿಂದ ಕಾಣುವುದು, ಸಾಕುವುದು ಹೆಚ್ಚಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಹೈಸ್ಕೂಲ್ ಮೈದಾನದ ಬಾಸ್ಕೆಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ದಾವಣಗೆರೆ ಪೆಟ್ ಲವರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 4ನೇ ವರ್ಷದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಪಾರ ಬುದ್ಧಿವಂತಿಕೆ ಇರುವ ಮನುಷ್ಯರೇ ಇಂದು ದುರಾಸೆಗೆ ಬಲಿಯಾಗಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಆದರೆ, ಶ್ವಾನಗಳು ಜನರ ವಿಶ್ವಾಸ, ಗೌರವ ನಿಯತ್ತನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತವೆ. ಹಾಗಾಗಿ ಶ್ವಾನ ನಂಬಿಕೆಗೆ ಅರ್ಹ ಪ್ರಾಣಿಯಾಗಿದೆ ಎಂದರು.
ಶ್ವಾನಗಳು ಮನೆಗಳಲ್ಲಿ ತನ್ನ ಒಡೆಯನ ಸ್ವತ್ತನ್ನು ರಕ್ಷಿಸುವ ಕೆಲಸ ಮಾಡುತ್ತಿವೆ. ಜೊತೆಗೆ ಹಲವಾರು ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯ ಶ್ವಾನದಳದಲ್ಲೂ ಅತ್ಯಂತ ಕ್ಷಿಪ್ರ ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಶ್ವಾನಗಳಲ್ಲಿ ನೂರಾರು ರೀತಿಯ ತಳಿಗಳಿದ್ದು, ಅವುಗಳಿಗೆ ಸರಿಯಾದಂತಹ ಆಹಾರ, ಮೆಡಿಸಿನ್ ನೀಡಿ ಪೋಷಣೆ ಮಾಡಬೇಕಾಗುತ್ತದೆ. ಅಂತಹ ಕೆಲಸವನ್ನು ಶ್ವಾನ ಸಾಕುವವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಕುಟುಂಬದ ಸದಸ್ಯರಂತೆ ಶ್ವಾನಗಳ ಪೋಷಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ, ಸ್ಪರ್ಧೆಗಳು ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಮಹಾನಗರಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಈ ಹಿಂದೆ ಶ್ವಾನ ಪ್ರದರ್ಶನ ಕೇವಲ ಬೆಂಗಳೂರು, ಮೈಸೂರಿಗೆ ಮಾತ್ರ ಸೀಮಿತವಾಗುತ್ತಿದ್ದವು. ಆದರೀಗ ದಾವಣಗೆರೆಯಲ್ಲಿ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಶ್ವಾನಗಳನ್ನು ಜನರು ಸಾಕುವುದರಿಂದ ಕಳ್ಳರು ಮನೆಯೊಳಗೆ ನುಗ್ಗಲು ಸಾಧ್ಯವಿರಲ್ಲ. ಜೊತೆಗೆ ಮಕ್ಕಳಿಗೂ ಕೂಡ ಸಂತೋಷದಿಂದ ಕಾಲ ಕಳೆಯಲು ಅನುಕೂಲ ಆಗುತ್ತದೆ. ದಾವಣಗೆರೆಯಲ್ಲಿ ಶ್ವಾನಗಳ ತರಬೇತಿದಾರರು ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬೇಕಿದೆ. ಜೊತೆಗೆ ಶ್ವಾನಗಳ ನೈಜ ತಳಿಯನ್ನು ಕ್ರಾಸ್ ತಳಿಯಾಗಿ ಪರಿವರ್ತನೆ ಮಾಡದೇ, ನೈಜ ತಳಿ ಉಳಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.ಅಸೋಸಿಯೇಷನ್ ಅಧ್ಯಕ್ಷ ನಲ್ಲೂರು ರಾಘವೇಂದ್ರ, ಶ್ವಾನ ತರಬೇತುದಾರ ಮನೋಜ್, ಮಂಜುನಾಥ್, ಗೋಪಿನಾಥ್, ಸಚಿನ್, ಲಿಂಗರಾಜ್ ಇತರರಿದ್ದರು.