ಬೆಂಗಳೂರು: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷವು ಭಾರೀ ಮುನ್ನಡೆ ಸಾಧಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲು ಯೋಗಿ ಆದಿತ್ಯನಾಥ್ ಮುಂದಾಗಿದ್ದಾರೆ.
1985ರ ಬಳಿಕ ಇದೇ ಮೊದಲ ಬಾರಿಗೆ ಆಡಳಿತ ಪಕ್ಷ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿದಂತಾಗಿದೆ. ಉತ್ತರ ಪ್ರದೇಶದ 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 260 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಐದು ವರ್ಷಗಳ ಪೂರ್ಣಾವಧಿಯ ಬಳಿಕ ಮತ್ತೆ ಬಿಜೆಪಿ ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೇರಿದಂತಾಗಿದೆ.
ಉತ್ತರ ಪ್ರದೇಶ ಬಿಜೆಪಿಯ ಸಾಧನೆಗೆ ರಾಜ್ಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಕೂ ಮಾಡಿರುವ ವಸತಿ ಸಚಿವ ವಿ.ಸೋಮಣ್ಣ, ಸಮಸ್ತ ಹಿಂದೂ ರಾಷ್ಟ್ರೋತ್ಥಾನಕ್ಕಾಗಿ ಉದಯಿಸಿ ಬಂದ ಕೇಸರಿ ಯೋಗಿ ಆದಿತ್ಯನಾಥ್. ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯುವ ಹೊಸ್ತಿಲಲ್ಲಿರುವ ಯೋಗಿ ಶ್ರೀ ಆದಿತ್ಯನಾಥ್ ಅವರ ಅತ್ಯದ್ಭುತ ಕಾರ್ಯವೈಖರಿ ವಿಶ್ವಕ್ಕೇ ಮಾದರಿ” ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ:ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ : ರಾಹುಲ್ ಗಾಂಧಿ
ಬಿಜೆಪಿ ಇತಿಹಾಸ ಬರೆದಿದೆ. ಬಿಜೆಪಿಯನ್ನು ಐತಿಹಾಸಿಕ ವಿಜಯದೊಂದಿಗೆ ಆಶೀರ್ವದಿಸಿದ ಮತ್ತು ಮೋದಿ-ಯೋಗಿ ಸರ್ಕಾರದ ಮೇಲಿನ ನಂಬಿಕೆಯನ್ನು ಪುನರುಚ್ಚರಿಸಿದ್ದಕ್ಕಾಗಿ ನಾನು ಉತ್ತರ ಪ್ರದೇಶದ ಜನರಿಗೆ ನಮಸ್ಕರಿಸುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉತ್ತರ ಪ್ರದೇಶದ ಇತಿಹಾಸದಲ್ಲೇ ಮೊದಲ ಬಾರಿ 5 ವರ್ಷ ಅವಧಿ ಪೂರ್ಣಗೊಳಿಸಿ ಎರಡನೇಬಾರಿಗೆ ಬಹುಮತದೊಂದಿಗೆ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರಿಗೆ ಅಭಿನಂದನೆಗಳು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಪೋಸ್ಟ್ ಮಾಡಿದ್ದಾರೆ.