ಧಾರವಾಡ: ರಾಜ್ಯದ ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಚುನಾವಣಾ ಪ್ರಚಾರದ ಕಚೇರಿಯನ್ನು ನಗರದ ಉಳವಿ ಶ್ರೀ ಚನ್ನಬಸವೇಶ್ವರ ವೃತ್ತದ ಬಳಿಯ ಕಟ್ಟಡವೊಂದರಲ್ಲಿ ರವಿವಾರದಿಂದ ಆರಂಭಿಸಲಾಗಿದೆ.
ನೂತನ ಕಚೇರಿ ಉದ್ಘಾಟಿಸಿದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಹೊರಟ್ಟಿ ಅವರ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಶಿಕ್ಷಕರ ಆಶಯದಂತೆ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕ್ಷೇತ್ರದ ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸಬೇಕು. ಜತೆಗೆ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಬೇಕು ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಲ್ಲದ, ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರ ಸ್ಪರ್ಧೆ ಬಹುತೇಕ ಖಚಿತ. ಹೊರಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಂಡಿದ್ದು, ಪ್ರಕಟಣೆ ಹೊರಡಿಸುವುದು ಮಾತ್ರ ಬಾಕಿ ಇದೆ ಎಂದು ಹೇಳಿದರು.
ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಹಾಗೂ ಕೇಂದ್ರ ಗೃಹ ಸಚಿವರಿಗೆ ಭೇಟಿ ಮಾಡಿದ್ದಾರೆ. ಅವರ ಆಣತಿಯ ಮೇರೆಗೆ ಹೊರಟ್ಟಿ ಅವರು ವಿಧಾನ ಪರಿಷತ್ ಚುನಾವಣೆ ತಯಾರಿ ಕೈಗೊಂಡಿದ್ದಾರೆ, ಮೋಹನ ಲಿಂಬಿಕಾಯಿ ಅವರು ಮೊದಲಿಂದಲೂ ಬಿಜೆಪಿ ಟಿಕೆಟ್ ಆಕಾಂಕ್ಷಿ. ಯಾವುದೇ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುವ ಮೊದಲು ಪೂರ್ವತಯಾರಿ ನಡೆಸುವುದು ಸಾಮಾನ್ಯ. ಅದರಂತೆ ಲಿಂಬಿಕಾಯಿ ಅವರು ಕೂಡ ನಡೆಸಿದ್ದಾರೆ. ಪಕ್ಷದ ಟಿಕೆಟ್ ಸಿಗುವ ಬಗ್ಗೆ ನಾನೇನು ಹೇಳಲಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Related Articles
ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಚುನಾವಣೆ ಎಂದಾಕ್ಷಣ ಎಲ್ಲರಿಗೂ ಕಷ್ಟವೇ. ಒತ್ತಡ ಇರುವುದು ಸಾಮಾನ್ಯ. ಈ ಚುನಾವಣೆಯಲ್ಲಿ ಗೆಲುವು ಖಚಿತವಾಗಿದ್ದು, ಶಿಕ್ಷಕರ ಪರ ಕೆಲಸ ಮಾಡುತ್ತೇನೆ. ಮೇ 26ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ಮೋಹನ ರಾಮದುರ್ಗ, ಕಲ್ಮೇಶ ಹಾವೇರಿಪೇಟ್, ಶಂಕರ ಮುಗದ, ಜಿ.ಆರ್. ಭಟ್ ಇನ್ನಿತರರಿದ್ದರು.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಾನೆ. ಮೋಹನ್ ಲಿಂಬಿಕಾಯಿ ಸ್ಪರ್ಧೆ ಬಗ್ಗೆ ಗೊತ್ತಿಲ್ಲ. ಬಿಜೆಪಿ ವರಿಷ್ಠರು ನಾನೇ ಅಭ್ಯರ್ಥಿ ಎಂದು ಮೌಖೀಕವಾಗಿ ಹೇಳಿದ ಹಿನ್ನೆಲೆಯಲ್ಲಿ ಚುನಾವಣಾ ತಯಾರಿ ನಡೆಸಿದ್ದೇನೆ. ರಾಜ್ಯಮಟ್ಟದ ನಾಯಕರು ಬಿಜೆಪಿ ಅಭ್ಯರ್ಥಿ ಅಂತಲೇ ನನ್ನನ್ನು ಕರೆತಂದಿದ್ದಾರೆ. ಪಕ್ಷದ ಸಿದ್ಧಾಂತ, ನಿಯಮಗಳ ಪ್ರಕಾರ ನಡೆಯುತ್ತೇನೆ. ಪಕ್ಷದಲ್ಲಿ ಕಷ್ಟ ಎನಿಸಿದರೆ ಮುಂದೆ ಚಿಂತನೆ ಮಾಡುತ್ತೇನೆ. –ಬಸವರಾಜ ಹೊರಟ್ಟಿ