Advertisement

ನಿಗೂಢವಾಗಿ ಉಳಿದ ಸಂಪುಟ ರಚನೆ

11:26 AM Aug 20, 2019 | Sriram |

ಬೆಂಗಳೂರು: ಬಿಜೆಪಿ ಸರಕಾರ ನೂತನ ಸಚಿವ ಸಂಪುಟ ರಚನೆಯ ಕಸರತ್ತು ರವಿವಾರವೂ ಅಪೂರ್ಣ ಗೊಂಡಿದ್ದು, ಕೇಂದ್ರದ ಒಪ್ಪಿತ ಪಟ್ಟಿಗಾಗಿ ರಾಜ್ಯ ನಾಯಕರು ಕಾದುಕುಳಿತಿದ್ದಾರೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ, ತಾವು ಸಿದ್ಧಪಡಿಸಿದ್ದ ಪಟ್ಟಿಯನ್ನು ನೀಡಿದ್ದಾರೆ. ಹಾಗೆಯೇ ಕೇಂದ್ರದ ನಾಯಕರು ಇನ್ನೊಂದು ಪಟ್ಟಿಯನ್ನು ಸಿದ್ಧ ಪಡಿಸಿ ಕೊಂಡಿದ್ದರು. ಈ ಎರಡೂ ಪಟ್ಟಿಗಳನ್ನು ತುಲನಾತ್ಮಕವಾಗಿ ಪರಿಶೀಲಿಸಿ, ಕೆಲವು ಹಿರಿಯರಿಗೆ ಸಚಿವ ಸ್ಥಾನದಿಂದ ಕೊಕ್‌ ನೀಡಿ, ಪಕ್ಷ ಸಂಘಟನೆ ಅಥವಾ ಸರಕಾರದಲ್ಲಿ ಬೇರೆ ಜವಾಬ್ದಾರಿ ನೀಡುವ ಬಗ್ಗೆಯೂ ಕೇಂದ್ರದ ನಾಯಕರು ಚಿಂತನೆ ನಡೆಸಿದ್ದಾರೆ. ಹೀಗಾಗಿ ರವಿವಾರ ಸಂಜೆಯೊಳಗೆ ಬರಬೇಕಿದ್ದ ಪಟ್ಟಿ ವಿಳಂಬವಾಗಿ ಬರುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರಕಾರ ಮತ್ತು ಪೂರ್ಣಪ್ರಮಾಣದ ಬಿಜೆಪಿ ಸರಕಾರದ ಎರಡೂ ಸಂದರ್ಭಗಳಲ್ಲಿ ಸಚಿವರಾಗಿ ಅಥವಾ ಸರಕಾರದ ಉನ್ನತ ಅಧಿಕಾರ ಅನುಭವಿಸಿರುವ ಹಲವು ಹಿರಿಯರು ಈ ಬಾರಿ ಹುದ್ದೆ ವಂಚಿತರಾಗುವ ಸೂಚನೆಗಳಿವೆ. ಬಿಜೆಪಿ ಅವಧಿಯಲ್ಲಿ ಮುಖ್ಯ ಮಂತ್ರಿಯೂ ಆಗಿದ್ದ ಜಗದೀಶ ಶೆಟ್ಟರ್‌, ಡಿಸಿಎಂಗಳಾಗಿದ್ದ ಕೆ.ಎಸ್‌. ಈಶ್ವರಪ್ಪ, ಆರ್‌. ಅಶೋಕ್‌ ಸಹಿತ ಕೆಲವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಬಗ್ಗೆ ಅನುಮಾನ ವ್ಯಕ್ತವಾಗಿವೆ. ಆದರೆ ಹೈಕಮಾಂಡ್‌ ನಿರ್ಧಾರವೇ ಅಂತಿಮವಾಗಲಿದೆ ಎಂದು ಮೂಲಗಳು ಹೇಳಿವೆ. ಒಟ್ಟಾರೆಯಾಗಿ ಅನರ್ಹ ಶಾಸಕರನ್ನು ಗಮನದಲಿಟ್ಟು ಕೊಂಡೇ ಸಂಪುಟ ರಚನೆಯಾಗಲಿದೆ ಎನ್ನಲಾಗಿದೆ.

ಸಂಭಾವ್ಯ ಸಚಿವರು
ಜೆ.ಸಿ. ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಎ.ಎಸ್‌. ರಾಮದಾಸ್‌, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ, ಕೊಡಗು ಸಹಿತವಾಗಿ ಕರಾವಳಿ ಭಾಗದಲ್ಲಿ ಎಸ್‌. ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್‌ ಕುಮಾರ್‌, ವೇದವ್ಯಾಸ ಕಾಮತ್‌, ಅಪ್ಪಚ್ಚು ರಂಜನ್‌ ಅಥವಾ ಬೋಪಯ್ಯ ಮೊದಲಾದವರ ಹೆಸರುಗಳು ಮೇಲ್ನೋಟಕ್ಕೆ ಕೇಳಿ ಬರುತ್ತಿವೆ. ಇದರ ಜತೆಗೆ ಯುವ ಶಾಸಕರಲ್ಲಿ ಒಬ್ಬರು ಅಥವಾ ಇಬ್ಬರಿಗೆ ಅವಕಾಶ ಹೆಚ್ಚಿದೆ ಎಂದು ಹೇಳಾಗುತ್ತಿದೆ.ವಿಧಾನ ಪರಿಷತ್‌ನಿಂದ ಎನ್‌.ರವಿಕುಮಾರ್‌ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರ ಹೆಸರು ಕೇಳಿ ಬಂದಿದೆ. ಯಾರಿಗೆ ಸಚಿವ ಸ್ಥಾನ ಪಕ್ಕ ಎಂಬುದು ಇನ್ನು ಕೂಡ ಗುಪ್ತವಾಗಿಯೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next