ರಾಯಚೂರು: ಗ್ರಾಮೀಣ ಭಾಗದ ರಸ್ತೆಗಳು ರ್ವಹಣೆ ಕಾಣದೆ ಹಾಳಾಗುವುದು ಸರ್ವೇ ಸಾಮಾನ್ಯ. ಆದರೆ, ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿಗಳೇ ಹದಗೆಟ್ಟು ಹೋಗಿದ್ದು, ಪ್ರಯಾಣಿಕರ ಜೀವ ಹಿಂಡುತ್ತಿವೆ. ಇದರಿಂದ ಈ ರಸ್ತೆಗಳಲ್ಲಿ ನಿತ್ಯ ಓಡಾಡುವವರಿಗೆ ಯಮಯಾತನೆ ತಪ್ಪದಾಗಿದೆ.
ಜಿಲ್ಲೆಯಲ್ಲಿ ಬರೊಬ್ಬರಿ 850 ಕಿಮೀ ರಾಜ್ಯ ಹೆದ್ದಾರಿ ನಿರ್ಮಿಸಲಾಗಿದೆ. ಅದರಲ್ಲಿ ಕೆಲವೆಡೆ ಮಾತ್ರ ಉತ್ತಮ ರಸ್ತೆ ಇದ್ದರೆ, ಸಾಕಷ್ಟು ಕಡೆ ರಸ್ತೆ ಅಧೋಗತಿಗೆ ತಲುಪಿದೆ. ಕಳೆದ ಎರಡು ವರ್ಷದಿಂದ ನಿರ್ವಹಣೆ ಕಾಣದೆ ಬಹುತೇಕ ಕಡೆ ಸಂಪೂರ್ಣ ಹಾಳಾಗಿದೆ. ಅದರಲ್ಲೂ ಈ ಬಾರಿ ನಿರೀಕ್ಷೆಗಿಂತ ಜಾಸ್ತಿ ಮಳೆ ಸುರಿದು ರಸ್ತೆ ನೋಡಲಾರದ ಸ್ಥಿತಿಗೆ ತಲುಪಿವೆ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಹಾಗೂ ಅನ್ಯ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳೇ ಈ ಸ್ಥಿತಿಗೆ ಬಂದು ತಲುಪಿದೆ.
ಈ ರಸ್ತೆಗಳು ವಾಹನ ಸವಾರರಿಗೆ ಸಂಚಾರಕ್ಕೆ ಅನುಕೂಲವಾಗುವ ಬದಲು ಹೆಮ್ಮಾರಿಯಾಗಿ ಪರಿವರ್ತನೆಯಾಗಿವೆ. ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆದುಕೊಂಡು ಹೋಗುವುದು ಅಪಾಯ ಎನ್ನುವಂತಾಗಿದೆ. ವಯಸ್ಸಿನಲ್ಲಿರುವವರಿಗೆ ಬೆನ್ನು ಮೂಳೆ ಸಡಿಲುವಂತಿದ್ದರೆ, ಇನ್ನೂ ವೃದ್ಧರ ಕತೆ ಹೇಳುವಂತಿಲ್ಲ. ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿ ರಾಯಚೂರು- ಲಿಂಗಸುಗೂರು ಸಂಪೂರ್ಣ ಹದಗೆಟ್ಟಿದೆ. ರಾಯಚೂರು- ಮಾನ್ವಿ ರಸ್ತೆ ಸ್ಥಿತಿಯೂ ಭಿನ್ನವಾಗಿಲ್ಲ. ದೊಡ್ಡ ದೊಡ್ಡ ಗುಂಡಿಗಳು ಏಕಾಏಕಿ ಎದುರಾಗುವುದರಿಂದನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ. ದೊಡ್ಡ ಗುಂಡಿಗಳಲ್ಲಿ ಬಿದ್ದು ವಾಹನಗಳ ಬಿಡಿ ಭಾಗಗಳು ಕಳಚಿ ಬೀಳುತ್ತಿವೆ. ಹಳೇ ವಾಹನಗಳು ಟೈರ್ ಪಂಕ್ಚರ್ ಆಗುತ್ತಿವೆ. ಇನ್ನೂ ದಾರಿ ಕ್ರಮಿಸಲು ಎರಡು ಪಟ್ಟು ಸಮಯ ಹಿಡಿಯುತ್ತಿದ್ದು, ಸವಾರರು ಹಿಡಿ ಶಾಪ ಹಾಕುತ್ತಿದ್ದಾರೆ.
ಸಮನ್ವಯ ಸಮಸ್ಯೆ: ರಸ್ತೆಗಳು ಈ ಮಟ್ಟಕ್ಕೆ ಹಾಳಾಗಲು ಇಲಾಖೆಗಳ ನಡುವಿನ ಸಮನ್ವಯ ಕೊರತೆ ಕಾರಣ ಎಂಬುದು ಅಧಿ ಕಾರಿಗಳ ಸಮಜಾಯಿಷಿ. ಹೆದ್ದಾರಿ ಪ್ರಾಧಿ ಕಾರ ಎರಡು ವರ್ಷದ ಹಿಂದೆ ರಾಜ್ಯ ಹೆದ್ದಾರಿಗಳನ್ನು ನಿರ್ವಹಿಸುವುದಾಗಿ ತಿಳಿಸಿತ್ತು. ಇದರಿಂದ ಲೋಕೋಪಯೋಗಿ ಇಲಾಖೆ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಆದರೆ, ಹೆದ್ದಾರಿ ಪ್ರಾ ಧಿಕಾರ ಕೂಡ ದುರಸ್ತಿ ಮಾಡದ ಕಾರಣ ರಸ್ತೆಗಳು ಹದಗೆಟ್ಟಿವೆ. ಸರ್ಕಾರ ಕೂಡ ರಸ್ತೆ ನಿರ್ವಹಣೆಗೆ ಕಿಮೀ ಒಂದು ಲಕ್ಷ ರೂ. ನೀಡುತ್ತಿದ್ದು, ಇದು ಸಾಲುತ್ತಿಲ್ಲ. ಜಿಲ್ಲೆಯ ರಸ್ತೆಗಳು ಸಂಪೂರ್ಣ ಹದಗೆಟ್ಟ ಕಾರಣ ವಿಶೇಷ ಅನುದಾನ ಕೋರಿ ಪಡೆಯಲಾಗಿದೆ ಎನ್ನುವುದು ಅಧಿಕಾರಿಗಳ ಸಮರ್ಥನೆ.
ರಸ್ತೆಗಳು ಮೇಲ್ದರ್ಜೆಗ : ಇಲ್ಲಿ ಅಕ್ಷರಶಃ ಅನ್ವಯಿಸಿದೆ. ಇರುವ ರಸ್ತೆಗಳ ದುಸ್ಥಿತಿಯಲ್ಲಿದ್ದರೆ, ಸರ್ಕಾರ ಜಿಲ್ಲೆಯ ಏಳು ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ಮುಂದಾಗಿದೆ. 7 ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮಾಡಲಾಗುತ್ತಿದೆ. ರಾಯಚೂರು-ಶಕ್ತಿನಗರ, ರಾಯಚೂರು- ಸಿಂಗನೋಡಿ, ರಾಯಚೂರು- ಬೂರ್ದಿಪಾಡ, ಯರಡೋಣ-ನವಲಕಲ್, ಸಿರವಾರ- ಮಾನ್ವಿ, ಮಸ್ಕಿ-ಜವಳಗೇರಾ, ಯರಡೋಣ -ನವಲಕಲ್‌ನ 268 ಕಿ.ಮೀ. ರಸ್ತೆ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಆದರೆ, ಮೊದಲು ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಿ ನಂತರ ಉಳಿದ ರಸ್ತೆ ಅಭಿವೃದ್ಧಿ ಮಾಡಲಿ ಎಂದು ತಾಕೀತು ಮಾಡುತ್ತಾರೆ ಸಾರ್ವಜನಿಕರು.
ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿಗಳ ನಿರ್ವಹಣೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಐದು ಕಿಮೀ ಮರು ನಿರ್ಮಾಣ ಮಾಡಿ, ಉಳಿದ ರಸ್ತೆ ನಿರ್ವಹಣೆ ಮಾಡಲಾಗುವುದು. ಬಿಟ್ಟು ಬಿಡದೆ ಮಳೆ ಸುರಿದ ಪರಿಣಾಮ ದುರಸ್ತಿ ಕಾರ್ಯ ವಿಳಂಬವಾಗಿದೆ. ಈಗಾಗಲೇ ಕೆಲಸ ಆರಂಭಿಸಿದ್ದು, ಒಂದು ತಿಂಗಳಲ್ಲಿ ಹೆದ್ದಾರಿಗಳ ದುರಸ್ತಿ ಮಾಡಿಸಲಾಗುವುದು. ಈ ಬಾರಿ ಸರ್ಕಾರ ಅನುದಾನ ನೀಡದ ಕಾರಣ ವಿಶೇಷ ಅನುದಾನ ಕೋರಿ ಪಡೆಯಲಾಗಿದೆ.
–ಚನ್ನಬಸಪ್ಪ ಮೆಕಾಲೆ, ಇಇ, ಪಿಡಬ್ಲ್ಯುಡಿ, ರಾಯಚೂರು.
–ಸಿದ್ದಯ್ಯಸ್ವಾಮಿ ಕುಕುನೂರ