Advertisement
ರಾಜ್ಯ ಹೈಕೋರ್ಟ್‌ನಲ್ಲೂ ಖಾಲಿಯಾದ ನ್ಯಾಯಮೂರ್ತಿಗಳ ಸ್ಥಾನಕ್ಕೆ ನೇಮಕ ಪ್ರಕ್ರಿಯೆ ನಡೆಯದಿರುವುದರಿಂದ ಮುಖ್ಯನ್ಯಾಯಮೂರ್ತಿ ಹುದ್ದೆಯೂ ಸೇರಿ ಒಟ್ಟು 37 ನ್ಯಾಯಮೂರ್ತಿಗಳ ಸ್ಥಾನ ಖಾಲಿ ಉಳಿದುಕೊಂಡಿವೆ. ಅಂದರೆ, ಶೇ. 50 ಕ್ಕಿಂತಲೂ ಹೆಚ್ಚು ಹುದ್ದೆಗಳು ಭರ್ತಿಯಾಗದೇ ಉಳಿದಿವೆ. ಹಾಲಿ 25 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಬೆಂಗಳೂರು ಪೀಠದಲ್ಲಿ 17 ಮಂದಿ ನ್ಯಾಯಮೂರ್ತಿಗಳು, ಧಾರವಾಡದಲ್ಲಿ ಐದು ಹಾಗೂ ಕಲಬುರಗಿಯಲ್ಲಿ ಮೂರು ಪೀಠಗಳು ಮಾತ್ರ ಕಾರ್ಯನಿರ್ವಹಣೆಯಲ್ಲಿವೆ.
ನಿರ್ವಹಿಸುತ್ತಿದ್ದಾರೆ.2008ರಲ್ಲಿ ಅಸ್ಥಿತ್ವಕ್ಕೆ ಬಂದ ಎರಡೂ ಸಂಚಾರಿ ಪೀಠಗಳಲ್ಲಿ ತಲಾ 10 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾದರೂ, ಇದುವರೆಗೂ ಒಮ್ಮೆಯೂ ಹತ್ತು ನ್ಯಾಯಮೂರ್ತಿಗಳ ಸ್ಥಾನ ಭರ್ತಿಯಾಗಿಲ್ಲ. ನ್ಯಾಯಮೂರ್ತಿಗಳ ನೇಮಕ ವಿಳಂಬದಿಂದ ಲಕ್ಷಾಂತರ ಕೇಸುಗಳು ವಿಚಾರಣೆಯಲ್ಲಿ ಬಾಕಿ ಉಳಿದುಕೊಂಡಿವೆ.
ಖಾಲಿಯಿರುವ ನ್ಯಾಯಮೂರ್ತಿಗಳ ನೇಮಕಾತಿ ಮಾಡುವಂತೆ ಬೆಂಗಳೂರು ವಕೀಲರ ಸಂಘದಿಂದ ಕೊಲಿಜಿಯಂ ಹಾಗು ಸುಪ್ರೀಂಕೋರ್ಟ್‌ಗೆ ಪತ್ರ ಬರೆಯಲಾಗಿದೆ. ನ್ಯಾಯಮೂರ್ತಿಗಳ ಹುದ್ದೆ ಭರ್ತಿಯಾಗದಿರುದರಿಂದ ಸ್ವತ: ಹಾಲಿ ನ್ಯಾಯಮೂರ್ತಿಗಳೇ ಕೇಸುಗಳ ವಿಚಾರಣೆ ವೇಳೆ ಹಲವು ಬಾರಿ ಅಸಮಾಧಾನವ್ಯಕ್ತಪಡಿಸಿದ ನಿದರ್ಶನಗಳಿವೆ.
Related Articles
ಇನ್ನು ರಾಜ್ಯ ಹೈಕೋರ್ಟ್‌ನ ಮೂರು ಪೀಠಗಳಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ಕೇಸುಗಳು ಸೇರಿದಂತೆ ಒಟ್ಟು 2.5ಲಕ್ಷಕ್ಕಿಂತ ಅಧಿಕ ಕೇಸುಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿವೆ. ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯೂ ಹೆಚ್ಚಿದೆ. ಪರಿಣಾಮ ಹಾಲಿ ಕಾರ್ಯನಿರ್ವಹಿಸುತ್ತಿರುವ 25 ನ್ಯಾಯಮೂರ್ತಿಗಳ ಮೇಲೆ ಕಾರ್ಯಭಾರ ಹೆಚ್ಚಾಗುತ್ತಿದೆ. ನಿಗದಿತ ಸಮಯದಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಸ್ಥಾನವನ್ನು ಭರ್ತಿ ಮಾಡದಿರುವುದರಿಂದ ಕೇಸುಗಳು ಇತ್ಯರ್ಥವಾಗಲು ವರ್ಷಾನುಗಟ್ಟಲೇ ಕಾಯಬೇಕಾಗಿದೆ. ಅಲ್ಲದೆ ಕಕ್ಷಿದಾರರಿಗೂ ತೊಂದರೆಯುಂಟಾಗುತ್ತಿದೆ ಎಂದು ಹೈಕೋರ್ಟ್ ಹಿರಿಯ ವಕೀಲರೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
Advertisement
ಕೇಂದ್ರ ಹಾಗೂ ಕೊಲಿಜಿಯಂ ನಡುವಣ ತಿಕ್ಕಾಟವೇನು?ನ್ಯಾಯಮೂರ್ತಿಗಳ ನೇಮಕ, ವರ್ಗಾವಣೆ ಅಧಿಕಾರವನ್ನು ಕೇಂದ್ರಸರ್ಕಾರ ತನ್ನ ಬಿಗಿಮುಷ್ಟಿಯಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದೆ. ಹೀಗಾಗಿ ಕೊಲಿಜಿಯಂಗೆ ಪರ್ಯಾಯವಾಗಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ( ಎನ್‌ಜೆಎಸಿ) ತಿದ್ದುಪಡಿ ಮಸೂದೆಯನ್ನು 2014ರಲ್ಲಿ ಉಭಯ ಸದನಗಳಲ್ಲಿ ಮಂಡಿಸಿ ಬಹುಮತದೊಂದಿಗೆ ಕಾಯಿದೆ ಜಾರಿಗೊಳಿಸಿತ್ತು. ಈ ಮಧ್ಯೆ ಎನ್‌ಜೆಎಸಿ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ಮಾನ್ಯ ಮಾಡಿದ ಅಂದಿನ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪೂರ್ಣ ಪೀಠ, ಎನ್‌ಜೆಎಸಿ ಕಾಯಿದೆ ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟು ಕಾಯಿದೆ ರದ್ದುಗೊಳಿಸಿ 2015ರ ಅಕ್ಟೋಬರ್‌ನಲ್ಲಿ ತೀರ್ಪು ನೀಡಿತ್ತು. ಈ ವೇಳೆ ಅಗತ್ಯವಿದ್ದರೆ ಕೇಂದ್ರಸರ್ಕಾರ ನ್ಯಾಯಮೂರ್ತಿಗಳ ನೇಮಕಾತಿಗೆ ಮಾರ್ಗಸೂಚಿ ರಚಿಸಿಕೊಳ್ಳಬಹುದು ಎಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೂ ಮುನ್ನ ( ನೇಮಕವಾಗಲಿರುವವರ) ಹಿನ್ನೆಲೆ, ಅವರಿಂದ ರಾಷ್ಟ್ರೀಯ ಭದ್ರತೆಗೆ ಹಾನಿಯಾಗಲಿದೆಯೇ? ದೇಶಕ್ಕೆ ತೊಂದರೆಯಿದೆಯೇ? ನೇಮಕಾತಿ ವಿಚಾರದಲ್ಲಿ ಸರ್ಕಾರದ ತೀರ್ಮಾನವೇ ಅಂತಿಮ ತೀರ್ಮಾನ ಎಂಬಿತ್ಯಾದಿ ನಿಯಮಗಳನ್ನು ಸುಪ್ರೀಂಕೋರ್ಟ್ ಮುಂದಿಟ್ಟಿತ್ತು. ಆದರೆ , ನಿಯಮಗಳು ನ್ಯಾಯಾಂಗದೊಳಗಿನ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಸುಪ್ರೀಂಕೋರ್ಟ್ ಒಪ್ಪುತ್ತಿಲ್ಲ. ಇದೇ ವಿಚಾರಕ್ಕೆ ನ್ಯಾಯಮೂರ್ತಿಗಳ ನೇಮಕಾತಿ ನೆನೆಗುದಿಗೆ ಬಿದ್ದಿದೆ ಎಂದು ವಕೀಲರೊಬ್ಬರು ಅಭಿಪ್ರಾಯಪಡುತ್ತಾರೆ. ಎರಡು ಪ್ರತ್ಯೇಕ ಪಿಐಎಲ್!
ಮತ್ತೂಂದೆಡೆ ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಶೀಘ್ರಭರ್ತಿ ಮಾಡಲು ಕೇಂದ್ರಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲಗೌಡ,ವಕೀಲರಾದ ಎಸ್.ಬಸವರಾಜ್, ಬಿ ಎಂ ಆರುಣ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ವಕೀಲರಾದ ಜಿ.ಎನ್ ಮೋಹನ್ ಕುಮಾರ್ ಹಾಗೂ ಜಯಂತ್ ಕೃಷ್ಣ ಬಿ.ಎನ್ ಕೂಡ ಪ್ರತ್ಯೇಕ ಪಿಐಎಲ್ ಸಲ್ಲಿಸಿದ್ದು ಎರಡೂ ಅರ್ಜಿಗಳು ವಿಚಾರಣಾ ಹಂತದಲ್ಲಿವೆ. ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಸ್ಥಾನಗಳನ್ನು ಶೀಘ್ರ ಭರ್ತಿ ಮಾಡುವಂತೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ, ಕೇಂದ್ರಕಾನೂನು ಸಚಿವರು , ಕೊಲಿಜಿಯಂಗೆ ಸಂಘದ ನಿರ್ಣಯದ ಪತ್ರ ಕಳುಹಿಸಿಕೊಡಲಾಗಿದೆ.ಶೀಘ್ರದಲ್ಲಿಯೇ ನ್ಯಾಯಮೂರ್ತಿಗಳನ್ನು ನೇಮಕ ಮಾಡದೇ ಇದ್ದರೂ ಉಪವಾಸ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ತಿಳಿಸಲಾಗಿದೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
– ಎಚ್.ಸಿ ಶಿವರಾಮು,ಅಧ್ಯಕ್ಷರು, ಬೆಂಗಳೂರು ವಕೀಲರ ಸಂಘ – ಮಂಜುನಾಥ್ ಲಘುಮೇನಹಳ್ಳಿ