Advertisement

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

04:12 PM Apr 27, 2024 | Team Udayavani |

ಮುದ್ದೇಬಿಹಾಳ: ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿ, ಪಾಪರ್ ಆಗಿದೆ. ಈ ಸರ್ಕಾರದಿಂದ ಲೂಟಿ ನಡೆಯುತ್ತಿದೆ. ಜನರ ತೆರಿಗೆ ಹಣ ಎಲ್ಲಿ ಹೋಯ್ತು ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದಲ್ಲಿ ಬರಗಾಲವಿದ್ದರೂ ಈ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದೆ ಕೇಂದ್ರವನ್ನು ದೂಷಿಸುತ್ತ ಜನರ ದಾರಿ ತಪ್ಪಿಸುತ್ತಿದೆ ಎಂದು ಹರಿಹಾಯ್ದರು.

Advertisement

ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸಂಘಟಿಸಿದ್ದ ಬಹಿರಂಗ ಪ್ರಚಾರ ಸಭೆಗೂ ಮುನ್ನ ಎಂಜಿವಿಸಿ ಕಾಲೇಜಿನ ಹೆಲಿಪ್ಯಾಡ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಬರಗಾಲ ಬಂದರೆ ಮೊದಲು ನಮ್ಮ ರಾಜ್ಯದ ಪಾಲಿನ ಪರಿಹಾರ ಖರ್ಚು ಮಾಡಿ ಆನಂತರ ಕೇಂದ್ರದಿಂದ ಪರಿಹಾರ ಕೇಳುತ್ತಿದ್ದೆವು. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ಪಾಲನ್ನು ಖರ್ಚು ಮಾಡದೆ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಇದು ರಾಜ್ಯ ಸರ್ಕಾರ ದಿವಾಳಿ, ಪಾಪರ್ ಆಗಿರುವ ಲಕ್ಷಣವಾಗಿದೆ ಎಂದರು.

ಕೇಂದ್ರ ಸರ್ಕಾರ ತನ್ನ ಪಾಲನ್ನು ರಾಜ್ಯಗಳಿಗೆ ಕೊಟ್ಟೇ ಕೊಡುತ್ತದೆ. ಇದರಲ್ಲಿ ಸಂಶಯವಿಲ್ಲ. ಆದರೆ ರಾಜ್ಯದಲ್ಲೀಗ ಬರಗಾಲವಿದೆ. ಕಾಂಗ್ರೆಸ್ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸುವ ಬದಲು ಕೇಂದ್ರವನ್ನು ದೂಷಿಸಿ ಜನರ ದಾರಿ ತಪ್ಪಿಸುತ್ತಿದೆ. ಜನರ ತೆರಿಗೆ ಹಣ ಎಲ್ಲಿ ಹೋಯ್ತು. ಈ ಸರ್ಕಾರದಿಂದ ಲೂಟಿ ನಡೆಯುತ್ತಿದೆ ಎಂದು ಆಪಾದಿಸಿದರು.

Advertisement

ಮಗನಿಗಿಂತ ಜನರು ಮುಖ್ಯ:

ಶಿವಮೊಗ್ಗದಲ್ಲಿ ನನ್ನ ಮಗ ರಾಘವೇಂದ್ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾನೆ. ನಾನು ಅಲ್ಲಿನ ಸಭೆಯಲ್ಲಿದ್ದು ನನ್ನ ಮಗನ ಪರ ಮತ ಕೇಳಿ ಪ್ರಚಾರ ಮಾಡಬೇಕಿತ್ತು. ಆದರೆ ಅದನ್ನು ಬಿಟ್ಟು ದೂರದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳಕ್ಕೆ ಬಂದಿದ್ದೇನೆ. ನನಗೆ ನನ್ನ ಮಗ ಆದ್ಯತೆ ಅಲ್ಲ. ನನಗೆ ನೀವು (ಮತದಾರರು) ಮುಖ್ಯ, ನೀವು ಅಗತ್ಯ ಎಂದು ಹೇಳಿದರು.

ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ನಮ್ಮ ಪಕ್ಷ ಎಲ್ಲ 14 ಸ್ಥಾನಗಳನ್ನು ಗೆಲ್ಲುತ್ತದೆ. ದೇಶಾದ್ಯಂತ ಬಿಜೆಪಿ ಮಿತ್ರಕೂಟ ಎನ್‌ ಡಿ ಎ 400ಕ್ಕೂ ಹೆಚ್ಚು ಸ್ಥಾನ ಗೆದ್ದು ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದು ನಿಶ್ಚಿತ. ಕರ್ನಾಟಕದಿಂದ ನಾವು ಎಲ್ಲ 28 ಸ್ಥಾನ ಗೆದ್ದು ಮೋದಿಯವರಿಗೆ ಕೊಡುಗೆ ನೀಡುತ್ತೇವೆ ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಮಾಜಿ ಎಂಎಲ್ಸಿ ಲೋಕಸಭೆ ಚುನಾವಣೆ ಉಸ್ತುವಾರಿ ಅರುಣ್ ಶಹಾಪುರ ಇನ್ನಿತರ ಗಣ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next