Advertisement

ಉಪಚುನಾವಣೆಯಲ್ಲಿ ಮೈಮರೆತ ಸರ್ಕಾರ ರೈತರನ್ನು ಮರೆತಿದೆ: ಸಿದ್ದರಾಮಯ್ಯ

02:35 PM Oct 26, 2021 | Team Udayavani |

ಬೆಂಗಳೂರು: ರೈತರು ಎದುರಿಸುತ್ತಿರುವ ರಸಗೊಬ್ಬರ ಅಭಾವದ ಸಮಸ್ಯೆ ಕುರಿತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಬಿಜೆಪಿ ಸರ್ಕಾರ ಉಪಚುನಾವಣೆಯಲ್ಲಿ‌ ಮೈಮರೆತಿದ್ದು ರೈತರ ಗೋಳನ್ನು ಕೇಳುವವರು ಇಲ್ಲದಂತಾಗಿದೆ ಎಂದಿದ್ದಾರೆ.

Advertisement

ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಬಿ.ಎಸ್ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿಯಲ್ಲಿ ರಸಗೊಬ್ಬರ ಕೇಳಿದವರಿಗೆ ಗುಂಡು ಹೊಡೆದು ಇಬ್ಬರು ರೈತರನ್ನು ಸಾಯಿಸಿದ್ದರು.  ಈಗಿನ ಸರ್ಕಾರದ ನಿರ್ಲಕ್ಷ ನೋಡಿದರೆ ಬಸವರಾಜ ಬೊಮ್ಮಾಯಿ ಅವರಿಗೂ ಅದೇ ದುರುದ್ದೇಶ ಇದ್ದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಡಿಎಪಿ ಮತ್ತು ಎಂಒಪಿ ರಸಗೊಬ್ಬರ ದಾಸ್ತಾನು 65%ರಿಂದ 75% ರಷ್ಟು ಕಡಿಮೆ ಇದೆ. ಲಭ್ಯವಿರುವ ಅಲ್ಪಪ್ರಮಾಣದ ರಸಗೊಬ್ಬರ ಕೂಡಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಮತ್ತು ಕಸ್ಟಮ್ಸ್ ಸುಂಕ ಹೆಚ್ಚಳ ರಸಗೊಬ್ಬರ ಕೊರತೆಗೆ ಕಾರಣ ಎನ್ನಲಾಗಿದೆ. ಮೂರು ತಿಂಗಳ ಹಿಂದೆಯೇ ಪರಿಸ್ಥಿತಿಯ ಅರಿವಿದ್ದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕೂತಿದ್ದರ ಫಲವನ್ನು ರೈತರು ಅನುಭವಿಸಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಆರೋಗ್ಯ ಇಲಾಖೆ ಕೊಡುಗೆ ಸ್ಮರಣೀಯ: ಶಾಸಕ ತಿಪ್ಪಾರೆಡ್ಡಿ

ಹಿಂಗಾರು ಮತ್ತು‌ ನೀರಾವರಿ ಬೆಳೆಗಳಿಗೆ ರಸಗೊಬ್ಬರದ ತುರ್ತು ಅಗತ್ಯ ಇದೆ. ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ಮೈಮರೆಯದೆ ತಕ್ಷಣ ರಸಗೊಬ್ಬರ ಕೊರತೆ ನೀಗಿಸಲು ಕ್ರಮಕೈಗೊಳ್ಳಬೇಕು. ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಬೇಕು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next