Advertisement
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿರುವುದರಿಂದ ಕೆಲವು ಸಚಿವರಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ.
Related Articles
Advertisement
ಏಳು ಸಚಿವ ಸ್ಥಾನಗಳು ಖಾಲಿಯಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಕರಾವಳಿಯ ಸುಳ್ಯ ಮತ್ತು ಕಾರ್ಕಳದ ಶಾಸಕರಾದ ಎಸ್. ಅಂಗಾರ, ಸುನಿಲ್ ಕುಮಾರ್ ಹೆಸರೂ ಕೇಳಿಬರುತ್ತಿದೆ. ಜತೆಗೆ ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್, ಹಾಲಪ್ಪ ಆಚಾರ್, ತಿಪ್ಪಾರೆಡ್ಡಿ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. ಅವಕಾಶ ದೊರೆತರೆ ಉತ್ತಮ ಕೆಲಸ ಮಾಡುವುದಾಗಿ ಶಾಸಕರಾದ ಎಸ್.ಎ. ರಾಮದಾಸ್, ಅರವಿಂದ ಬೆಲ್ಲದ ಹೇಳಿಕೊಂಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ಅವರನ್ನು ವರಿಷ್ಠರೇ ಪಟ್ಟಿಯಲ್ಲಿ ಸೇರಿಸಿ ಕಳುಹಿಸಿದರೂ ಅಚ್ಚರಿಯಿಲ್ಲ ಎಂಬ ಮಾತೂ ಇದೆ.
ನಳಿನ್ ಜತೆ ಚರ್ಚಿಸಿ ಅಂತಿಮ ಪಟ್ಟಿ :
ನೂತನ ಸಚಿವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೊಂದಿಗೆ ಚರ್ಚಿಸಿ ಅಂತಿಮ ಪಟ್ಟಿ ಕಳುಹಿಸುವುದಾಗಿ ವರಿಷ್ಠರು ಹೇಳಿದ್ದಾರೆ ಎನ್ನಲಾಗಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಗ್ಗೆ ಅಧಿಕೃತ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.ಸಿಎಂ ಬಿಎಸ್‌ವೈ ಅವರು ಜ. 13ರ ಸಂಜೆ 4 ಗಂಟೆ ಸುಮಾರಿಗೆ ಸಂಪುಟ ವಿಸ್ತರಣೆ ಮಾಡಲು ನಿರ್ಧರಿ ಸಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖ ಸಚಿವರ ಖಾತೆ ಬದಲು? :
ಸಂಪುಟ ವಿಸ್ತರಣೆಯ ಜತೆಗೆ ಸಿಎಂ ಕೆಲವು ಪ್ರಮುಖ ಖಾತೆಗಳನ್ನು ಬದಲಾಯಿಸುವ ಆಲೋಚನೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಗೃಹ ಇಲಾಖೆ ಬದಲು ಜಲ ಸಂಪನ್ಮೂಲ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಬೊಮ್ಮಾಯಿ ಅವರಿಗೆ ಕಂದಾಯ ಇಲಾಖೆ ನೀಡುವ ಆಲೋಚನೆ ಬಿಎಸ್‌ವೈ ಅವರದು ಎನ್ನಲಾಗಿದೆ. ಕಂದಾಯ ಸಚಿವ ಅಶೋಕ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್, ಸಕ್ಕರೆ ಖಾತೆ ಸಚಿವ ಶಿವರಾಮ್ ಹೆಬ್ಟಾರ್ ಅವರ ಖಾತೆ ಬದಲಾವಣೆ ಚಿಂತನೆ ಸಿಎಂಗಿದೆ ಎನ್ನಲಾಗಿದೆ.
ಅರುಣ್ ಬರುತ್ತಾರೆ: ವಿಜಯೇಂದ್ರ :
ಸಂಪುಟ ವಿಸ್ತರಣೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬರುವುದು ಖಚಿತವಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಸಚಿವ ಸಂಪುಟ ವಿಸ್ತರಣೆ ಆಗಬೇಕೆಂಬ ಕೂಗಿತ್ತು. ವರಿಷ್ಠರು ಒಪ್ಪಿಗೆ ನೀಡಿದ್ದಾರೆ. ಇದೇ ವೇಳೆ ತಾವು ವೈಯಕ್ತಿಕ ಕೆಲಸದ ಮೇಲೆ ದಿಲ್ಲಿಗೆ ತೆರಳಿದ್ದು, ಯಾವುದೇ ರಾಜಕೀಯ ವಿಷಯದ ಬಗ್ಗೆ ಚರ್ಚೆಗೆ ತೆರಳಿರಲಿಲ್ಲ ಎಂದರು.
ಮತ್ತೆ ಅಪಸ್ವರ :
ಸಿ.ಪಿ. ಯೋಗೇಶ್ವರ್ ಸೇರ್ಪಡೆಗೆ ಪಕ್ಷದೊಳಗೆ ವಿರೋಧ ಇದೆ. ಮುನಿರತ್ನ ಸೇರ್ಪಡೆಗೆ ವರಿಷ್ಠರು ಸಮ್ಮತಿಸಿಲ್ಲ. ಆದರೆ ತಾನು ಈಗಾಗಲೇ ಅವರಿಗೆ ಭರವಸೆ ನೀಡಿದ್ದೇನೆ ಎಂದು ಸಿಎಂ ವರಿಷ್ಠರಿಗೆ ತಿಳಿಸಿದ್ದಾರೆ. ಎಚ್. ನಾಗೇಶ್ ಅವರನ್ನು ಕೈಬಿಡುವಂತೆ ವರಿಷ್ಠರು ಸೂಚನೆ ನೀಡಿರುವಂತಿದೆ.
15 ಜಿಲ್ಲೆಗಳಿಗೆ ಇಲ್ಲ ಪ್ರಾತಿನಿಧ್ಯ :
ಹಾಲಿ ಸಚಿವ ಸಂಪುಟದಲ್ಲಿ ಕಲಬುರಗಿ, ಯಾದಗಿರಿ, ವಿಜಯಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಕೊಡಗು, ಚಾಮರಾಜನಗರ, ಉಡುಪಿ, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು. ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ.
ಜ. 13 ಅಥವಾ 14ರಂದು ಸಂಪುಟ ವಿಸ್ತರಣೆ ನಿಶ್ಚಿತ. ಅದು ಪುನಾರಚನೆಯೋ ಅಥವಾ ವಿಸ್ತರಣೆಯೋ ಎಂಬುದು ಅಂದೇ ಗೊತ್ತಾಗಲಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಸಮಯ ಕೇಳಿಕೊಂಡು ವಿಸ್ತರಣೆ ಕಾರ್ಯಕ್ರಮದ ಸಮಯ ತಿಳಿಸುತ್ತೇನೆ.–ಬಿ.ಎಸ್. ಯಡಿಯೂರಪ್ಪ , ಮುಖ್ಯಮಂತ್ರಿ