Advertisement

ಪ್ರೋತ್ಸಾಹಧನ ಪಾವತಿಗೆ ರಾಜ್ಯ ಸರ್ಕಾರದ ಮೀನಮೇಷ

10:40 AM Jul 09, 2019 | Suhan S |

ಚಿತ್ರದುರ್ಗ: ಪ್ರೋತ್ಸಾಹಧನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

Advertisement

ಒನಕೆ ಓಬವ್ವ ವೃತ್ತದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಹನ್ನೆರಡು ಸಾವಿರ ರೂ. ವೇತನ ನಿಗದಿ ಮಾಡುವುದು ಸೇರಿದಂತೆ ಇತರೆ ಹದಿಮೂರು ಬೇಡಿಕೆಗಳನ್ನು ಈಡೇರಿಸಬೇಕು. ಕಳೆದ ಒಂಭತ್ತು ತಿಂಗಳುಗಳಿಂದ ಸರ್ಕಾರ ಎಂಸಿಟಿಎಸ್‌ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಪ್ರೋತ್ಸಾಹಧನವನ್ನು ಒಟ್ಟಿಗೆ ಸೇರಿಸಿ ಮಾಸಿಕ ಕನಿಷ್ಠ ಗೌರವಧನವನ್ನು 12 ಸಾವಿರ ರೂ. ನಿಗದಿಪಡಿಸಬೇಕು. ಆಶಾ ಸಾಫ್ಟ್‌ ಅಥವಾ ಆರ್‌ಸಿಎಚ್ ಪೋರ್ಟಲ್ಗೆ ಆಶಾ ಪ್ರೋತ್ಸಾಹಧನ ಜೋಡಣೆಯನ್ನು ರದ್ದುಪಡಿಸಬೇಕು. ಕಳೆದ ಒಂಭತ್ತು ತಿಂಗಳುಗಳಿಂದ ಬಾಕಿ ಇರುವ ಎಂಸಿಟಿಎಸ್‌ ಸೇವೆಗಳ ಆಶಾ ಪ್ರೋತ್ಸಾಹಧನವನ್ನು ಒಂದು ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿ ಆಶಾ ಕಾರ್ಯಕರ್ತೆಗೆ ಮಾಸಿಕ ಮೂರು ಸಾವಿರ ರೂ. ನೀಡಬೇಕು. ಇದನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸಬೇಕು. ಇಲ್ಲವೇ ಒಂಭತ್ತು ತಿಂಗಳುಗಳಲ್ಲಿ ಆಶಾ ಕಾರ್ಯಕರ್ತೆಯರು ಮಾಡಿರುವ ಸಾಧನೆಯ ಮ್ಯಾನುವಲ್ ವರದಿ ಸಂಗ್ರಹಿಸಿ ಪ್ರೋತ್ಸಾಹಧನವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ ಮಾತನಾಡಿ, ಆಶಾ ಕಾರ್ಯಕರ್ತೆಯರು ಜೀವನ ಭದ್ರತೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸಕ್ಕೆ ತಕ್ಕಂತೆ ಸರ್ಕಾರ ಗೌರವಧನ ನೀಡದೆ ಪುಕ್ಕಟೆಯಾಗಿ ದುಡಿಸಿಕೊಳ್ಳುತ್ತಿದೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜು. 18 ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ನಗರ ಮತ್ತು ಹಳ್ಳಿಗಳಲ್ಲಿ ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆ ಅರಿವು ಮೂಡಿಸುತ್ತಿದ್ದೇವೆ. ಕ್ಷಯ, ಕುಷ್ಠರೋಗ, ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

Advertisement

ಎಐಯುಟಿಯುಸಿ ಜಿಲ್ಲಾ ಸಂಚಾಲಕ ಎಚ್. ರವಿಕುಮಾರ್‌, ಜಿಲ್ಲಾ ಕಾರ್ಯದರ್ಶಿ ಮಮತಾ ಹಾಗೂ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಿಂದಿನ ಆರೋಗ್ಯ ಸಚಿವರು ನೀಡಿದ ಭರವಸೆಯಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಆಶಾ ಕಾರ್ಯಕರ್ತೆಯರ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಅಥವಾ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಲು ಕಾರ್ಪಸ್‌ ಫಂಡ್‌ ಮೀಸಲಿಡಬೇಕು. ನಿವೃತ್ತಿಯಾದ ಮೇಲೆ ಪಿಂಚಣಿಗಾಗಿ ನಿವೃತ್ತಿ ಇಡಿಗಂಟು ಇಡಬೇಕು. ಸಾಮಾಜಿಕ ಸುರಕ್ಷಾ ಯೋಜನೆಯ ವ್ಯಾಪ್ತಿಗೊಳಪಡುವ ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಯೋಜನೆ ಮತ್ತು ಸುರಕ್ಷಾ ಭೀಮಾ ಯೋಜನೆಯನ್ನು ಕೂಡಲೆ ಜಾರಿಗೊಳಿಸಿ ಸಂಪೂರ್ಣ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕು. ಹೆರಿಗೆ ರಜೆ ನೀಡಿ ರಜೆಯಲ್ಲಿ ಮಾಸಿಕ ಗೌರವಧನ ನೀಡಬೇಕು. ತಿಂಗಳಿಗೆ ಎರಡು ಬಾರಿ ಲಾರ್ವಾ ಸರ್ವೆ ಮತ್ತು ವಿವಿಧ ಸರ್ವೆಗಳಿಗೆ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಹಲವು ವರ್ಷಗಳಿಂದ ಪ್ರೋತ್ಸಾಹಧನವನ್ನೇ ನೀಡಿಲ್ಲ. ಪ್ರತಿ ದಿನದ ಆರೋಗ್ಯ ಜಾಗೃತಿ ಸೇರಿದಂತೆ ಸರ್ವೆ, ಜಾಥಾ, ಜಿಲ್ಲಾ ಮತ್ತು ತಾಲೂಕು ಕೇಂದ್ರದ ಸಭೆಗಳಿಗೆ ಹೋದಾಗ ಕನಿಷ್ಠ 300 ರೂ. ದಿನಭತ್ಯೆಯನ್ನು ಅಂದೇ ನೀಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಪ್ರತಿ ತಿಂಗಳು ವೇತನವನ್ನು ನಿಗದಿತ ದಿನಾಂಕದೊಳಗೆ ಬಿಡುಗಡೆಗೊಳಿಸಿ ಯಾವ ತಿಂಗಳ ವೇತನ ಬಿಡುಗಡೆಯಾಗುತ್ತದೋ ಆ ತಿಂಗಳ ವೇತನವೆಂದು ಆಶಾ ಪಾಸ್‌ಬುಕ್‌ನಲ್ಲಿ ನಮೂದಿಸಲು ಕ್ರಮ ಕೈಗೊಳ್ಳಬೇಕು. ಕೆಲವೆಡೆ ಆಶಾಗಳಿಗೆ ನಿಗದಿಪಡಿಸಿದ ಕೆಲಸಗಳನ್ನು ಹೊರತುಪಡಿಸಿ ಇತರೆ ಕೆಲಸಗಳಲ್ಲಿ ತೊಡಗಿಸುತ್ತಿರುವುದು ನಿಲ್ಲಬೇಕು. ಕೇಂದ್ರದ ಮಾರ್ಗಸೂಚಿಯಂತೆ ನಗರ ಆಶಾಗಳಿಗೆ 2000-2500 ಜನಸಂಖ್ಯೆಗನುಗುಣವಾಗಿ ಕೆಲಸ ಮಾಡಲು ಕ್ರಮ ಕೈಗೊಳ್ಳಬೇಕು. ಆಯುಕ್ತರು, ಎಂಡಿ, ಎನ್‌ಎಚ್ಎಂ ಸಮ್ಮುಖದಲ್ಲಿ ಸಂಘದೊಂದಿಗೆ ನಡೆದಿರುವ ಹಿಂದಿನ ಸಭೆಗಳ ನಿರ್ಣಯಗಳನ್ನು ಜಾರಿ ಮಾಡಬೇಕು. ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ನಿವಾರಣಾ ಸಭೆಯನ್ನು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಬೇಕೆಂದು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next