ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ರಾಜಕೀಯ ವಿಭಾಗವಾಗಿರುವ ಎಸ್‌ಡಿಪಿಐ ಜತೆಗಿನ ರಾಜಕೀಯ ಹೊಂದಾಣಿಕೆಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಜಿಹಾದಿ ಸಂಘಟನೆಗಳಾದ ಪಿಎಫ್ಐ ಮತ್ತು ಎಸ್‌ಡಿಪಿಐ ನಿಷೇಧಕ್ಕೆ ಹಿಂದೇಟು ಹಾಕುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಹತ್ಯೆ ಮತ್ತು ಬಷೀರ್ ಹತ್ಯೆಗಳನ್ನು ಬಿಜೆಪಿ ಖಂಡಿಸುತ್ತದೆ. ಈ ಹತ್ಯೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಹೇಗೆ ವಿಫಲವಾಗಿದೆ ಎಂಬುದಕ್ಕೆ ಜ್ವಲಂತ ಉದಾಹರಣೆ. ಹತ್ಯೆಗಳ ವಿಚಾರದಲ್ಲಿ ಹಿಂದೂ-ಮುಸ್ಲಿಂ ಪ್ರಶ್ನೆ ಉದ್ಭವವಾಗುವುದಿಲ್ಲ. ಯಾರದ್ದೇ ಹತ್ಯೆ ನಡೆದರೂ ಅದು ಖಂಡನೀಯ. ಆದರೆ, ರಾಜ್ಯ ಸರ್ಕಾರ ಇಂತಹ ಹತ್ಯೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಾಮರಸ್ಯ ಹಾಳು ಮಾಡಿ ಹಿಂದೂ-ಮುಸ್ಲಿಮರ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ತನಿಖೆ ನಡೆಸಿದ ಎನ್‌ಐಎ, ಈ ಹತ್ಯೆಯ ಹಿಂದೆ ಪಿಎಫ್ಐ ಕೈವಾಡವಿದೆ ಎಂಬುದನ್ನು ಸಾಬೀತುಪಡಿಸಿದೆ. ಇನ್ನುಳಿದಂತೆ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳ ಹಿಂದೆಯೂ ಪಿಎಫ್ಐ ಮತ್ತು ಎಸ್‌ಡಿಪಿಐ ಕೈವಾಡ ಇರುವ ಶಂಕೆಯಿದ್ದು, ಎಲ್ಲಾ ಹತ್ಯೆಗಳ ತನಿಖೆಯನ್ನು ಎನ್‌ಐಎಗೆ ವಹಿಸಿದರೆ ಈ ವಿಷಯ ಬೆಳಕಿಗೆ ಬರುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ತನಿಖೆಯನ್ನು ಎನ್‌ಐಎ ತನಿಖೆಗೆ ವಹಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.
ಪಿಎಫ್ಐನ ರಾಜಕೀಯ ಸಂಘಟನೆಯಾದ ಎಸ್‌ಡಿಪಿಐ ಜತೆ ರಾಜಕೀಯ ಹೊಂದಾಣಿಕೆ ಸಲುವಾಗಿ ರಾಜ್ಯ ಸರ್ಕಾರ ಆ ಎರಡೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆದಿತ್ತು. ಇದೀಗ ಅದೇ ಕಾರಣಕ್ಕೆ ಪಿಎಫ್ಐ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೆ ಕೇಂದ್ರ ಸರ್ಕಾರವೇ ನಿಷೇಧಿಸಲಿ ಎಂದು ಹೇಳುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿರುವ ರಾಜ್ಯ ಸರ್ಕಾರದ ಶಿಫಾರಸಿಲ್ಲದೆ ಕೇಂದ್ರ ಸರ್ಕಾರ ಈ ಸಂಘಟನೆಗಳನ್ನು ನಿಷೇಧಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅಲ್ಲದೆ, ಇನ್ನಾದರೂ ರಾಜ್ಯದಲ್ಲಿ ಕೊಲೆಗಳಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಸಲಹೆ ಮಾಡುತ್ತೇನೆ ಎಂದರು.
ಕಾನೂನು ಸುವ್ಯವಸ್ಥೆಯಲ್ಲಿ ವಿಫಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ನಾಲ್ಕು ವರ್ಷದಲ್ಲಿ 6525 ಕೊಲೆಗಳು, 19 ಸಾವಿರಕ್ಕೂ ಹೆಚ್ಚು ಮಹಿಳೆಯ ಮೇಲೆ ಅತ್ಯಾಚಾರ, 5300ಕ್ಕೂ ಹೆಚ್ಚು ಮಕ್ಕಳ ಮೇಲೆ ಅತ್ಯಾಚಾರ, 3569 ಮಹಿಳೆಯರು ಮತ್ತು 1247 ಮಕ್ಕಳ ನಾಪತ್ತೆ ಪ್ರಕರಣಗಳು ವರದಿಯಾಗಿವೆ. ಹಾಗಿದ್ದರೆ ಜನರ ಪಾಲಿಗೆ ಸರ್ಕಾರ ಬದುಕಿದೆಯೇ ಎಂದು ಪ್ರಶ್ನಿಸಿದ ಅವರು, ಇನ್ನು ನಾಲ್ಕು ತಿಂಗಳಲ್ಲಿ ಈ ಸರ್ಕಾರ ಮನೆಗೆ ಹೋಗುತ್ತದೆ. ಅದುವರೆಗಾದರೂ ಜನ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದರು.