ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ರಾಜ್ಯ ಸರಕಾರ ಶುಕ್ರವಾರ ಆದೇಶ ನೀಡಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ತನಿಖೆಗೆ ಆದೇಶ ಹೊರಡಿಸಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷ ಮತ್ತು ಹಿರಿಯ ಅಧಿಕಾರಿ ಎನ್. ಜಯರಾಮ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಲಾಗಿದೆ.30 ದಿನಗಳ ಒಳಗೆ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಜೆಡಿಎಸ್ ಶಾಸಕ ಸಾ ರಾ ಮಹೇಶ್ ಅವರು ರೋಹಿಣಿ ಸಿಂಧೂರಿ ವಿರುದ್ಧ ಸರಣಿ ಆರೋಪ ಮಾಡಿದ್ದರು. ವಿದ್ಯಾರ್ಥಿಗಳಿಗೆ ಬಟ್ಟೆ ಬ್ಯಾಗ್ ಖರೀದಿ, ಪಾರಂಪರಿಕ ಕಟ್ಟಡವಾಗಿದ್ದ ಅವರ ಅಧಿಕೃತ ನಿವಾಸದ ನವೀಕರಣ, ಈಜುಕೊಳ, ಜಿಮ್ ನಿರ್ಮಾಣ ಹಾಗೂ ಆಕೆಗೆ ಸಂಬಂಧಿಸಿದಂತೆ ಕೋವಿಡ್ ಸಂಬಂಧಿತ ಸಾವುಗಳ ಸುಳ್ಳು ಅಂಕಿ ಅಂಶಗಳನ್ನು ಒದಗಿಸಿದ ಆರೋಪವನ್ನೂ ಮಾಡಲಾಗಿದೆ.
ಈ ಕ್ರಮವು ತಮ್ಮ ನೇರವಾದ ವರ್ತನೆಗೆ ಹೆಸರುವಾಸಿಯಾದ ರೋಹಿಣಿ ಸಿಂಧೂರಿ ಅವರಿಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.