ಯಲಬುರ್ಗಾ: ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಹಾಗೂ ಕಾರ್ಮಿಕರ ಹಿತ ಕಾಪಾಡಲು ರಾಜ್ಯ ಸರಕಾರ ತಕ್ಷಣವೇ ತಜ್ಞರ ಅಧ್ಯಯನ ಸಮಿತಿ ನೇಮಕ ಮಾಡಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ರೈತರ ಬೆಳೆ ಫಸಲು ಬರುವ ಸಮಯ ಇಂತಹ ಸಮಯದಲ್ಲಿ ಕೋವಿಡ್ 19 ವೈರಸ್ ಬಂದು ರೈತರ ಬೆಳೆಗಳು ಮಾರಾಟ ಮಾಡಲಾಗದೇ ಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. ಕಾರ್ಮಿಕರು ಸಹ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ತಜ್ಞರ ಸಮಿತಿ ರಚಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಯಲ್ಲಿ ಮೌಡ್ಯ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಕರ್ನಾಟದಲ್ಲಿ ಮೌಡ್ಯ ನಿಷೇಧ ಕಾಯ್ದೆ ಜಾರಿಯಲಿದೆ. ಗಂಟೆ ಬಾರಿಸಿ, ಮೇಣದ ಬತ್ತಿ ಹಚ್ಚಿ ಎಂದು ಹೇಳುವ ಬದಲು ಇನ್ನಷ್ಟು ಆರೋಗ್ಯದ ವೈಜ್ಞಾನಿಕ ಮಾರ್ಗಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಬೇಕಿತ್ತು. ವಿನಾಃಕಾರಣ ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.
ಕೊಪ್ಪಳ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಪ್ರಸ್ತುತ ದಿನಗಳಲ್ಲಿ ಅವೈಜ್ಞಾನಿಕವಾಗಿದೆ. ಪರ್ಯಾಯವಾಗಿ ಬೇರೆ ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತು. ಏಕಾಏಕಿ 144 ಸೆಕ್ಷನ್ ಅನ್ನು ಆಪತ್ತು, ಗಲಭೆ ಸಂದರ್ಭಗಳಲ್ಲಿ ಜಾರಿಗೊಳಿಸಬಹುದಾದ ಕಾನೂನು ಆಗಿದೆ. ನಿರ್ಗತಿಕರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರು, ರಾಘವೇಂದ್ರಚಾರ್ಯ ಜೋಶಿ, ಯಂಕಣ್ಣ ಯರಾಶಿ, ರಾಮಣ್ಣ ಸಾಲಭಾವಿ, ರೇವಣೆಪ್ಪ ಸಂಗಟಿ, ಮಹೇಶ ಹಳ್ಳಿ, ಸತ್ಯನಾರಾಯಣಪ್ಪ, ಎಂ.ಎಫ್. ನಧಾಪ, ಮಂಜುನಾಥ ಕಡೇಮನಿ, ರೇವಣೆಪ್ಪ ಹಿರೇಕುರಬರ ಇದ್ದರು.