ಶಿಕಾರಿಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಸಿದ್ಧಪಡಿಸಲಾದ ನೂತನ ವರ್ಷದ ಕ್ಯಾಲೆಂಡರ್‌ನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘ ಸದಸ್ಯರ ಹಿತಾಸಕ್ತಿಯ ಜತೆಗೆ ನಾಡಿನ ನೆಲ, ಜಲ, ಭಾಷೆ, ಗಡಿಸಮಸ್ಯೆ, ಭೂಕಂಪ ಪ್ರವಾಹ ಮತ್ತಿತರ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ಥರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಿದ ಹಿರಿಮೆ ಹೊಂದಿದೆ. ರಾಜ್ಯ ಸರ್ಕಾರಿ
ನೌಕರರ ಸಂಘ ಐಎಎಸ್, ಐಪಿಎಸ್, ಐಎಫ್ಎಸ್ ಹೊರತುಪಡಿಸಿದ ಸರ್ಕಾರದ ಉನ್ನತ ಮಟ್ಟದಿಂದ ಡಿ. ದರ್ಜೆವರೆಗಿನ 7.20 ಲಕ್ಷ ಸಿಬ್ಬಂದಿ ಹೊಂದಿರುವ ಬೃಹತ್ ಸಂಘಟನೆಯಾಗಿದೆ ಎಂದರು.
ರಾಜ್ಯದ 25 ಜಿಲ್ಲಾ ಕೇಂದ್ರಗಳಲ್ಲಿ, 260 ತಾಲೂಕು ಕೇಂದ್ರಗಳಲ್ಲಿ, 60 ಯೋಜನಾ ಶಾಖೆಯ ಮೂಲಕ ಪ್ರತಿ ಕೇಂದ್ರದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಂದು ಜಿಲ್ಲೆ, ತಾಲೂಕು ಕೇಂದ್ರದ ಅಧ್ಯಕ್ಷ ಪದಾಧಿಕಾರಿಗಳು ಸಾಂವಿಧಾನಿಕ ಚೌಕಟ್ಟಿನಡಿ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಸಾಂವಿಧಾನಿಕ ಮಾನ್ಯತೆ ಹೊಂದಿದ್ದಾರೆ ಎಂದರು.
ಸಾಗರದ ಉಪವಿಭಾಗಾಧಿಕಾರಿ ಎಸ್.ವಿ. ದರ್ಶನ್, ಸಂಘದ ತಾಲೂಕು ಘಟಕದ ಅಧ್ಯಕ್ಷ ಚಿನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಪಾಲಕ ಅಭಿಯಂತರ ರಮೇಶ್, ವಿಶೇಷ ವಿಭಾಗದ ಇಇ ರಮೇಶ್ ಬಾಣದ್, ಟಿಎಚ್‌ಒ ಡಾ| ಮಂಜುನಾಥ, ಡಾ| ಶ್ರೀನಿವಾಸ್, ಪಾಪಯ್ಯ, ಕೇಶವ ಇತರರು ಇದ್ದರು.