ಕಿಸಾನ್ ಸಮ್ಮಾನ್ ಯೋಜನೆ : ರಾಜ್ಯದ ಪ್ರಥಮ ಕಂತು ರೈತರ ಖಾತೆಗೆ
Team Udayavani, Aug 14, 2019, 3:28 PM IST
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರದ ಮಹತ್ವದ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ರಾಜ್ಯದ ಪಾಲು ಆಗಿರುವ 2000 ರೂಪಾಯಿಗಳನ್ನು ಅರ್ಹ ರೈತರ ಖಾತೆಗಳಿಗೆ ಜಮಾ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಚಾಲನೆ ನೀಡಿದರು.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಮುಖ್ಯಮಂತ್ರಿಯವರ ಸಭೆಯಲ್ಲಿ ರಾಜ್ಯದ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಕೆಂದ್ರ ನೀಡುವ ಹಣಕ್ಕೆ ಹೆಚ್ಚುವರಿಯಾಗಿ 2000 ರೂಪಾಯಿಗಳನ್ನು ಖಜಾನೆ ಎರಡರ ಮೂಲಕ ಜಮಾ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ್ ಮೊದಲಾದವರು ಉಪಸ್ಥಿತರಿದ್ದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಎರಡು ಪ್ರಮುಖ ಘೋಷಣೆಗಳನ್ನು ಮಾಡಿದ್ದರು. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಪಾಲು 4000 ರೂಪಾಯಿಗಳನ್ನು ಎರಡು ಕಂತುಗಳಲ್ಲಿ ರಾಜ್ಯದ ಅರ್ಹ ರೈತರಿಗೆ ನೀಡುವ ಘೋಷಣೆಯೂ ಅದರಲ್ಲಿ ಒಂದಾಗಿತ್ತು.