Advertisement

ರಾಜ್ಯದ ಹೊರೆ ತಗ್ಗಿಸಲು ಕೇಂದ್ರಕ್ಕೆ ಜೈ ಎಂದ ರಾಜ್ಯ ಸರ್ಕಾರ

07:23 PM Jan 28, 2020 | Team Udayavani |

ಬೆಂಗಳೂರು: ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರದ ಅನುದಾನ ಹೆಚ್ಚು ಪಡೆಯುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದು , ಇದರಿಂದಾಗಿ ಸುಮಾರು 30 ಸಾವಿರ ಕೋಟಿ ರೂ. ಖಜಾನೆಗೆ ಹೊರೆ ತಗ್ಗಿಸಲು ಮುಂದಾಗಿದೆ.

Advertisement

ಶಿಕ್ಷಣ, ಆರೋಗ್ಯ, ಆಹಾರ , ವಸತಿ, ಕುಡಿಯುವ ನೀರು ಪೂರೈಕೆ ಸೇರಿದಂತೆ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಹಭಾಗಿತ್ವ ಪಡೆದು ಜಾರಿಗೊಳಿಸುವುದು ಇದರ ಉದ್ದೇಶವಾಗಿದ್ದು, ಈಗಾಗಲೇ ಐದು ಪ್ರಮುಖ ಇಲಾಖೆಗಳು ಕ್ರಿಯಾ ಯೋಜನೆ ಸಹ ಸಿದ್ಧಪಡಿಸಿಟ್ಟುಕೊಂಡಿವೆ.

ಕೇಂದ್ರ ಪುರಸ್ಕೃತ ಯೋಜನೆಗಳ ಜಾರಿಯಿಂದ ಕೇಂದ್ರದಿಂದ ಹೆಚ್ಚು ಅನುದಾನ ಲಭ್ಯವಾಗುವುದರ ಜತೆಗೆ ಯೋಜನೆಗಳ ಅನುಷ್ಟಾನಕ್ಕೆ ಆರ್ಥಿಕ ಕೊರತೆಯೂ ನಿವಾರಣೆಯಾಗಲಿದೆ. ಕೇಂದ್ರ ಬಜೆಟ್‌ ನೋಡಿಕೊಂಡು ರಾಜ್ಯ ಬಜೆಟ್‌ನಲ್ಲಿ ಈ ಕುರಿತು ಹಲವು ಘೋಷಣೆ ಸಾಧ್ಯತೆಯಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಹಾಗೂ ಆ ನಂತರದ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳ ಜಾರಿಗೆ ವಿರೋಧವಿತ್ತು. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ, ಉಜ್ವಲಾ ಯೋಜನೆ ವಿಚಾರದಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷವಿತ್ತು.

ಆದರೆ, ಇದೀಗ ಕೇಂದ್ರದಲ್ಲೂ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ಕೇಂದ್ರ ಸರ್ಕಾರದ ಸಹಭಾಗಿತ್ವದಡಿ ಯೋಜನೆಗಳ ಜಾರಿಗೆ ಯಾವುದೇ ಅಡ್ಡಿ ಇಲ್ಲ. ಇತ್ತೀಚೆಗೆ ಮುಖ್ಯಮಂತ್ರಿಯವರು ಅಧಿಕಾರಿಗಳ ನಿಯೋಗದೊಂದಿಗೆ ಈ ಕುರಿತು ಕೇಂದ್ರದ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಗ್ರಾಮೀಣ ಕುಡಿಯುವ ನೀರು, ಅಂತರ್ಜಲ ವೃದ್ಧಿ, ಬಡ ಕುಟುಂಬಗಳಿಗೆ ಆರೋಗ್ಯ ಸೇವೆ, ಹಿಂದುಳಿದ ಹಾಗೂ ದಲಿತ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ವಸತಿ ಯೋಜನೆಗಳಿಗೆ ಕೇಂದ್ರದಲ್ಲಿ ಹಾಲಿ ಚಾಲ್ತಿಯಲ್ಲಿರುವ ಯೋಜನೆಗಳೊಂದಿಗೆ ರಾಜ್ಯ ಸರ್ಕಾರವು ಜತೆಗೂಡಿ ಕೇಂದ್ರ ಪುರಸ್ಕೃತ ಯೋಜನೆಯಡಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ಹೆದ್ದಾರಿ ಹಾಗೂ ಸೇತುವೆಗಳ ಅಭಿವೃದ್ಧಿಗೆ 4 ರಿಂ 5 ಸಾವಿರ ಕೋಟಿ ರೂ., ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ 7 ಸಾವಿರ ಕೋಟಿ ರೂ., ವಸತಿ ಯೋಜನೆಗಳಿಗೆ 10 ಸಾವಿರ ಕೋಟಿ ರೂ., ಅಂತರ್ಜಲ ವೃದ್ಧಿಗೆ 1200 ಕೋಟಿ ರೂ., ಆರೋಗ್ಯ ಯೋಜನೆಗೆ 2 ಸಾವಿರ ಕೋಟಿ ರೂ., ಶಿಕ್ಷಣ ವಲಯದಿಂದ 5 ಸಾವಿರ ಕೋಟಿ ರೂ. ಕೇಂದ್ರದ ಯೋಜನೆಗಳಿಂದ ಹೆಚ್ಚುವರಿಯಾಗಿ ಪಡೆಯುವ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್‌ನ ನಂತರ ಫೆ. 5 ರಿಂದ 8 ರವರೆಗೆ ರಾಜ್ಯದ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ರಾಜ್ಯ ಬಜೆಟ್‌ಗೆ ಅಂತಿಮ ಸ್ವರೂಪ ನೀಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪ್ರತಿನಿಧಿ ನೇಮಕ
ರಾಜ್ಯ ಬಜೆಟ್‌ ನಂತರ ದೆಹಲಿಯಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿ ನೇಮಕ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳ ಅನುಷ್ಟಾನ ಸಂಬಂಧದ ಪತ್ರ ವ್ಯವಹಾರ, ಅಂಗೀಕಾರದ ಹೊಣೆ ನೀಡಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ನಿವೃತ್ತ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಯೊಬ್ಬರನ್ನು ಆ ಸ್ಥಾನಕ್ಕೆ ನೇಮಿಸಲು ಚರ್ಚೆ ನಡೆದಿದೆ. ಆದರೆ, ಸಚಿವ ಸ್ಥಾನ ಕೊಡಲು ಸಾಧ್ಯವಾಗದ ಹಿರಿಯ ಶಾಸಕರಿಗೆ ಆ ಸ್ಥಾನ ಕೊಟ್ಟರೆ ಸೂಕ್ತ ಎಂಬ ಚಿಂತನೆಯೂ ಇದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next