Advertisement

ಬಿಎಸ್‌ವೈಗೆ ಸ್ಥಾನಮಾನ: ಕಾಂಗ್ರೆಸ್‌ಗೆ ಆತಂಕ  

09:52 PM Aug 18, 2022 | Team Udayavani |

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ರಾಷ್ಟ್ರಮಟ್ಟದಲ್ಲಿ ಹುದ್ದೆ ನೀಡಿರುವುದರಿಂದ ರಾಜಕೀಯವಾಗಿ ಆಗಬಹುದಾದ ಲಾಭ-ನಷ್ಟದ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಮಾಹಿತಿ ಪಡೆದುಕೊಂಡಿದೆ.

Advertisement

ಲಿಂಗಾಯತ ಸಮುದಾಯದ ಮತಬ್ಯಾಂಕ್‌ ಹಿಡಿದಿಟ್ಟುಕೊಳ್ಳಲು ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡಿದ್ದೇ ಆಗಿದ್ದರೆ ಬದಲಿ ಕಾರ್ಯತಂತ್ರ ರೂಪಿಸಲು ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.

ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅಗತ್ಯ ಬಿದ್ದರೆ ಸ್ಥಾನಮಾನ ವಿಚಾರದಲ್ಲಿ  ಬದಲಾವಣೆ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.

ಬಿಜೆಪಿಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು  ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.

ಸದ್ಯದಲ್ಲೇ ರಾಜ್ಯ ನಾಯಕರನ್ನು  ದಿಲ್ಲಿಗೆ ಕರೆಸಿಕೊಂಡು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ.

Advertisement

ಕಾಂಗ್ರೆಸ್‌ಗೆ ಆಘಾತ :

ಅತ್ತ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಎಂ.ಬಿ.ಪಾಟೀಲ್‌ ರಾಜ್ಯ ಪ್ರವಾಸ ಕೈಗೊಂಡು ಮಠ-ಮಾನ್ಯಗಳಿಗೆ ಭೇಟಿ ನೀಡಲು ಸಜ್ಜಾಗುತ್ತಿದ್ದ ಬೆನ್ನಲ್ಲೇ ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನಮಾನ ದೊರಕಿರುವುದು ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ   ಆಘಾತ ನೀಡಿದಂತಾಗಿದೆ.

ಯಡಿಯೂರಪ್ಪ  ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ಅವರ ಬಗ್ಗೆ ಮೃದು ನಿಲುವು ತಾಳಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕರು ಈಗ ವರಸೆ ಬದಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಚುನಾವಣ ನಿವೃತ್ತಿ ಘೋಷಿಸಿ ಶಿಕಾರಿಪುರಕ್ಕೆ ಪುತ್ರ ಬಿ.ವೈ.ವಿಜಯೇಂದ್ರ ಹೆಸರು ಘೋಷಿಸಿದ ಬಳಿಕ ಕಾಂಗ್ರೆಸ್‌ ವಲಯದಲ್ಲಿ ಆಸೆ ಚಿಗುರೊಡೆದಿತ್ತು. ಯಡಿಯೂರಪ್ಪ  ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರೆ ಕಾಂಗ್ರೆಸ್‌ಗೆ ರಾಜಕೀಯವಾಗಿ ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದರು. ಜೆಡಿಎಸ್‌ ಸಹ ತಮಗೂ ಇದರಿಂದ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದೆ.

ಆದರೆ ಬಿಜೆಪಿ ವರಿಷ್ಠರ ನಡೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಎಲ್ಲ ಲೆಕ್ಕಾಚಾರ ಉಲ್ಟಾ ಮಾಡಿದೆ. ಎರಡೂ ಪಕ್ಷಗಳು ಈಗ ಬದಲಿ ಕಾರ್ಯತಂತ್ರ ರೂಪಿಸಬೇಕಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಸರಕಾರದ ವಿರುದ್ಧದ 40 ಪರ್ಸೆಂಟ್‌ ಭ್ರಷ್ಟಾಚಾರ , ಪಿಎಸ್‌ಐ ನೇಮಕಾತಿ ಹಗರಣ ಆರೋಪವನ್ನೇ ಮುಂದಿಟ್ಟು ಹೋರಾಡಲು ಕಾಂಗ್ರೆಸ್‌ ಭೂಮಿಕೆ ಸಿದ್ಧಪಡಿಸಿತ್ತು. ಈಗ ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಸಿಕ್ಕಿರುವುದರಿಂದ ಅವರು ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾದರೆ, ನಿರಂತರ ರಾಜ್ಯ ಪ್ರವಾಸ ಕೈಗೊಂಡರೆ ನಾವು ಅಂದುಕೊಂಡಷ್ಟು ಸುಲಭವಾಗದು. ಚುನಾವಣೆಯಲ್ಲಿ ನಮ್ಮ ಟಾರ್ಗೆಟ್‌ನಂತೆ ನಿರೀಕ್ಷಿತ ಗುರಿ ತಲುಪಲು ನಮಗೆ ಕಷ್ಟವಾಗಬಹುದು. ಆದರೆ, ತತ್‌ಕ್ಷಣಕ್ಕೆ ಹೀಗೇ ಆಗಬಹುದು ಎಂದು ಹೇಳಲಾಗದು. ಮುಂದಿನ ದಿನಗಳ ಬೆಳವಣಿಗೆ ನೋಡಬೇಕು ಎಂದು ನಾಯಕರೊಬ್ಬರು ಹೇಳುತ್ತಾರೆ.

ಮುಂದೇನು ಕಾರ್ಯತಂತ್ರ? :

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್‌ ಅವರ ಜಂಟಿ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಜ್ಜಾಗಿತ್ತು. ಪ್ರಣಾಳಿಕೆ ಸಮಿತಿಗೆ ಡಾ| ಜಿ.ಪರಮೇಶ್ವರ್‌ ನೇಮಿಸಿ, ರಾಜಕೀಯ ವ್ಯವಹಾರಗಳ ಸಮಿತಿ ರಚಿಸಿ ಅಖಾಡಕ್ಕೆ ಇಳಿಯಲು ತಯಾರಿ ನಡೆದಿತ್ತಾದರೂ  ಈಗಿನ ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಬದಲಾವಣೆಗೆ ಮುಂದಾಗಿದೆ.

ಎಸ್‌.ಲಕ್ಷ್ಮಿ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next