Advertisement

ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿ: ಬಿಎಸ್‌ವೈ

11:24 AM Dec 16, 2017 | Team Udayavani |

ಮಸ್ಕಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಿಂದ ರಾಜ್ಯ ಬೊಕ್ಕಸದ ಹಗಲು ದರೋಡೆಯಾಗಿದೆ. ಸರ್ಕಾರ ಅಕ್ಷರಶಃ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು. ಪಟ್ಟಣದ ಪೊಲೀಸ್‌ ಠಾಣೆ ಹತ್ತಿರದ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ನಾಲ್ಕೂವರೆ ವರ್ಷಗಳಿಂದ ತುಘಲಕ್‌ ದರ್ಬಾರ್‌ ನಡೆಸುತ್ತಿದ್ದಾರೆ. ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವನ್ನಾಗಿಸಿದ್ದಾರೆ. ಎಸಿಬಿ ಮತ್ತು ಸಿಐಡಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೊಲೆ, ಆತ್ಮಹತ್ಯೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಾಮೀಲಾಗಿರುವ ಸಚಿವರಿಗೆ ಕ್ಲೀನ್‌ಚಿಟ್‌ ನೀಡಿ ಅವರನ್ನು ರಕ್ಷಿಸುತ್ತ ತಮ್ಮದು ಪ್ರಾಮಾಣಿಕ ಸರ್ಕಾರ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಮುಂಬರುವ ವಿಧಾನಸಭೆ ಚುಣಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಅವಧಿಯಲ್ಲಿನ ಪ್ರಕರಣಗಳ ಮರು ತನಿಖೆ ನಡೆಸಿ, ಈಗ ಕ್ಲೀನ್‌ಚಿಟ್‌ ಪಡೆದವರು ಎಲ್ಲಿರಬೇಕು ಅಲ್ಲಿಗೆ ಕಳುಹಿಸುವೆ ಎಂದು ಗುಡುಗಿದರು. 

ಪ್ರಧಾನಿ ನರೇಂದ್ರ ಮೋದಿಗೆ ತಮ್ಮನ್ನು ಕಂಡರೆ ಭಯ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದು, ಅಚ್ಛೇ ದಿನ್‌ ಯಾವಾಗ ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯವನ್ನು ಕಾಂಗ್ರೆಸ್‌ ಮುಕ್ತಗೊಳಿಸಿ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿದ ಬಳಿಕ ಅಚ್ಛೇ ದಿನ್‌ ಬರುತ್ತದೆ ಎಂದರು.

ಈ ಭಾಗದ ಎನ್‌ಆರ್‌ಬಿಸಿ 5ಎ ನಾಲಾ ಯೋಜನೆ ಹಾಗೂ ಕನಕ ನಾಲಾ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದರು. ಕೇಂದ್ರದಿಂದ ಅನುದಾನವನ್ನು ತಂದು ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಜಾರಿಗೆ ಬದ್ದವೆಂದು ಘೋಷಿಸಿದರು. 

Advertisement

ಶಾಸಕ ಸಿ.ಟಿ. ರವಿ ಮಾತನಾಡಿ, ಅಧಿಕಾರದ ಮದದಲ್ಲಿರುವ ಸಿಎಂ ಮದವಿಳಿಸುವ ಶಕ್ತಿ ಜನರಿಗಿದೆ. ಸಿದ್ದರಾಮಯ್ಯನವರು ಬಿಜೆಪಿಯವರಿಗೆ ಎರಡು ನಾಲಿಗೆ ಹಾಗೂ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ ಎಂದು ಹೇಳುತ್ತಾರೆ. ಆದರೆ ಕಳೆದ
ವಿಧಾನಸಭಾ ಚುನಾವಣೆಯಲ್ಲಿ ಇದೇ ತಮ್ಮ ಕಡೆ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದರು. 

ಈಗ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಹಾಗೂ ಮಗನನ್ನು ವರುಣಾ ಕ್ಷೇತ್ರದಿಂದ ಸ್ಪರ್ಧೆಗಿಳಿಸಲು ಸಜ್ಜಾಗಿದ್ದಾರೆ. ಬಿಜೆಪಿ ಎಂದೂ ಹೆಣದ ಮೇಲೆ ರಾಜಕೀಯ ಮಾಡಿಲ್ಲ. ಆದರೆ ರೋಹಿತ್‌ ವೇಮುಲಾ ಹೆಣದ ಮೇಲೆ ರಾಜಕೀಯ ಮಾಡಿದ್ದು ಕಾಂಗ್ರೆಸ್‌. ಇದು ಕಾಂಗ್ರೆಸ್‌ನ ಇಬ್ಬಗೆ ನೀತಿ ತೋರಿಸುತ್ತದೆ ಎಂದರು.

ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯನ್ನು ಕಾಂಗ್ರೆಸ್‌ ಮುಕ್ತ ಮಾಡುವುದಾಗಿ ಘೋಷಿಸಿದರು.

ವಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವೆ ಪುರಂದರೇಶ್ವರಿ, ಸಂಸದರಾದ ಸಂಗಣ್ಣ ಕರಡಿ, ಶ್ರೀರಾಮುಲು, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಎಸ್‌.ಟಿ. ಮೊರ್ಚಾ ರಾಜ್ಯಾಧ್ಯಕ್ಷ ರಾಜೂಗೌಡ, ರಾಜ್ಯ ವಕ್ತಾರ ಅಶೋಕ ನಾರಾಯಣ, ಮಹದೇವಪ್ಪಗೌಡ, ಆರ್‌.ಬಸನಗೌಡ ತುರುವಿಹಾಳ, ಶೇಖರಪ್ಪ ತಳವಾರ ಇತರರು ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಮಾಜಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್‌, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಲಕ್ಷ್ಮೀ ಕುಪ್ಪೆ, ರಘುನಾಥ ಮಲ್ಕಾಪುರ, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ ಕುಂಟೋಜಿ, ಮಸ್ಕಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅಮೀನಗಡ ಇತರರು ಉಪಸ್ಥಿತರಿದ್ದರು. ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಜನ ಸಮಾವೇಶದಲ್ಲಿ ಭಾಗವಹಿಸಿದ್ದರು. ನಿರೀಕ್ಷೆಗೂ ಮೀರಿ ಜನ ಸೇರಿದ್ದನ್ನು ಕಂಡು ಬಿಜೆಪಿ ಮುಖಂಡರು ಸಂತಸ ವ್ಯಕ್ತಪಡಿಸಿದರು.

ಬೈಕ್‌ ರ್ಯಾಲಿ: ಸಮಾವೇಶಕ್ಕೂ ಮುನ್ನ ಹಳೆ ಬಸ್‌ ನಿಲ್ದಾಣದಲ್ಲಿ ನೂರಾರು ಯುವಕರು ಬೈಕ್‌ ರ್ಯಾಲಿ ಮೂಲಕ ನವಕರ್ನಾಟಕ ಪರಿವರ್ತನಾ ಯಾತ್ರೆ ಸ್ವಾಗತಿಸಿ ಮೆರವಣಿಗೆ ಮೂಲಕ ಸಮಾವೇಶದ ವೇದಿಕೆಗೆ ಕರೆತರಲಾಯಿತು.

ಬೆಳ್ಳಿ ಗದೆ ಅರ್ಪಣೆ: ಆರ್‌. ಬಸನಗೌಡ ತುರುವಿಹಾಳ ಅಭಿಮಾನಿ ಬಳಗದವರು ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬೆಳ್ಳಿಗದೆ ಅರ್ಪಿಸಿ ಗೌರವಿಸಿದರು. 

ಬಿಜೆಪಿ ಸೇರ್ಪಡೆ: ಉದ್ದಾಳ ಗ್ರಾಮದ ಮುಖಂಡರಾದ ದಯಾನಂದರೆಡ್ಡಿ ಪಾಟೀಲ್‌ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಯುಗಾಂತ್ಯ ಆರಂಭವಾಗಿದೆ. ಸಿದ್ದರಾಮಯ್ಯನವರೇ ಕಾಂಗ್ರೆಸ್‌ನ ಕೊನೆ ಮುಖ್ಯಮಂತ್ರಿಯಾಗಲಿದ್ದಾರೆ. ಈಗಾಗಲೇ ದೇಶ ಕಾಂಗ್ರೆಸ್‌ ಮುಕ್ತವಾಗುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗುವುದರೊಂದಿಗೆ ಕರ್ನಾಟಕ ಕಾಂಗ್ರೆಸ್‌ ಮುಕ್ತ ರಾಜ್ಯವಾಗಲಿದೆ.
 ಕೆ.ಎಸ್‌. ಈಶ್ವರಪ್ಪ, ಮೇಲ್ಮನೆ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next