Advertisement

ಸಂಪುಟಕ್ಕೆ ಚುನಾವಣೆ ರಕ್ಷೆ; ಉ.ಪ್ರದೇಶ ಫ‌ಲಿತಾಂಶ ಆಧರಿಸಿ ರಾಜ್ಯದಲ್ಲೂ ಬದಲಾವಣೆ?

11:36 PM Jan 09, 2022 | Team Udayavani |

ಬೆಂಗಳೂರು: ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಘೋಷಣೆ ಆಗಿರುವುದರಿಂದ ಫ‌ಲಿತಾಂಶ ಬರುವವರೆಗೂ ರಾಜ್ಯ ಸಚಿವ ಸಂಪುಟ ಪುನಾರಚನೆ ಅನುಮಾನವಾಗಿದೆ. ಹೀಗಾಗಿ 2023ರ ಚುನಾವಣೆಗೆ ಎಲೆಕ್ಷನ್‌ ಕ್ಯಾಬಿನೆಟ್‌ ರಚಿಸಬೇಕು ಎಂಬ ಸಚಿವಾಕಾಂಕ್ಷಿಗಳ ಆಗ್ರಹದ ಈಡೇರಿಕೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

Advertisement

2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಉತ್ತರ ಪ್ರದೇಶದ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷದ ರಾಷ್ಟ್ರೀಯ ನಾಯಕರು ಈ ಚುನಾವಣೆಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಫ‌ಲಿತಾಂಶ ಬರುವ ವರೆಗೂ ಬೇರೆ ರಾಜ್ಯಗಳ ರಾಜಕೀಯ ಬದಲಾವಣೆಗಳ ಬಗ್ಗೆ ಬಿಜೆಪಿ ವರಿಷ್ಠರು ಹೆಚ್ಚಿನ ಗಮನ ನೀಡುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇಲ್ಲಿನ ಫ‌ಲಿತಾಂಶ ಯಾವ ರೀತಿ ಬರುತ್ತದೆ ಎನ್ನುವ ಬಗ್ಗೆಯೂ ಬಿಜೆಪಿ ವರಿಷ್ಠರು ಕಾಯುತ್ತಿದ್ದಾರೆ. ಅದರ ಆಧಾರದ ಮೇಲೆ ಇತರ ರಾಜ್ಯಗಳಲ್ಲಿ ಪಕ್ಷದ ಸಂಘಟನೆ ಮತ್ತು ಸರಕಾರದಲ್ಲಿ ಬದಲಾವಣೆಗಳು ಆಗಬೇಕಾಗಿದ್ದರೂ ಅನಂತರವೇ ಕೈಗೆತ್ತಿಕೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆಯಾಗುತ್ತಿದೆ.

ಬಜೆಟ್‌ವರೆಗೂ ಅನುಮಾನ
ಸಂಕ್ರಾಂತಿಯ ಅನಂತರ ಸಂಪುಟ ಪುನಾರಚನೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸಚಿವಾಕಾಂಕ್ಷಿಗಳು ಸಂಪುಟ ಸೇರಲು ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದಲ್ಲಿ ಸ್ವಾಮೀಜಿಗಳು ಹಾಗೂ ಸಮುದಾಯದ ನಾಯಕರ ಮೂಲಕ ಒತ್ತಡ ಹೇರುವ ಕಸರತ್ತನ್ನು ತೆರೆಮರೆಯಲ್ಲಿ ನಡೆಸುತ್ತಿದ್ದಾರೆ.

ಸಂಪುಟದಲ್ಲಿ 4 ಸ್ಥಾನಗಳು ಖಾಲಿ ಇದ್ದು, ಅದರ ಜತೆಗೆ ಕೆಲವು ಹಿರಿಯ ಸಚಿವರನ್ನು ಕೈ ಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸಬರಿಗೆ ಅವಕಾಶ ಕೊಡಬೇಕೆಂಬ ಬೇಡಿಕೆ ಇದೆ. ಪಕ್ಷದ ನಾಯಕರಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಈಗ ಪಂಚರಾಜ್ಯಗಳ ಚುನಾವಣೆ ಘೋಷಣೆ ಆಗಿರುವುದರಿಂದ ಇನ್ನು ಎರಡು ತಿಂಗಳು ಸಂಪುಟ ಪುನಾರಚನೆಗೆ ಮತ್ತೆ ಮೋಡ ಕವಿದಂತಾಗಿದ್ದು, ಆಕಾಂಕ್ಷಿಗಳಿಗೆ ನಿರಾಸೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಬಜೆಟ್‌ ಸಿದ್ಧತೆ ಬಗ್ಗೆ ಗಮನಹರಿಸಲಿರುವುದರಿಂದ ಬದಲಾ ವಣೆಯತ್ತ ಮನಸ್ಸು ಮಾಡುವುದು ಅಸಾಧ್ಯ ಎನ್ನಲಾಗುತ್ತಿದೆ.

Advertisement

ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್‌

ಸಚಿವರು ನಿರಾಳ?
ಸೋಂಕಿನ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ರುವುದರಿಂದ ಜ. 7ರಿಂದ 9ರ ವರೆಗೆ ನಡೆಯಬೇಕಾಗಿದ್ದ ಚಿಂತನ ಬೈಠಕ್‌ ಮುಂದೂಡಿಕೆಯಾಗಿದೆ. ಹೊಸ ದಿನಾಂಕ ನಿಗದಿಯಾಗಿಲ್ಲ.  ಇದು ಸಚಿವರಿಗೆ ನಿರಾಳತೆ ತಂದಿದೆ. ಬೈಠಕ್‌ನಲ್ಲಿ ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ಚರ್ಚೆಯಾಗುವುದರಲ್ಲಿತ್ತು. ಚುನಾವಣೆ ಫ‌ಲಿತಾಂಶದವರೆಗೂ ಪುನಾರಚನೆ ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿರುವುದು ಸಚಿವರು ಮತ್ತಷ್ಟು ನಿರಾಳರಾಗುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next