ಹುಬ್ಬಳ್ಳಿ: ಅತಿವೃಷ್ಟಿ ಹಾನಿ ಸಂಬಂಧ ಹೆಚ್ಚಿನ ನೆರವು ಕೋರಲು ಸಿಎಂ ಯಡಿಯೂರಪ್ಪ ಶುಕ್ರವಾರ ದೆಹಲಿಗೆ ತೆರಳಲಿದ್ದು, ಈ ಸಂದರ್ಭದಲ್ಲಿ ಸಚಿವ ಸಂಪುಟ ರಚನೆ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಲು ಮನವಿ ಮಾಡಲಿದ್ದಾರೆ. ನನಗೂ ಬರುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಸಂಪುಟ ರಚನೆ ಕುರಿತು ಚರ್ಚೆಯಾಗುವ ಸಾಧ್ಯತೆಗಳಿದ್ದು, ಹೈಕಮಾಂಡ್ ನೀಡುವ ಮಾರ್ಗದರ್ಶನ ಹಾಗೂ ನಿರ್ದೇಶನದ ಮೇಲೆ ಮುಂದಿನ ಕಾರ್ಯಗಳು ನಡೆಯಲಿವೆ. ಆದಷ್ಟು ಬೇಗ ಸಚಿವ ಸಂಪುಟ ರಚನೆಯಾಗಲಿದೆ ಎಂದರು.
ಫೋನ್ ಕದ್ದಾಲಿಕೆ ತನಿಖೆಯಾಗಲಿ: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕೇಳಿ ಬಂದಿರುವ ಫೋನ್ ಕದ್ದಾಲಿಕೆ ಆರೋಪದ ಕುರಿತು ಸಮಗ್ರ ತನಿಖೆಯಾಗಬೇಕು. ಮಾಜಿ ಸಚಿವ ಎಚ್. ವಿಶ್ವನಾಥ ಮಾಡಿರುವ ಆರೋಪ ಗಂಭೀರವಾಗಿದ್ದು, ಸಮರ್ಪಕ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಫೋನ್ ಕದ್ದಾಲಿಕೆ ಕುರಿತು ವಿಪಕ್ಷ ನಾಯಕನಿದ್ದ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದೆ. ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುತ್ತಿರುವವರ ಫೋನ್ ಕದ್ದಾಲಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಕುರ್ಚಿಗೆ ಅಂಟಿಕೊಂಡು ಕೂಡಲು ಕಾನೂನು ವಿರೋಧಿ ಕ್ರಮ ಅನುಸರಿಸಿದ್ದಾರೆ. ರಾಜಕೀಯ ವಿರೋಧಿಗಳು, ಕೆಲ ನಾಯಕರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಅವರ ಸರ್ಕಾರದಲ್ಲಿದ್ದ ಸಿದ್ದರಾಮಯ್ಯ ಅವರ ಫೋನ್ ಕೂಡ ಕದ್ದಾಲಿಕೆ ಮಾಡಿದ್ದಾರೆ. ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವಿರುದ್ಧ ಕೂಡ ಫೋನ್ ಕದ್ದಾಲಿಕೆ ಆರೋಪ ಬಂದಾಗ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದರು.
ಐತಿಹಾಸಿಕ ನಿರ್ಧಾರ: ಜಮ್ಮು-ಕಾಶ್ಮೀರದಲ್ಲಿ 370 ಕಲಂ ರದ್ದು ಮಾಡಿದ್ದು ಐತಿಹಾಸಿಕ ನಿರ್ಧಾರ. ಇದನ್ನು ಅಲ್ಲಿನ ಜನರು ಕೂಡ ಸ್ವಾಗತಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ಅಲ್ಲಿ ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಾಗಲಿದೆ. ವಿಶ್ವದ ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪಿಸುವುದು ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದರು.