Advertisement

ರಾಜ್ಯ ಸಚಿವ ಸಂಪುಟ ಸಭೆ ಇಂದು

10:37 AM Sep 04, 2017 | |

ಬೆಂಗಳೂರು: ರಾಜ್ಯ ಸರ್ಕಾರದ ಕೃಷಿ ಯಂತ್ರಧಾರೆ ಕಾರ್ಯಕ್ರಮದಡಿ ಪ್ರತಿ ಹೋಬಳಿಗಳಲ್ಲೂ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಆರಂಭಿಸುವ ಉದ್ದೇಶದಿಂದ ಹೊಸದಾಗಿ 250 ಸೇವಾ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ 250 ಹೊಸ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಸಚಿವ ಸಂಪುಟ ಸೋಮವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Advertisement

ರಾಜ್ಯದ 175 ಹೋಬಳಿಗಳಲ್ಲಿ ಈಗಾಗಲೇ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಿವೆ. ಇದನ್ನು ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ 2017-18ನೇ ಸಾಲಿನ ಆಯವ್ಯಯದಲ್ಲಿ 122 ಕೋಟಿ ರೂ. ಒದಗಿಸಲಾಗಿತ್ತು. ಅದರಂತೆ 250 ಹೊಸ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಉಳಿದಂತೆ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮಗಳಡಿ 10.40 ಕೋಟಿ ರೂ. ವೆಚ್ಚದಲ್ಲಿ ಐರನ್‌, ಫೋಲಿಕ್‌ ಆ್ಯಸಿಡ್‌ ಮತ್ತು ಆಲ್‌ಬೆಂಡಜೋಲ್‌ ಮಾತ್ರೆಗಳನ್ನು ಖರೀದಿಸುವುದು ಮತ್ತು ಶುಚಿ ಕಾರ್ಯಕ್ರಮದಡಿ 47.96 ಕೋಟಿ ರೂ. ವೆಚ್ಚದಜಿ ನ್ಯಾಪ್‌ಕಿನ್‌ ಪ್ಯಾಡ್‌ ಗಳನ್ನು ಖರೀದಿಸುವ ಪ್ರಕ್ರಿಯೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.

ಮೆಟ್ರೋ ಎರಡನೇ ಹಂತದ ವೆಚ್ಚ ಹೆಚ್ಚಳ?
“ನಮ್ಮ ಮೆಟ್ರೋ’ ಎರಡನೇ ಹಂತದ ಕೆ.ಆರ್‌. ಪುರ- ಮಹದೇವಪುರ ನಡುವಿನ ಯೋಜನೆಯ ಭೂಸ್ವಾಧೀನ ಪರಿ ಹಾರ ಮೊತ್ತ ಹೆಚ್ಚಳಕ್ಕೆ ಸಂಪುಟ ಅನುಮತಿ ನೀಡುವ ಸಾಧ್ಯತೆಯಿದೆ. ಉದ್ದೇಶಿತ ಮಾರ್ಗದಲ್ಲಿ ಹಲವು ದಿನಗಳಿಂದ ಭೂಸ್ವಾಧೀನ ಪ್ರಕ್ರಿಯೆ ಕಗ್ಗಂಟಾಗಿದ್ದು ಪರಿಹಾರದ ಮೊತ್ತ ಹೆಚ್ಚಿಸಿ, ಸಮಸ್ಯೆ ಇತ್ಯರ್ಥಕ್ಕೆ ಬಿಎಂಆರ್‌ಸಿ ನಿರ್ಧರಿಸಿತ್ತು. ಈ ಸಂಬಂಧದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈಗ ಅದು ಸಚಿವ ಸಂಪುಟದ ಮುಂದೆ ಬರಲಿದೆ.

ಕೆ.ಆರ್‌.ಪುರದ ಲೌರಿ ಮೆಮೋರಿಯಲ್‌ ಸ್ಕೂಲ್‌ನಿಂದ ಮಹದೇವಪುರ ನಡುವಿನ ಎರಡು ಕಿ.ಮೀ. ಮಾರ್ಗದಲ್ಲಿ ಕೆ.ಆರ್‌. ಪುರ, ಜಿ. ನಾರಾಯಣಪುರ, ವಿಜಿನಾಪುರ ಮತ್ತು ಮಹದೇವಪುರ ಗ್ರಾಮಗಳು ಬರುತ್ತವೆ. ಇಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಪ್ರತಿ ಚದರಡಿಗೆ ಬಿಎಂಆರ್‌ಸಿ 3,500ಯಿಂದ 4,000 ರೂ. ಪರಿಹಾರ ನಿಗದಿಪಡಿಸಿದೆ. ಆದರೆ, ಇಲ್ಲಿನ ನಿವಾಸಿಗಳು ಪರಿಹಾರ ಹೆಚ್ಚಳಕ್ಕೆ ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಹಾರದ
ಮೊತ್ತ ಹೆಚ್ಚಳಕ್ಕೆ ಉದ್ದೇಶಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next