ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಸೋಮವಾರ ಆರಂಭ ವಾಗಲಿದೆ. ಮಾ.5ರಂದು 2020-21ನೇ ಸಾಲಿನ ಬಜೆಟ್ ಮಂಡನೆಯಾಗಲಿದೆ. ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಸರಕಾರದ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ನೀಡಲಿದ್ದು, ಮಸೂದೆಗಳ ಮಂಡನೆ ಮತ್ತು ಸಾರ್ವಜನಿಕ ಜರೂರು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಮಂಗಳವಾರ ಮತ್ತು ಬುಧವಾರ ಉಭಯ ಸದನಗಳಲ್ಲಿ ಸಂವಿಧಾನ ಕುರಿತು ಚರ್ಚೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಿಎಎ ಬೆಂಬಲಿಸಿ ರಾಜ್ಯ ಸರಕಾರ ನಿರ್ಣಯ ಕೈಗೊಳ್ಳುವ ಸಾಧ್ಯತೆಯೂ ಇದೆ.
ಮಾ. 5ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದು, ಅನಂತರ ಬಜೆಟ್ ಮೇಲಿನ ಚರ್ಚೆ, ಪ್ರಶ್ನೋತ್ತರ ಕಲಾಪ ನಡೆಯಲಿದೆ. ಮಾ.31ರ ವರೆಗೂ ಅಧಿವೇಶನ ನಡೆಯಲಿದೆ.
ಈ ಮಧ್ಯೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಯತ್ನಾಳ್ ಅವರ ವಿಧಾನಸಭೆ ಸದಸ್ಯತ್ವ ರದ್ದು ಮಾಡಬೇಕು ಎಂದು ಒತ್ತಾಯಿಸಿ ಸದನದಲ್ಲಿ ಹೋರಾಟ ನಡೆಸಲು ವಿಪಕ್ಷ ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕೆ ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ.
ಉಳಿದಂತೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ರಾಜ್ಯ ಸರಕಾರದ ವೈಫಲ್ಯಗಳನ್ನು ಮುಂದಿಟ್ಟು ಹೋರಾಟಕ್ಕೆ ಕಾಂಗ್ರೆಸ್-ಜೆಡಿಎಸ್ ಕಾರ್ಯತಂತ್ರ ರೂಪಿಸಿವೆ. ಬಿಜೆಪಿಯೂ ಪ್ರವಾಹ ನಿರ್ವಹಣೆ, ರೈತರ ಸಾಲ ಮನ್ನಾಕ್ಕೆ ಹಣ ಹೊಂದಿಸಿರುವುದು ಸೇರಿದಂತೆ ಅಂಕಿಅಂಶಗಳ ಸಹಿತ ಸದನದ ಮುಂದಿಟ್ಟು ಸಮರ್ಥನೆಗೆ ಸಿದ್ಧತೆ ನಡೆಸಿದೆ.
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕಾಂಗ ಪಕ್ಷದ ಸಭೆ ಸೋಮವಾರ ಬೆಳಗ್ಗೆ ನಿಗದಿಯಾಗಿದೆ. ಅಧಿವೇಶನದಲ್ಲಿ ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಜತೆಗೆ ರಾಜ್ಯದಲ್ಲಿನ ಇತರ ಸಮಸ್ಯೆಗಳು, ಸರಕಾರದ ವೈಫಲ್ಯಗಳನ್ನು ಪ್ರಸ್ತಾವಿಸುವುದು ಸಹಿತ
ಹಲವು ವಿಷಯಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಮಾ. 2 ಅಥವಾ 3ರಂದು ಶಾಸಕಾಂಗ ಪಕ್ಷ ಸಭೆ ನಡೆಸುವ ಸಾಧ್ಯತೆಯಿದೆ.
ಸಂವಿಧಾನದ ಪರಿಪಾಲನೆಯಲ್ಲಿ ನಮ್ಮ ಜವಾಬ್ದಾರಿಗಳು ಏನು ಎಂಬುದನ್ನು ಅರಿತುಕೊಳ್ಳಲು, ಅದರ ಬಗ್ಗೆ ಚರ್ಚೆಯು ರಾಜಕೀಯ ಪಕ್ಷಗಳ ಚರ್ಚೆಗಿಂತ ಮೇಲ್ಪಟ್ಟಿರಬೇಕು ಎಂಬುದಕ್ಕಾಗಿ 2 ದಿನ ಸಂವಿಧಾನದ ಬಗ್ಗೆ ಚರ್ಚೆಗೆ ನಿರ್ಧರಿಸಲಾಗಿದೆ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್