ಮುಂಬಯಿ: ದೇಶದ ಅತೀದೊಡ್ಡ ಬ್ಯಾಂಕಿಂಗ್ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದು ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು 3% ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ತನ್ನ ಗ್ರಾಹಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ.
ಉಳಿತಾಯ ಖಾತೆಗಳಲ್ಲಿ ಸರಾಸರಿ ಮಾಸಿಕ ಉಳಿಕೆ ಮೊತ್ತ (Average Monthly Balance) ಅಥವಾ ಮಿನಿಮಮ್ ಬ್ಯಾಲೆನ್ಸ್ ಇರುವುದನ್ನು ಕಡ್ಡಾಯಗೊಳಿತ್ತು ಮತ್ತು ಅದನ್ನೀಗ ಬ್ಯಾಂಕ್ ತೆಗೆದು ಹಾಕಿದೆ.
ಹಾಗಾಗಿ ಇನ್ನು ಮುಂದೆ ಎಸ್.ಬಿ.ಖಾತೆಯನ್ನು ಹೊಂದಿರುವ ಗ್ರಾಹಕರು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕಾಗಿಲ್ಲ ಮತ್ತು ಅದಕ್ಕೆ ತಪ್ಪಿದಲ್ಲಿ ಬ್ಯಾಂಕಿಗೆ ದಂಡವನ್ನೂ ತೆರಬೇಕಾಗಿಲ್ಲ. ಬ್ಯಾಂಕಿನ ಈ ನಿರ್ಧಾರವು ದೇಶಾದ್ಯಂತ ಇರುವ ಎಸ್.ಬಿ.ಐ.ನ 44.51 ಕೋಟಿ ಎಸ್.ಬಿ. ಖಾತೆದಾರರಿಗೆ ಅನುಕೂಲವಾಗಲಿದೆ.
ಸದ್ಯ ಇರುವ ನಿಯಮದ ಪ್ರಕಾರ ಮೆಟ್ರೋ ಪ್ರದೇಶಗಳ ಖಾತೆದಾರರು ತಮ್ಮ ಎಸ್.ಬಿ. ಖಾತೆಯಲ್ಲಿ ಪ್ರತೀ ತಿಂಗಳು 3000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕು, ಇನ್ನು ಅರೆ ನಗರ ಪ್ರದೇಶಗಳ (ಸೆಮಿ ಅರ್ಬನ್) ಎಸ್.ಬಿ. ಖಾತೆದಾರರು ತಮ್ಮ ಉಳಿತಾಯ ಖಾತೆಯಲ್ಲಿ ಕಾಪಾಡಿಕೊಳ್ಳಬೇಕಾದ ಕನಿಷ್ಟ ಮೊತ್ತ 2000 ರೂಪಾಯಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಉಳಿತಾಯ ಖಾತೆದಾರರು ತಮ್ಮ ಖಾತೆಯಲ್ಲಿ ಪ್ರತೀ ತಿಂಗಳು ಕನಿಷ್ಟ 1000 ರೂಪಾಯಿಗಳನ್ನು ಉಳಿಸಿಕೊಳ್ಳಲೇಬೇಕಿತ್ತು. ಇದಕ್ಕೆ ತಪ್ಪಿದಲ್ಲಿ ಬ್ಯಾಂಕ್ ಅಂತಹ ಖಾತೆದಾರರಿಗೆ ತೆರಿಗೆ ಸಹಿತ, 5 ರೂಪಾಯಿಗಳಿಂದ 15 ರೂಪಾಯಿಗಳವರೆಗೆ ದಂಡವನ್ನು ವಿಧಿಸುತ್ತಿತ್ತು.