Advertisement

ಕೈ ತೊರೆದ ಬಂಡುಕೋರರು ಅತಂತ್ರರಾದರಾ?

09:11 PM May 15, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದೆ ಮುನಿಸಿಕೊಂಡು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಹಾಗೂ ಜೆಡಿಎಸ್‌ ಸೇರಿದ್ದವರು, ಬಂಡಾಯಗಾರರಾಗಿ ಸ್ಪರ್ಧೆ ಮಾಡಿದ್ದವರು ಶೇ.99 ರಷ್ಟು ಸೋತಿದ್ದು. ಒಂದು ರೀತಿಯಲ್ಲಿ ಅತಂತ್ರರಾದಂತಾಗಿದೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಆದರೆ, ಪಕ್ಷ ಬಿಟ್ಟು ಬೇರೆ ಪಕ್ಷದ ಟಿಕೆಟ್‌ ಪಡೆದು ಸೋತವರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪುಲಕೇಶಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತ ಅಖಂಡ ಶ್ರೀನಿವಾಸಮೂರ್ತಿ ಬಿಎಸ್‌ಪಿ ಸೇರಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

ಬಳ್ಳಾರಿಯಲ್ಲಿ ಅನಿಲ್‌ಲಾಡ್‌, ಹಾನಗಲ್‌ನಲ್ಲಿ ಮನೋಹರ ತಹಸೀಲ್ದಾರ್‌, ಯಾದಗಿರಿಯಲ್ಲಿ ಎ.ಬಿ.ಮಾಲಕರೆಡ್ಡಿ, ಚಿತ್ರದುರ್ಗದಲ್ಲಿ ರಘು ಆಚಾರ್‌, ಕಲಘಟಗಿಯಲ್ಲಿ ನಾಗರಾಜ್‌ ಛಬ್ಬಿ, ಹಳಿಯಾಳದಲ್ಲಿ ಘೋಕ್ಲೃಕರ್‌, ಮಾನ್ವಿಯಲ್ಲಿ ಬಿ.ವಿ.ನಾಯಕ್‌ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿ ಸ್ಪರ್ಧೆ ಮಾಡಿದ್ದರು. ಇವರಲ್ಲಿ ಯಾರೂ ಗೆಲುವು ಸಾಧಿಸಿಲ್ಲ. ಇವರೆಲ್ಲರೂ ಈಗ ಅತಂತ್ರರಾಗಿದ್ದಾರೆ.

ಅದೇ ರೀತಿ ಬಾಗಲಕೋಟೆಯಲ್ಲಿ ದೇವರಾಜ್‌ ಪಾಟೀಲ್‌, ರಾಮದುರ್ಗದ ಚಿಕ್ಕರೇವಣ್ಣ ಸಹ ಜೆಡಿಎಸ್‌ ಹಾಗೂ ಬಿಜೆಪಿ ಸೇರಿ ಸ್ಪರ್ಧೆ ಮಾಡಿದ್ದರು. ಅವರಿಗೂ ಗೆಲುವು ದಕ್ಕಿಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಹೊಳಲ್ಕೆರೆ ಡಾ.ಜಯಸಿಂಹ, ಚಿಕ್ಕಪೇಟೆಯಲ್ಲಿ ಕೆಜಿಎಫ್ ಬಾಬು, ಅರಭಾವಿಯ ಭೀಮಪ್ಪ ಗಡಾದ, ಜಗಳೂರಿನ ಎಚ್‌.ಪಿ.ರಾಜೇಶ್‌, ರಾಯಭಾಗದ ಶಂಭು ಕೃಷ್ಣ, ಬೀದರ್‌ ದಕ್ಷಿಣದ ಚಂದ್ರಸಿಂಗ್‌, ಶಿರಹಟ್ಟಿಯ ರಾಮಕೃಷ್ಣ ದೊಡ್ಡಮನಿ, ಶಿವಮೊಗ್ಗ ಗ್ರಾಮಾಂತರ ಭೀಮಪ್ಪ, ಶಿಕಾರಿಪುರದ ನಾಗರಾಜ ಗೌಡ, ಜಮಖಂಡಿ ಸುಶೀಲಕುಮಾರ ಬೆಳಗಲಿ, ತರೀಕೆರೆ ಗೋಪಿಕೃಷ್ಣ, ಅರಕಲಗೂಡು ಕೃಷ್ಣೇಗೌಡ, ಶ್ರೀರಂಗಪಟ್ಟಣದ ಪಾಲಹಳ್ಳಿ ಚಂದ್ರಶೇಖರ್‌, ಮಾಯಕೊಂಡದ ಸವಿತಾಬಾಯಿ, ತೇರದಾಳದ ಪದ್ಮಜಿತ್‌ ನಾಡಗೌಡ, ಕುಣಿಗಲ್‌ ರಾಮಸ್ವಾಮಿಗೌಡ, ಶಿಡ್ಲಘಟ್ಟದ ಪುಟ್ಟು ಆಂಜಿನಪ್ಪ ಸಹ ಗೆಲುವು ಸಾಧಿಸಿಲ್ಲ.

ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಯಶಸ್ವಿ
ಜಮಖಂಡಿ, ಹೊಳಲ್ಕೆರೆ, ಚಿಕ್ಕಪೇಟೆ, ಶಿಡ್ಲಘಟ್ಟ, ಅರಕಲಗೂಡು, ಬೀದರ್‌ ದಕ್ಷಿಣ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಬಂಡುಕೋರರು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದವರಲ್ಲಿ ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ. ಈ ಮಧ್ಯೆ, ವೈ.ಎಸ್‌.ದತ್ತ ಕಡೂರಿನಲ್ಲಿ ಕಾಂಗ್ರೆಸ್‌ ಸೇರುತ್ತಿದ್ದಂತೆ ಜೆಡಿಎಸ್‌ನತ್ತ ಹೋಗಿದ್ದ ಧನಂಜಯ ಮತ್ತೆ ದತ್ತ ಜೆಡಿಎಸ್‌ಗೆ ಹೋಗಿದ್ದರಿಂದ ತಟಸ್ಥರಾಗಿದ್ದರು. ಇದೀಗ ಮತ್ತೆ ಕಾಂಗ್ರೆಸ್‌ ವಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರಾದ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಸಹೋದರನ ಪುತ್ರ ಗುರುಚರಣ್‌ ಚುನಾವಣೆ ವೇಳೆ ಜೆಡಿಎಸ್‌ ಸೇರಿದ್ದರು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಿರುವುದರಿಂದ ಗುರುಚರಣ್‌ ಲೆಕ್ಕಾಚಾರ ತಲೆಕೆಳಗಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next