ಕೊಪ್ಪಳ: ಜಿಲ್ಲಾಡಳಿತದಿಂದ ನಗರದ ಗವಿಸಿದ್ದೇಶ್ವರ ಕಾಲೇಜು ಆವರಣದಲ್ಲಿ ರವಿವಾರ ಆಯೋಜಿಸಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2020 ಹಾಗೂ ಎಲೆಕ್ಟ್ರೋಸ್ ವೆರಿಫಿಕೇಷನ್ ಪ್ರೋಗ್ರಾಮ್ (ಇವಿಪಿ) ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಮ್ಮದು ಪ್ರಜಾಸೌಮ್ಯ ದೇಶ. ಇಲ್ಲಿ ನಡೆಯುವ ಚುನಾವಣೆ ದೊಡ್ಡ ಜಾತ್ರೆಯಾಗಿದೆ. ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 70ರಷ್ಟು ಮತದಾರರಿದ್ದಾರೆ. ಮತದಾನ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಮಾಡಿಕೊಳ್ಳಲು ಭಾರತ ಚುನಾವಣಾ ಆಯೋಗವು ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2020’ ಕಾರ್ಯಕ್ರಮ ಜಾರಿಗೊಳಿಸಿದೆ. ಅದರಂತೆ ಸೆ. 1ರಿಂದ ಅ. 15ರವರೆಗೆ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಫೋಟೋ ಅದಲು-ಬದಲು, ತೆಗೆದು ಹಾಕುವಿಕೆ, ವಿಳಾಸ ಬದಲಾವಣೆ, ಮತಗಟ್ಟೆ ಬದಲಾವಣೆ ಸೇರಿದಂತೆ ಮತದಾರರ ಚೀಟಿಯಲ್ಲಿನ ಲೋಪದೋಷಗಳನ್ನು ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಸರಿಪಡಿಸಿಕೊಳ್ಳಬಹುದು ಎಂದರು.
ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ), ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮತದಾರರ ಚೀಟಿಯಲ್ಲಿನ ಲೋಪಗಳನ್ನು ಸರಿಪಡಿಸಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮೊಬೈಲ್ನಲ್ಲಿ ಬಿಎಲ್ಒ ವೋಟರ್ ಅಪ್ಲಿಕೇಷನ್ ಆ್ಯಪ್ ಮೂಲಕ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ಕೈಗೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಬಿಎಲ್ಒಗಳಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಈ ಕುರಿತು ಬಿಎಲ್ಒಗಳಿಗೆ ಅಗತ್ಯ ತರಬೇತಿ ನೀಡಲಾಗುವುದು. ಈ ಕಾರ್ಯಕ್ರಮದ ಸದ್ಬಳಕೆ ಪಡೆದುಕೊಳ್ಳಬೇಕು ಎಂದರು.
ಜಿಪಂ ಸಿಇಒ ರಘುನಂದನ್ ಮೂರ್ತಿ ಮಾತನಾಡಿ, ಈ ಹಿಂದೆ ನಡೆದ ಮತದಾರರ ಪಟ್ಟಿ ಪರಿಶೀಲನೆ ವೇಳೆ ಮತದಾರರ ಹೆಸರು ಪಟ್ಟಿಯಿಂದ ಕೈ ಬಿಟ್ಟಿರುವ, ಮತ್ತೂಂದು ಮತಗಟ್ಟೆಗೆ ವರ್ಗಾವಣೆಯಾಗಿರುವ ಹೀಗೆ ಅನೇಕ ಪ್ರಕರಣಗಳು ಉಂಟಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಆ ತಪ್ಪು ಸರಿಪಡಿಸಲು ಮತದಾರರ ಪಟ್ಟಿ ಪರಿಶೀಲನೆ ಎಲೆಕ್ಟ್ರೋಸ್ ವೆರಿಫಿಕೇಷನ್ ಪ್ರೋಗ್ರಾಮ್ (ಇವಿಪಿ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇವಿಪಿ ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಸಮಿತಿಯು ಸಂಪೂರ್ಣ ಸಹಕಾರ ನೀಡಲಿದೆ. ಇವಿಪಿ ಕಾರ್ಯಕ್ರಮ ಸಮಯದಲ್ಲಿ ಮೊಬೈಲ್ ಅಪ್ಲಿಕೇಷನ್ ಮೂಲಕವೂ ಸಾರ್ವಜನಿಕರು ಮತದಾರರ ಚೀಟಿಯ ಲೋಪ ಸರಿಪಡಿಸಿ, ಅಪ್‌ಡೇಟ್ ಮಾಡಿಸಿಕೊಳ್ಳಬಹುದು. ಹೊಸ ಮತದಾರರ ಪಟ್ಟಿಗೆ ಹೆಸರು ಸೇರ್ಪಡಿಸಲು ಚುನಾವಣಾ ಆಯೋಗ ಅನುಮೋದಿಸಿರುವ ಯಾವುದಾದರೂ ಒಂದು ಅಗತ್ಯ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು ಎಂದರು.
ಎಡಿಸಿ ಸೈಯಿದ ಅಯಿಷಾ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಜಿಪಂ ಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಿಸರಳ್ಳಿ, ಡಿಡಿಪಿಐ ಅಮಿತಾ ಯರಗೋಳ್ಕರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ತಹಶೀಲ್ದಾರ್ ಜೆ.ಬಿ. ಮಜ್ಗಿ, ತಾಪಂ ಇಒ ಟಿ. ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಾಗೃತಿ ಕಾರ್ಯಕ್ರಮ:ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2020 ಹಾಗೂ ಎಲೆಕ್ಟ್ರೋಸ್ ವೆರಿಫಿಕೇಷನ್ ಪ್ರೋಗ್ರಾಮ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಶಾಲಾ ಮಕ್ಕಳನ್ನೊಳಗೊಂಡ ‘ಇವಿಪಿ’ ನಕ್ಷೆ ತಯಾರಿಸಲಾಯಿತು. ಶರಣಪ್ಪ ವಡಿಗೇರಿ ತಂಡವು ಜಾಗೃತಿ ಗೀತೆಗಳನ್ನು ಹಾಡಿ ಮತ್ತು ನಾಟಕ ಪ್ರದರ್ಶನ ನೀಡುವ ಮೂಲಕ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2020 ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಿತು.