Advertisement

ಕಿಸಾನ್‌ ಸಮ್ಮಾನ್‌ ಜಾಗೃತಿ ರಥ ಸಂಚಾರಕ್ಕೆ ಚಾಲನೆ

10:08 AM Jun 29, 2019 | Team Udayavani |

ಹಾವೇರಿ: ಕೃಷಿ ಭೂಮಿ ಹೊಂದಿರುವ ರೈತ ಕುಟುಂಬಕ್ಕೆ ವಾರ್ಷಿಕ ಆರು ಸಾವಿರ ರೂ. ನೀಡುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆಯ ರೈತರ ನೋಂದಣಿಗಾಗಿ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮದ ರಥ ಸಂಚಾರಕ್ಕೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹಸಿರು ನಿಶಾನೆ ತೋರಿದರು.

Advertisement

ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ರಥ ಸಂಚಾರ ಆರಂಭಿಸಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗೆ ನೋಂದಾಯಿಸಿಕೊಳ್ಳುವ ಜಾಗೃತಿ ಜತೆಗೆ ಕೃಷಿ ಪೂರಕ ಉದ್ಯೋಗ ಖಾತ್ರಿ ಯೋಜನೆಗಳ ಮಾಹಿತಿ, ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಯ ಕುರಿತ ಯೋಜನೆಗಳ ಮಾಹಿತಿ ಬಿತ್ತರಿಸುವ ರಥಗಳು ಜಿಲ್ಲೆಯಲ್ಲಿ ಸಂಚರಿಸಿ ಮಾಹಿತಿ ನೀಡಲಿವೆ. ಕೃಷಿ ಸಮ್ಮಾನ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ವರ್ಷದಲ್ಲಿ ಸಮಾನ ಮೂರು ಕಂತುಗಳಲ್ಲಿ ಎರಡುಸಾವಿರದಂತೆ ಒಟ್ಟಾರೆ ಆರು ಸಾವಿರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಈ ಲಾಭ ಪಡೆಯಲು ರೈತರು ತಮ್ಮ ಜಮೀನಿನ ಖಾತೆಯ ವಿವರ, ಬ್ಯಾಂಕ್‌ ಖಾತೆ ವಿವರ, ಆಧಾರ್‌ ಸಂಖ್ಯೆ, ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬೇಕು.

ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಜೂ. 30 ಕೊನೆಯ ದಿನವಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಸ್ವ ಘೋಷಣೆ ಪತ್ರದೊಂದಿಗೆ ರೈತ ಸಂಪರ್ಕ ಕೇಂದ್ರಗಳು, ಗ್ರಾಮ ಪಂಚಾಯತಿ ಕಚೇರಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖಾ ಕಚೇರಿಗಳು, ಅಟಲ್ಜೀ ಜನಸ್ನೇಹಿ ಕೇಂದ್ರಗಳು(ನಾಡಕಚೇರಿ) ಅಥವಾ ನಾಗರಿಕ ಸೇವಾ ಕೇಂದ್ರಗಳಲ್ಲಿ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.

ಭೂಮಿ ಹೊಂದಿರುವ ಸಣ್ಣ ಅತೀ ಸಣ್ಣ ಒಳಗೊಂಡಂತೆ ಎಲ್ಲ ರೈತರಿಗೂ ಈ ಯೋಜನೆ ಅನ್ವಯಿಸುತ್ತದೆ. ಆದರೆ, ಸಂಘ-ಸಂಸ್ಥೆಗಳು, ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆಗಳು, ಮಾಜಿ ಮತ್ತು ಹಾಲಿ ಸಚಿವರು, ರಾಜ್ಯ ಸಚಿವರು, ರಾಜ್ಯ ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು, ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್‌ ಅಧ್ಯಕ್ಷರು, ವೈದ್ಯರು, ಅಭಿಯಂತರರು, ವಕೀಲರು, ಲೆಕ್ಕಪರಿಶೋಧಕ, ವಾಸ್ತುಶಿಲ್ಪಿದಂತಹ ವೃತ್ತಿಪರರು ಮತ್ತು ವೃತ್ತಿಪರ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ವೃತ್ತಿಯಲ್ಲಿ ತೊಡಗಿರುವವರು, ಸಿ ಗ್ರೂಪ್‌ ಒಳಗೊಂಡಂತೆ ಮೇಲ್ಪಟ್ಟ ಎಲ್ಲ ಸರ್ಕಾರಿ, ಅರೇ ಸರ್ಕಾರಿ ಹಾಗೂ ಸಹಕಾರಿ ಕ್ಷೇತ್ರದ ನೌಕರರು, ಅಧಿಕಾರಿಗಳು ಹಾಗೂ ಕಳೆದ ಸಾಲಿನಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರು (ಡಿ ಗ್ರೂಪ್‌ ಹೊರತು) ಈ ಯೋಜನೆಯಡಿ ಬರುವುದಿಲ್ಲ.

ಜಿಲ್ಲೆಯಲ್ಲಿ ಅಂದಾಜು 2.40 ಲಕ್ಷ ರೈತರು ಈ ಯೋಜನೆಯಡಿ ನೋಂದಾಯಿಸಬೇಕಾಗಿದ್ದು, ಈಗಾಗಲೇ 80ಸಾವಿರಕ್ಕೂ ಅಧಿಕ ರೈತರನ್ನು ನೋಂದಾಯಿಸಲಾಗಿದೆ. ಕಾಲ ಮಿತಿಯೋಳಗೆ ಅರ್ಹ ಎಲ್ಲ ರೈತರನ್ನು ನೋಂದಾಯಿಸಿ ಎಲ್ಲರಿಗೂ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಲಾಭ ದೊರಕಿಸಿಕೊಡಲು ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ್‌ ತಿಳಿಸಿದರು.

Advertisement

ಎಡಿಸಿ ಎನ್‌. ತಿಪ್ಪೇಸ್ವಾಮಿ, ಕೃಷಿ ಇಲಾಖೆ ಉಪನಿರ್ದೇಶಕ ಹುಲಿರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next