Advertisement

ಸರ್ಕಾರಿ ಹೈಟೆಕ್‌ ಶಾಲೆಗೆ ಚಾಲನೆ

10:10 AM Jul 28, 2019 | Suhan S |

ಯಲಹಂಕ: ಬೆಂಗಳೂರು ಉತ್ತರ ತಾಲೂಕಿನ ನವರತ್ನ ಅಗ್ರಹಾರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉದ್ಯಮಿಯೊಬ್ಬರ ನೆರವಿನಿಂದ ಹೈಟೆಕ್‌ ಸ್ವರೂಪ ಪಡೆದುಕೊಂಡಿದೆ.

Advertisement

ಮೂರು ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಂಡಿರುವ ಸರ್ಕಾರಿ ಶಾಲೆ ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಸಿದ್ಧಗೊಂಡಿದ್ದು, ಉದ್ಯಮಿ ರೋನಾಲ್ಡ್ ಕೊಲಾಸೊ ಅವರು ಶನಿವಾರ ಶಾಲೆ ಕಟ್ಟಡವನ್ನು ಲೋಕಾರ್ಪಣೆ ಗೊಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ನಾವು ಹೊಸತನದತ್ತ ಸಾಗಬೇಕಾದರೆ ಅಧ್ಯಯನಕ್ಕೆ ವಿಶೇಷ ವ್ಯವಸ್ಥೆ ಬೇಕು ಎಂದರು.

ಶಾಸಕ ಕೃಷ್ಣ ಬೈರೇಗೌಡ ಮಾತನಾಡಿ, ಮಗು ತನ್ನ ಭವಿಷ್ಯವನ್ನು ತಾನೇ ನಿರ್ಮಿಸಿಕೊಂಡು, ಸಮಾಜದಲ್ಲಿ ಕೇವಲ ಒಬ್ಬ ವ್ಯಕ್ತಿಯಾಗದೆ, ಸಾಮಾಜಿಕ ಶಕ್ತಿಯಾಗುವಂತಹ ವ್ಯವಸ್ಥೆ ಸೃಷ್ಟಿಯಾಗಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಇತರರಿಗೆ ಸರಿಸಮನಾಗಿ ನಿಲ್ಲುವ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.

ಹೈಟೆಕ್‌ ಶಾಲೆ ನಿರ್ಮಿಸಿಕೊಟ್ಟ ದ್ಯಮಿ ರೋನಾಲ್ಡ್ ಕೊಲಾಸೊ ಮಾತನಾಡಿ, ನವರತ್ನ ಅಗ್ರಹಾರದ ಪಾಠಶಾಲೆ ಶಿಥಿಲಗೊಂಡಿದ್ದು, ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಶಾಲೆ ಆಡಳಿತ ಮಂಡಳಿ ಕೇಳಿತ್ತು. ಅವರ ಮನವಿಯಂತೆ 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಜತೆಗೆ ಅಗತ್ಯ ಶಿಕ್ಷಕರನ್ನೂ ನೇಮಿಸಲಾಗಿದೆ. ಪ್ರಸಕ್ತ ವರ್ಷ 50 ವಿದ್ಯಾರ್ಥಿಗಳು ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಕೆಜಿ, ಯುಕೆಜಿ ಹಾಗೂ ಇಂಗ್ಲಿಷ್‌ ಮಾಧ್ಯಮ ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ ಎಂದರು.

Advertisement

ಚಿಕ್ಕಜಾಲ ಗ್ರಾ.ಪಂ ಅಧ್ಯಕ್ಷ ಮಹೇಶ್‌, ಎಂಎಲ್ಸಿ ನಾರಾಯಣ ಸ್ವಾಮಿ, ಡಿಡಿಪಿಐ ಜಯರಂಗ, ಬಿಇಒ ಕಮಲಾಕರ ಹಾಜರಿದ್ದರು.

 

ಹೇಗಿದ್ದ ಸರ್ಕಾರಿ ಶಾಲೆ ಹೇಗಾಯ್ತು!:

ನವರತ್ನ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ಕಟ್ಟಡ 1992ರಲ್ಲಿ ಸಂಪೂರ್ಣ ಶಿಥಿಲಗೊಂಡಿತ್ತು. ಮಳೆ ಬಂದಾಗ ಮಾಳಿಗೆ ಸೋರುತ್ತಿತ್ತು. ಹೊಸ ಕಟ್ಟಡ ನಿರ್ಮಿಸುವಂಥೆ ಶಿಕ್ಷಣ ಇಲಾಖೆ, ತಾಲೂಕು, ಜಿಲ್ಲಾ ಪಂಚಾಯಿತಿಗೆ ಹಲವು ಬಾಗಿ ಮನವಿ ಮಾಡಿದರೂ ಸ್ಪಂದಿಸದಿದ್ದಾಗ ಶಿಕ್ಷಕರು ಕೊಠಡಿಯಿಂದ ಹೊರಗೆ ಪಾಠ, ಪ್ರವಚನ ಮಾಡತೊಡಗಿದರು.
ಹೈಟೆಕ್‌ ಆದ ಶಾಲೆ:

ಪ್ರಸ್ತುತ 2 ಅಂತಸ್ತಿನ ಕಟ್ಟಡದಲ್ಲಿ 11 ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರತಿ ತರಗತಿಯೂ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ಹೊಂದಿವೆ. ಸಭೆ, ಸಮಾರಂಭ ಆಯೋಜನೆಗಾಗಿ ಆಡಿಯೋ, ವಿಡಿಯೋ ಪ್ರೊಜೆಕ್ಟರ್‌- ಸ್ಕ್ರೀನ್‌ ವ್ಯವಸ್ಥೆ ಇರುವ ಹೈಟೆಕ್‌ ಸಭಾಂಗಣ, ಕಂಪ್ಯೂಟರ್‌ ಲ್ಯಾಬ್‌, ಗ್ರಂಥಾಲಯ, ಕ್ರೀಡಾ ಉಪಕರಣಗಳ ಕೊಠಡಿ, ಕಚೇರಿ ಹಾಗೂ ದಾಖಲೆಗಳ ಕೊಠಡಿಗಳು ಪ್ರತ್ಯೇಕವಾಗಿವೆ. ಎಲ್ಲಾ ಕೊಠಡಿಗಳಲ್ಲೂ ಕಂಪ್ಯೂಟರ್‌ ಹಾಗೂ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಿದ್ದು, ಒಟ್ಟು 30 ಸಿಸಿ ಕ್ಯಾಮೆರಾ, ಆಧುನಿಕ ಪೀಠೊಕರಣಗಳಿವೆ. ಊಟಕ್ಕಾಗಿ ಪ್ರತ್ಯೇಕ ಕೊಠಡಿಯಿದ್ದು, ಶುದ್ಧ ನೀರಿನ ಘಟಕ, ಮಕ್ಕಳ ಆಟಿಕೆಗಳು, ಕ್ರೀಡಾಂಗಣ, ಬಾಲಕರಿಗೆ 11, ಬಾಲಕಿಯರಿಗೆ 5 ಶೌಚಾಲಯಗಳಿವೆ.
Advertisement

Udayavani is now on Telegram. Click here to join our channel and stay updated with the latest news.

Next