Advertisement

ಅಂತೂ ಇಂತೂ ಟೇಕಾಫ್ ಆಯ್ತು ಸರ್ಕಾರ

06:00 AM Jun 12, 2018 | |

ಬೆಂಗಳೂರು: ಸರಿ ಸುಮಾರು ಒಂದು ತಿಂಗಳ “ಅನಾಥ ಪ್ರಜ್ಞೆ’ಯ ಬಳಿಕ ಸೋಮವಾರದಿಂದ ರಾಜ್ಯದಲ್ಲಿ ಸರ್ಕಾರ ಕೆಲಸ ಆರಂಭಿಸಿದೆ.

Advertisement

ಮೇ 15ರಂದು ಅತಂತ್ರ ಫ‌ಲಿತಾಂಶ ಬಂದು ಸರ್ಕಾರ ರಚನೆಯ ಗೊಂದಲ ಮೂಡಿತ್ತು. ಕೊನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯಾದರೂ ಸಂಪುಟ ವಿಸ್ತರಣೆಯಾಗಿರಲಿಲ್ಲ.

ಇದೀಗ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಗೊಂದಲಗಳೆಲ್ಲಾ ಆಗಿ ಬರೋಬ್ಬರಿ 18 ದಿನಗಳ ಬಳಿಕ ಕೆಲವು ನೂತನ ಸಚಿವರು ಕೆಲಸ ಆರಂಭಿಸಿದ್ದು,ಸೋಮವಾರ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿ ಜನ ಪ್ರತಿನಿಧಿಗಳಿಲ್ಲದೆ ಹೆಚ್ಚಾ ಕಡಿಮೆ ನಿಂತೇ ಹೋಗಿದ್ದ ಆಡಳಿತಯಂತ್ರಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.

ಹೊಸ ಸರ್ಕಾರದಲ್ಲಿ ಇದುವರೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ
ಡಾ.ಜಿ.ಪರಮೇಶ್ವರ್‌ ಮಾತ್ರ ತಮ್ಮ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಬುಧವಾರವೇ ಸಂಪುಟ ವಿಸ್ತರಣೆ ಮಾಡಿದ್ದರೂ ಖಾತೆಗಳ ಹಂಚಿಕೆಯಾಗಿದ್ದು ಶುಕ್ರವಾರ. ಹೀಗಾಗಿ ಸಚಿವರು ತಮ್ಮ ಕೊಠಡಿ ಪ್ರವೇಶಿಸಿ ಕೆಲಸ ಆರಂಭಿಸುವುದು ವಿಳಂಬವಾಯಿತು. ಸೋಮವಾರ ಕೆಲವು ಸಚಿವರು ಕೆಲಸ ಆರಂಭಿಸಿದ್ದು, ಅದರಲ್ಲಿ ಕಾಂಗ್ರೆಸ್‌ನ ಸಚಿವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಸಚಿವರಾದ ಆರ್‌.ವಿ.ದೇಶಪಾಂಡೆ, ಡಿ.ಕೆ. ಶಿವಕುಮಾರ್‌, ಯು.ಟಿ.ಖಾದರ್‌, ಪ್ರಿಯಾಂಕ್‌ ಖರ್ಗೆ, ಶಿವಾನಂದ ಪಾಟೀಲ್‌, ಎಚ್‌.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ, ವೆಂಕಟರಮಣಪ್ಪ ಅವರು ಸೋಮವಾರ ತಮಗೆ ವಹಿಸಿದ ಖಾತೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಇಲಾಖೆಗಳ ಬಗ್ಗೆ ಮಾಹಿತಿ ಪಡೆದರು.

Advertisement

ಇಲಾಖೆಯಲ್ಲಿ ತುರ್ತಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆಯೂ ತಿಳಿದುಕೊಂಡು ಆ ನಿಟ್ಟಿನಲ್ಲಿ ತಕ್ಷಣದಿಂದ
ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೆ, ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಮುಖ್ಯಮಂತ್ರಿಗಳು ಹೊಸದಾಗಿ ಬಜೆಟ್‌ ಮಂಡಿಸಲು ನಿರ್ಧರಿಸಿದ್ದು, ಇಲಾಖೆಗಳಿಗೆ ಸಂಬಂಧಿಸಿದಂತೆ ಮೈತ್ರಿ ಸರ್ಕಾರದ ಪ್ರಣಾಳಿಕೆಗಳನ್ನು ಆಧರಿಸಿ ತಕ್ಷಣವೇ ಪ್ರಸ್ತಾವನೆ ಸಿದಟಛಿಪಡಿಸಿ ಮುಖ್ಯಮಂತ್ರಿಗಳು ಮತ್ತು ಹಣಕಾಸು ಇಲಾಖೆಗೆ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಸಂಜೆ ವೇಳೆ ಸಚಿವ ಎನ್‌.ಮಹೇಶ್‌ ಕೂಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಔಪಚಾರಿಕ
ಸಮಾಲೋಚನೆ ನಡೆಸಿ ಇಲಾಖೆಯ ಬಗ್ಗೆ ಮಾಹಿತಿ ಪಡೆದರು. ಈ ಮಧ್ಯೆ ಸಂಪುಟದ ಏಕೈಕ ಸಚಿವೆ ಡಾ.ಜಯಮಾಲಾ ಅವರೂ ವಿದಾನಸೌಧಕ್ಕೆ ಆಗಮಿಸಿ ತಮ್ಮ ಕೊಠಡಿ ವೀಕ್ಷಿಸಿ ತೆರಳಿದ್ದಾರೆ.

ಕಳೆಗಟ್ಟಿದ ವಿಧಾನಸೌಧ
ನೂತನ ಸರ್ಕಾರ ಕ್ರಿಯಾಶೀಲವಾಗಿ ಸಚಿವರು ಗಮಿಸುತ್ತಿದ್ದಂತೆ ಶಕ್ತಿಕೇಂದ್ರ ವಿಧಾನಸೌಧವೂ ಕಳೆಗಟ್ಟಿದೆ. ಸಚಿವರನ್ನು ಕಂಡು ಅಭಿನಂದಿಸಲು, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನೂರಾರು ಮಂದಿ ಆಗಮಿಸಿದ್ದರಿಂದ
ಕಾರಿಡಾರ್‌ಗಳಲ್ಲಿ ಜನರ ಓಡಾಟ ಹೆಚ್ಚಾಗಿತ್ತು. ವಿಧಾನಸೌಧದಲ್ಲಿದ್ದ ಸಚಿವರ ಕೊಠಡಿಗಳ ಮುಂದೆಯಂತೂ ಜನ ಜಾತ್ರೆಯೇ ಸೇರಿತ್ತು. ಈ ಮಧ್ಯೆ ಸಚಿವಾಲಯದ ಸಿಬ್ಬಂದಿಯೂ ಹೆಚ್ಚು ಲವಲವಿಕೆಯಿಂದ ಓಡಾಡುತ್ತಿದ್ದುದು ಕಂಡುಬಂತು. ಇನ್ನೊಂದೆಡೆ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದವರ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹೊಸ ಸಚಿವರ ಕೊಠಡಿಗಳ ಬಳಿ ಓಡಾಡುತ್ತಿದ್ದ ದೃಶ್ಯವೂ ಕಂಡುಬಂತು. ಸಚಿವರು ಬದಲಾದ ಕಾರಣ ಈ ಹಿಂದಿನ ಹೊರಗುತ್ತಿಗೆಯೂ ರದ್ದಾಗಿದ್ದು, ಪ್ರಸ್ತುತ ಈ ಸಿಬ್ಬಂದಿ ನಿರುದ್ಯೋಗಿಗಳಾಗಿದ್ದಾರೆ.ಹೀಗಾಗಿ ಮತ್ತೆ ಕೆಲಸ ಪಡೆಯಲು ಸಚಿವರ ಕೊಠಡಿ ಮುಂದೆ ಕಾಯುತ್ತಾ ನಿಂತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next