Advertisement

ಆಲಮಟ್ಟಿ-ಯಾದಗಿರಿ ರೈಲು ಆರಂಭಿಸಿ

09:03 AM Jun 25, 2019 | Suhan S |

ಮುದ್ದೇಬಿಹಾಳ: ಈ ಭಾಗದ 85 ವರ್ಷಗಳಷ್ಟು ಹಳೆ ಬೇಡಿಕೆಯಾಗಿರುವ ಆಲಮಟ್ಟಿ ಮುದ್ದೇಬಿಹಾಳ ಯಾದಗಿರಿ ನೂತನ ರೈಲು ಮಾರ್ಗ ಅನುಷ್ಠಾನದ ಕುರಿತು ಜು. 7ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪಟ್ಟಣದಲಿ ಆಲಮಟ್ಟಿ ಯಾದಗಿರಿ ರೈಲು ಮಾರ್ಗ ನಿರ್ಮಾಣ ಹೋರಾಟ ವೇದಿಕೆ ನೇತೃತ್ವದಲ್ಲಿ ದ್ಯಾಮವ್ವನ ಕಟ್ಟೆಯಿಂದ ಮಿನಿ ವಿಧಾನಸೌಧವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ಮಿನಿ ವಿಧಾನಸೌಧಕ್ಕೆ ಆಗಮಿಸಿದ ರ್ಯಾಲಿ ಉದ್ದೇಶಿಸಿ ವೆಂಕನಗೌಡ ಪಾಟೀಲ, ಬಿ.ಪಿ. ಕುಲಕರ್ಣಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಗಿರೀಶಗೌಡ ಪಾಟೀಲ, ಅರವಿಂದ ಕೊಪ್ಪ, ಶಿವಪುತ್ರ ಅಜಮನಿ, ಬಸವರಾಜ ನಂದಿಕೇಶ್ವರಮಠ ಮುಂತಾದವರು ಮಾತನಾಡಿದರು.

1933ರಲ್ಲಿ ಆಲಮಟ್ಟಿಯ ಗೈಡ್‌ ರೈಲ್ ರೋಡ್‌ ಲೈನ್ಸ್‌ ಕಂಪನಿ ಮೊದಲ ಹಂತದ ರೈಲು ಮಾರ್ಗ ಪ್ರಾರಂಭಿಸಿತ್ತು. ಆಲಮಟ್ಟಿಯಿಂದ ಹುಲ್ಲೂರವರೆಗೂ ಅಂದಾಜು 8-10 ಕಿ.ಮೀ.ವರೆಗೆ ಕೆಲಸವನ್ನೂ ಮಾಡಲಾಗಿತ್ತು. ಇಂದಿಗೂ ಅಲ್ಲಲ್ಲಿ ಕೆಲಸದ ಕುರುಹುಗಳು ಕಂಡು ಬರುತ್ತವೆ. ನಂತರ ಸ್ವಾತಂತ್ರ್ಯ ಸಂಗ್ರಾಮ ಏರುಗತಿ ಪಡೆದುಕೊಂಡಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. 1999ರಲ್ಲಿ ಬೇಡಿಕೆ ಪರಿಗಣಿಸಿದ ಆಗಿನ ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಮೂಲಕ ಅಂದಾಜು ಪತ್ರಿಕೆಯನ್ನೂ ತಯಾರಿಸಿ 302 ಕೋಟಿ ರೂ. ನಿಗದಿಪಡಿಸಿತ್ತು. 2004ರಲ್ಲಿ ಕರ್ನಾಟಕ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿತ್ತು. 1998ರಿಂದ ಇತ್ತೀಚಿನವರೆಗೆ ಹಲವು ಹೋರಾಟ ನಡೆದರೂ ಮಾರ್ಗದ ಅನುಷ್ಠಾನದ ಬಗ್ಗೆ ಯಾವುದೇ ಸಕಾರಾತ್ಮಕ ಸ್ಪಂಧನೆ ದೊರಕುತ್ತಿಲ್ಲ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದರೂ ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳ ನಿಷ್ಕಾಳಜಿಯೇ ಪ್ರಮುಖ ಕಾರಣ. ಈ ಬಾರಿ ತಾರ್ಕಿಕ ಅಂತ್ಯ ಕಾಣಿಸಲು ಮತ್ತೇ ಹೋರಾಟ ಕೈಗೆತ್ತಿಕೊಂಡು ಸಮಾಜಸೇವಕ ಗಿರೀಶಗೌಡ ಪಾಟೀಲ, ಶಿವನಗೌಡ ಬಿರಾದಾರ, ಶಿವಪುತ್ರ ಅಜಮನಿ, ಗುರುಸ್ವಾಮಿ ಬೂದಿಹಾಳಮಠ ಇವರ ಜೊತೆ ಮಾರ್ಗವ್ಯಾಪ್ತಿಯ ಪ್ರಮುಖ ನಗರಗಳಿಗೆ ತೆರಳಿ ಬೇಡಿಕೆ ಅವಶ್ಯಕತೆ ಮನವರಿಕೆ ಮಾಡಿಕೊಟ್ಟು, ಅಲ್ಲಲ್ಲಿ ಹೋರಾಟ ಸಮಿತಿ ರಚಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಸಾಕಷ್ಟು ಜನಬೆಂಬಲ ಸಿಕ್ಕಿದೆ ಎಂದು ನಂದಿಕೇಶ್ವರಮಠ ಹೇಳಿದರು.

ಈ ವೇಳೆ ಹೋರಾಟಗಾರರ ಮನವಿ ಸ್ವೀಕರಿಸಿ ಮಾತನಾಡಿದ ಹುಬ್ಬಳ್ಳಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎಂ.ಎಸ್‌.ಪಾಟೀಲ, ರಾಜ್ಯದ ಎಲ್ಲ ಸಂಸದರನ್ನು ಬೆಂಗಳೂರಿನಲ್ಲಾಗಲಿ, ದೆಹಲಿಯಲ್ಲಾಗಲಿ ಭೇಟಿ ಮಾಡಿ ಈ ಮಾರ್ಗದ ಅವಶ್ಯಕತೆ ಮನವರಿಕೆ ಮಾಡಿಕೊಟ್ಟು ಬೇಡಿಕೆ ಈಡೇರಿಸಲು ಶಕ್ತಿ ಮೀರಿ ಶ್ರಮಿಸುವ ಭರವಸೆ ನೀಡಿದರು.

Advertisement

ಪ್ರಯೋಜನಗಳೇನು?: ಈ ಮಾರ್ಗದ ಅನುಷ್ಠಾನದಿಂದ ವಾಣಿಜ್ಯ ಬೆಳೆಗಳಾದ ತೊಗರಿ, ಭತ್ತ, ಗೋಧಿ, ಕಡಲೆ, ಮೆಕ್ಕೆಜೋಳ, ಜೋಳ, ಸಜ್ಜೆ, ಖನಿಜ ಉತ್ಪನ್ನಗಳಾದ ಫರಸಿ ಕಲ್ಲು, ಸಿಮೆಂಟ್, ಗ್ರಾನೈಟ್, ಬೀಸುವ ಕಲ್ಲು, ಸಿಮೆಂಟ್ ಕಚ್ಚಾ ಪದಾರ್ಥ ಮುಂತಾದವುಗಳನ್ನು ವಿದೇಶಕ್ಕೆ ಕಳಿಸಬಹುದು. ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾಗಿದ್ದರಿಂದ ಕಡಿಮೆ ಖರ್ಚಿನಲ್ಲಿ ರೈಲು ಮೂಲಕ ಸಂಚರಿಸಲು ಈ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗುತ್ತದೆ. ಈ ಭಾಗದ ಪ್ರವಾಸೋದ್ಯಮವೂ ಬೆಳೆಯುತ್ತದೆ. ವಿಶಾಖಪಟ್ಟಣದಿಂದ ಗೋವಾದವರೆಗಿನ ಎರಡು ಪ್ರಮುಖ ಸಾಗರಗಳನ್ನು ಒಂದುಗೂಡಿಸುವ ಮಾರ್ಗವಾಗಲಿದೆ ಎಂದು ತಿಳಿಸಿ ಬೇಡಿಕೆ ಈಡೇರಿಕೆಯ ಅವಶ್ಯಕತೆ ಮನವರಿಕೆ ಮಾಡಿಕೊಡುವ ಕೇಂದ್ರ ರೈಲ್ವೆ ಸಚಿವರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ವಿನಯಕುಮಾರ ಪಾಟೀಲ ಮೂಲಕ ಸಲ್ಲಿಸಲಾಯಿತು.

ಪ್ರಮುಖರಾದ ಪ್ರಭು ಕಡಿ, ಕಾಶೀಬಾಯಿ ರಾಂಪುರ, ಗೌರಮ್ಮ ಹುನಗುಂದ, ಶಿಲ್ಪಾ ಶರ್ಮಾ, ಎಸ್‌.ಪಿ. ಬಾದರಬಂಡಿ, ಶಂಕ್ರಪ್ಪ ಹಡಪದ, ಎ.ಸಿ. ಹಿರೇಮಠ, ಎಸ್‌.ಆರ್‌. ಕುಲಕರ್ಣಿ, ಎಸ್‌.ಕೆ. ಕತ್ತಿ, ರಾಜು ಬಳ್ಳೊಳ್ಳಿ, ಶೇಖರ ಹಿರೇಮಠ, ರವೀಂದ್ರ ಬಿರಾದಾರ, ಉದಯ ರಾಯಚೂರ, ಸುಭಾಷ್‌ ಕಾಳಗಿ, ಆರ್‌.ಬಿ. ದೇಸಾಯಿ, ಸಂಜೀವಕುಮಾರ ಓಸ್ವಾಲ್, ಜಗದೀಶ ಪಂಪಣ್ಣವರ, ರಾಜಶೇಖರ ಹೊಳಿ, ವರ್ತಕರು, ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಸದಸ್ಯರು, ಮಹಿಳೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next