ಸುರಪುರ: ಇಲ್ಲಿಯ ಘಟಕದಿಂದ ಕಲಬುರಗಿಗೆ ಸಂಚರಿಸುವ ಸಗರನಾಡು ಬಸ್‌ಗಳ ಸಂಚಾರ ಕೂಡಲೇ ಆರಂಭಿಸುವಂತೆ ಒತ್ತಾಯಿಸಿ ದಲಿತ ಸಂಘಟನೆ (ಕ್ರಾಂತಿಕಾರಿ ಬಣ) ಕಾರ್ಯಕರ್ತರು ಸೋಮವಾರ ಬಸ್ ಘಟಕದ ಎದರು ಪ್ರತಿಭಟಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಬಸ್ ಘಟಕದಿಂದ ನಿತ್ಯ ಸಗರನಾಡು ಬಸ್‌ಗಳನ್ನು ಕಲಬುರಗಿಗೆ ಓಡಿಸಲಾಗುತ್ತಿತ್ತು. ಇದೀಗ ಕೊರೊನಾ ನೆಪದಲ್ಲಿ ಬಸ್ ಸೇವೆ ನಿಲ್ಲಿಸಲಾಗಿದ್ದು ಇದುವರೆಗೂ ಆರಂಭಿಸುತ್ತಿಲ್ಲ ಎಂದು ಆರೋಪಿಸಿದರು.
ಸಗರನಾಡು ಬಸ್‌ಗಳ ಸೇವೆಯಿಂದ ಘಟಕಕ್ಕೆ ಸಾಕಷ್ಟು ಆದಾಯ ಬರುತ್ತಿತ್ತು. ಜನರು ನಿಲ್ದಾಣಗಳಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ದರ ಹೆಚ್ಚಿರುವುದರಿಂದ ಎಕ್ಸ್ ಪ್ರೆಸ್ ಬಸ್‌ಗಳಿಗೆ ಯಾರೂ ಹತ್ತುತ್ತಿರಲಿಲ್ಲ. ಈಗ ಸಗರನಾಡು ಬಸ್ ಬಂದ್ ಮಾಡಿದಾಗಿನಿಂದ ಘಟಕ ನಷ್ಟದಲ್ಲಿದೆ ಎಂಬ ಮಾಹಿತಿ ದೊರಕಿದೆ. ಸುರಪುರ ಬಸ್ ಘಟಕ ಮುಚ್ಚಿಸುವ ದುರುದ್ದೇಶದಿಂದ ಇಲಾಖೆ ಕೆಲ ಮೇಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ಸಗರನಾಡು ಬಸ್‌ಗಳ ಸೇವೆ ನಿಲ್ಲಿಸಿದ್ದಾರೆ ಎಂದು ದೂರಿದ ಅವರು, ಬಡ ಪ್ರಯಾಣಿಕರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಸಗರನಾಡು ಬಸ್‌ಗಳ ಸಂಚಾರ ತಕ್ಷಣ ಆರಂಭಿಸುವಂತೆ ಒತ್ತಾಯಿಸಿದರು.
ವಾರದೊಳಗೆ ಬಸ್ ಆರಂಭಿಸದಿದ್ದರೆ ಸಾವಿರಾರು ಪ್ರಯಾಣಿಕರೊಂದಿಗೆ ಘಟಕಕ್ಕೆ ಬೀಗ ಹಾಕಿ ಬೃಹತ್ ಪ್ರತಿಭಟನೆ ಹಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಮನವಿ ಘಟಕ ವ್ಯವಸ್ಥಾಪಕ ವೀರಭದ್ರೆಪ್ಪ ಕದಂ ಅವರಿಗೆ ಸಲ್ಲಿಸಿದರು. ಈ ವೇಳೆ ತಾಲೂಕು ಸಂಚಾಲಕ ರಾಮು ಶೆಳ್ಳಗಿ, ಮಾನಪ್ಪ ಬಿಜಾಸ್ಪೂರ, ಖಾಜಾಹುಸೇನ್ ಗುಡುಗುಂಟಿ, ಮರಿಲಿಂಗಪ್ಪ ದೇವಿಕೇರಿ, ಜಟ್ಟೆಪ್ಪ ನಾಗರಾಳ, ಮಹೇಶ ಯಾದಗಿರಿ ಇತರರಿದ್ದರು.