Advertisement

ಕೊಳೆರೋಗದ ಲಕ್ಷಣ ಆರಂಭ: ಇಲಾಖೆಯಲ್ಲಿ ಪರಿಹಾರ ಇಲ್ಲ..!

08:55 AM Jul 22, 2017 | |

ಪುತ್ತೂರು: ಬೇಸಗೆಯಲ್ಲಿ ನೀರಿನ ಬರದಿಂದ ತತ್ತರಿಸಿದ ಕೃಷಿಕರಿಗೆ ಮಳೆಯ ಆಗಮನ ಸಮಾಧಾನ ತಂದರೂ ಗ್ರಾಮಾಂತರ ಭಾಗದ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಅಚ್ಚರಿಯೆಂದರೆ ಹಲವು ವರ್ಷಗಳಿಂದ ಕೃಷಿಕರನ್ನು ಬಾಧಿಸುತ್ತಿರುವ ಕೊಳೆರೋಗ ನಷ್ಟಕ್ಕೆ ಕೇಂದ್ರ, ರಾಜ್ಯ ಸರಕಾರ ಕೃಷಿ ಅಥವಾ ತೋಟಗಾರಿಕೆ ಇಲಾಖೆಯಲ್ಲಿ ಪರಿಹಾರ ವಿತರಣೆಗೆಂದು ಯಾವುದೇ ಯೋಜನೆಗಳನ್ನು ಅನುಷ್ಠಾನಿಸಿಲ್ಲ!

Advertisement

ಕಳೆದ ವರ್ಷ ಜೂ. 15ರ ಬಳಿಕ ಮಳೆ ಆರಂಭಗೊಂಡಿತ್ತು. ಈ ಬಾರಿ ಮೇ 20ಕ್ಕೆ ಮಳೆ ಆರಂಭಗೊಂಡಿತ್ತು. ಅಂದರೆ ಒಂದು ತಿಂಗಳ ಮೊದಲು ಮಳೆ ಸುರಿಯಲಾರಂಭಿಸಿದೆ. ಮದ್ದು ಸಿಂಪಡಣೆ ಕಾರ್ಯ ಆರಂಭಗೊಂಡಿದ್ದರೂ ಸುಳ್ಯ ತಾಲೂಕಿನ ಕೆಲ ಭಾಗಗಳಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಅದಕ್ಕೆ ಅಡ್ಡಿ ಉಂಟು ಮಾಡಿತ್ತು.

ಈಗ ಮಳೆ-ಬಿಸಿಲಿನ ಆಟದಿಂದ ಕೊಳೆರೋಗ ಸಮಸ್ಯೆ ಕಾಣಿಸಿಕೊಂಡಿದೆ. ಎರಡನೆ ಸುತ್ತಿನ ಸಿಂಪಡಣೆ ಕಾರ್ಯ ಆರಂಭದ ಮೊದಲೇ ಕಾಯಿ ಅಡಿಕೆ ಉದುರುತ್ತಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಸುಳ್ಯ, ಪುತ್ತೂರಿನ ಕೆಲ ತೋಟಗಳಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ಎಳೆ ಅಡಿಕೆ ಕಾಯಿ ಉದುರುವ ಕಾಯಿಲೆ ಕಾಣಿಸಿಕೊಂಡಿದೆ.

ಔಷಧ ಬಗ್ಗೆ ಎಚ್ಚರಿಕೆ
ಕೊಳೆರೋಗ ನಿಯಂತ್ರಣಕ್ಕಾಗಿ ಸಿಂಪಡಿಸುವ ಔಷಧ ಆಯ್ಕೆ ಬಗ್ಗೆ ಕೃಷಿಕರು ಎಚ್ಚರಿಕೆಯಿಂದ ಇರಬೇಕು. ಕೆಲ ನಕಲಿ ಔಷಧಗಳ ಬಳಕೆಯಿಂದ ಫಸಲಿನ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ತೋಟಗಾರಿಕೆ ಇಲಾಖೆ ಕೊಳೆರೋಗ ನಿಯಂತ್ರಣಕ್ಕೆ ಬೋಡೋì ದ್ರಾವಣ ಸಿಂಪಡಿಸಲು ಸಲಹೆ ನೀಡಿದೆ. ಅದಕ್ಕೆ ಸಬ್ಸಿಡಿಯ ಮೂಲಕ ಸಹಾಯಧನ ಒದಗಿಸುತ್ತಿದೆ. ಔಷಧದ ಬಗ್ಗೆ ಮೋಸದ ಜಾಲಕ್ಕೆ ಬಲಿಯಾಗದೆ, ಎಚ್ಚರಿಕೆ ವಹಿಸಿದರೆ ಫಸಲಿನ ಹಾನಿ ತಪ್ಪಿಸಬಹುದು ಎಂದು ಇಲಾಖೆ ತಿಳಿಸಿದೆ.

ಉದುರುವ ನಳ್ಳಿ
ಬಿಸಿಲು ಮಳೆಯ ಆಟದಿಂದ ಅಡಿಕೆ ಹಿಂಗಾರದ ಮೇಲೆ ಪರಿಣಾಮ ಬೀರಿದ್ದರೆ ಈಗ ಅದೇ ಬಿಸಿಲು ಮಳೆಯ ಆಟದಿಂದ ಎಳೆ ಅಡಿಕೆ ಹಳದಿ ಬಣ್ಣಕ್ಕೆ ತಿರುಗಿ ಬೀಳುತ್ತಿದೆ. ಎಳೆಯ ಕಾಯಿಗಳು ಹೀಗೆ ಬೀಳುವುದರಿಂದ ನಷ್ಟವಾಗುತ್ತಿದೆ. ಹೀಗಾಗಿ ಈ ಬಾರಿ ಅಡಿಕೆ ಫಸಲು ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಅಡಿಕೆ ಬೆಳೆಗಾರರು.
 
ಪುತ್ತೂರು ತಾಲೂಕಿನಲ್ಲಿ ಅಡಿಕೆ ಬೆಳೆಯುವ ಒಟ್ಟು ಪ್ರದೇಶ 9,025 ಎಕರೆ. ಸುಳ್ಯ ತಾಲೂಕಿನ ಒಟ್ಟು ಅಡಿಕೆ ಬೆಳೆಯುವ ಪ್ರದೇಶ 28,096 ಎಕರೆ. ಬಿಸಿಲು, ನೀರಿನ ಅಭಾವ, ಹಳದಿ ರೋಗ, ಕೊಳೆರೋಗ ಬಾಧೆ ಸೇರಿ ನಷ್ಟಕ್ಕೆ ಈಡಾಗುವ ಅಡಿಕೆ ಪ್ರಮಾಣ ಶೇ.50ಕ್ಕಿಂತ ಅಧಿಕವಾಗಿದೆ. 

Advertisement

ಕೊಳೆರೋಗಕ್ಕಿಲ್ಲ ಪರಿಹಾರ!
ಕೊಳೆರೋಗಕ್ಕೆ ಸಂಬಂಧಿಸಿ ನಷ್ಟ ಉಂಟಾದ ಬೆಳೆಗಾರನಿಗೆ ಪರಿಹಾರ ನೀಡುವ ಯೋಜನೆ ಇಲಾಖೆಗಳಲ್ಲಿ ಇಲ್ಲ. ಎರಡು ವರ್ಷದ ಹಿಂದೆ ಸರಕಾರ ಪ್ಯಾಕೇಜ್‌ ಪರಿಹಾರ ಮೊತ್ತ ಬಿಡುಗಡೆಗೊಳಿಸಿದ್ದು ಬಿಟ್ಟರೆ ಪ್ರತ್ಯೇಕ ಪರಿಹಾರ ಮೊತ್ತ ಮೀಸಲಿಟ್ಟಿಲ್ಲ. ಹವಾಮಾನ ಬೆಳೆ ವಿಮೆ ಯೋಜನೆಯಡಿ, ಅಡಿಕೆ ಮತ್ತು ಕರಿಮೆಣಸಿಗೆ ಬೆಳೆ ವಿಮೆ ಯೋಜನೆಯಿದ್ದರೂ ಅದು ಕೊಳೆರೋಗ ಬಂದ ಅನಂತರ ಪರಿಹಾರ ವಿತರಿಸುವಂತಹದಲ್ಲ.  

ರೈತನ ವಿಷಯದಲ್ಲಿ ಬೊಕ್ಕಸ ಖಾಲಿ! 
ಶಾಸಕರ, ಸಂಸದರ ವೇತನ ದುಪ್ಪಟ್ಟುಗೊಳಿಸಲು, ಬಹುರಾಷ್ಟ್ರೀಯ ಕಂಪೆನಿಗಳಿಗೆ ಮೂಲಸೌಕರ್ಯ ಒದಗಿಸಲು ಸರಕಾರದ ಬಳಿ ದುಡ್ಡಿದೆ. ಆದರೆ ದೇಶದ ಆರ್ಥಿಕ ಶಕ್ತಿಯಾಗಿದ್ದ ರೈತ ತಾನು ಬೆಳೆದ ಬೆಳೆ ನಷ್ಟಕ್ಕೆ ಈಡಾದಾಗ, ಪರಿಹಾರ ಕೊಡಿ ಎಂದು ಅರ್ಜಿ ಸಲ್ಲಿಸಿದರೆ ಇದೇ ಸರಕಾರಗಳು ಬೊಕ್ಕಸ ಖಾಲಿ ಅನ್ನುತ್ತವೆ. ಹೊಸ-ಹೊಸ ಯೋಜನೆ ಘೋಷಿಸುವ ಸರಕಾರಗಳು ವರ್ಷಂಪ್ರತಿ ರೈತರನ್ನು ಕಾಡುವ ಕೊಳೆರೋಗದಂತಹ ಫಸಲು ಹಾನಿಗಳಿಗೆ ತೋಟಗಾರಿಕೆ ಇಲಾಖೆ ಮೂಲಕ ಯೋಜನೆ ಅನುಷ್ಠಾನಿಸಿ ಪರಿಹಾರ ವಿತರಿಸಬಹುದಿತ್ತು. ಆ ಕೆಲಸವನ್ನು ಯಾವ ಸರಕಾರವೂ ಮಾಡಿಲ್ಲ. ನಿರ್ಲಕ್ಷéದ ಪರಮಾವಧಿ ಎಷ್ಟೆಂದರೆ ವರ್ಷದ ಹಿಂದೆ ಘೋಷಿಸಿದ ಬೆಂಬಲ ಬೆಲೆಯು ಈ ತನಕ ಅಡಿಕೆ ಬೆಳೆಗಾರರಿಗೆ ಸಿಕ್ಕಿಲ್ಲ.! 

ಅರ್ಜಿ ಖರ್ಚಿಗೂ ಸಾಲದು
ಕೊಳೆರೋಗಕ್ಕೆ ಪರಿಹಾರ ಹಣ ನಂಬಿ ನಷ್ಟಕ್ಕೆ ಒಳಗಾದ ಫಲಾನುಭವಿ ಅರ್ಜಿ ಸಲ್ಲಿಸಿದರೆ ಆತನಿಗೆ ಪರಿಹಾರ ಸಿಗುತ್ತಿಲ್ಲ. ಇಲ್ಲಿ ಸರಕಾರ ರೈತನ ಪರ ಎಂದು ಬಿಂಬಿಸಲು ಪರಿಹಾರಧನ ಘೋಷಣೆ ಮಾಡುತ್ತದೆ ಹೊರತು, ಈ ಮೊತ್ತದಿಂದ ಕೃಷಿಕನಿಗೆ ನಯಾ ಪೈಸೆಯು ಪ್ರಯೋಜನ ಸಿಗದು. ಕೆಲವೊಮ್ಮೆ ಅರ್ಜಿ ಹಾಕಲು ಮಾಡಿದ ವೆಚ್ಚದಷ್ಟೂ ಪರಿಹಾರ ಸಿಗುತ್ತಿಲ್ಲ. ರೈತನ ಶ್ರಮಕ್ಕೆ ತಕ್ಕ ಹಾಗೆ ನ್ಯಾಯಯುತ ಪರಿಹಾರ ನೀಡಬೇಕು ಅನ್ನುವುದು ನಮ್ಮ ಆಗ್ರಹ
ಶ್ರೀಧರ ಶೆಟ್ಟಿ, ಜಿಲ್ಲಾಧ್ಯಕ್ಷರು
ರೈತ ಸಂಘ, ಹಸಿರು ಸೇನೆ, ದ.ಕ.ಜಿಲ್ಲೆ  

–  ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next