Advertisement

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

03:10 PM Oct 04, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಚಾರಣಕ್ಕೆ 9 ತಿಂಗಳ ಅನಂತರ ಮರುಚಾಲನೆ ದೊರೆತಿದೆ. ಕೆಲವು ಮಾರ್ಪಾಡುಗಳೊಂದಿಗೆ ಅರಣ್ಯ ಇಲಾಖೆ ಚಾರಣ ಪಥ ಪ್ರವೇಶಕ್ಕೆ ಆನ್‌ಲೈನ್‌ ವ್ಯವಸ್ಥೆ ಪರಿಚಯಿಸಿದ್ದು, ಅದರಂತೆ ಇನ್ಮುಂದೆ ಚಾರಣಕ್ಕೆ ತೆರಳುವವರು ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಅರಣ್ಯ ವಿಹಾರ ವೆಬ್‌ಸೈಟ್‌ನಲ್ಲಿ ಮುಂಗಡವಾಗಿ ದಿನಾಂಕ ನಿಗದಿ ಮಾಡಿಕೊಳ್ಳಬೇಕು.

Advertisement

ಹೀಗೆ ಆನ್‌ಲೈನ್‌ ಬುಕಿಂಗ್‌ ಮಾಡಿಕೊಳ್ಳುವ ಸಂದರ್ಭದಲ್ಲಿ ಚಾರಣಿಗರು ಪಾನ್‌ಕಾರ್ಡ್‌, ವಾಹನ ಪರವಾನಗಿ ಪ್ರಮಾಣಪತ್ರ, ಆಧಾರ್‌ ಸಂಖ್ಯೆ ಸೇರಿ ಯಾವುದಾದರೊಂದು ಸರ್ಕಾರದ ಅಧಿಕೃತ ಗುರುತಿನ ಚೀಟಿ ಸಲ್ಲಿಸಬೇಕು. ಯಾರು ಆನ್‌ಲೈನ್‌ ಬುಕಿಂಗ್‌ ಮಾಡಿಕೊಂಡಿದ್ದಾರೆ, ಅವರೇ ಚಾರಣಕ್ಕೆ ತೆರಳಬೇಕಾಗುತ್ತದೆ. ಇದರಿಂದ ಆನ್‌ಲೈನ್‌ ಬುಕಿಂಗ್‌ನಲ್ಲಾಗುವ ಅವ್ಯವಸ್ಥೆ ಮತ್ತು ಅಕ್ರಮಕ್ಕೆ ಕಡಿವಾಣ ಹಾಕಬಹುದಾಗಿದೆ. ಅಲ್ಲದೆ, ಒಂದು ಫೋನ್‌ ನಂಬರ್‌ನಲ್ಲಿ 10 ಟಿಕೆಟ್‌ಗಳನ್ನು ಮಾತ್ರ ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರತೀ ಚಾರಣ ಪಥಕ್ಕೆ ದಿನವೊಂದಕ್ಕೆ 300 ಚಾರಣಿಗರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಸದ್ಯ 5ರಿಂದ 6 ಚಾರಣ ಪಥಗಳಿಗೆ ಮಾತ್ರ ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಮಾಸಾಂತ್ಯದಲ್ಲಿ ಎಲ್ಲ 23 ಚಾರಣ ಪಥಕ್ಕೂ ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆ ಅಳವಡಿಸಲಾಗುವುದು. ರಾಜ್ಯದಲ್ಲಿ ಮತ್ತಷ್ಟು ಚಾರಣ ಪಥಗಳನ್ನು ಗುರುತಿಸಲಾಗುತ್ತಿದ್ದು, ಸುಮಾರು 40ರಿಂದ 50 ಚಾರಣ ಪಥಗಳನ್ನು ನೂತನ ವ್ಯವಸ್ಥೆ ಅಡಿ ತರಲಾಗುವುದು. ಹೀಗೆ ಬುಕಿಂಗ್‌ ಮಾಡುವವರಿಗೆ 200ರಿಂದ 350 ರೂ.ವರೆಗೆ ಶುಲ್ಕ ವಿಧಿಸಲಾಗುವುದು. ಆನ್‌ಲೈನ್‌ ಬುಕಿಂಗ್‌ ಮಾಡಿಕೊಳ್ಳುವವರು 7 ದಿನಗಳು ಮುಂಚಿತವಾಗಿ ತಮ್ಮ ಬುಕಿಂಗ್‌ ರದ್ದು ಮಾಡಿಕೊಂಡರೆ ಪೂರ್ತಿ ಹಣ ಮರುಪಾವತಿ ಆಗಲಿದೆ.

ಹೊಸ ವ್ಯವಸ್ಥೆ: ಖಂಡ್ರೆ
ವಿಕಾಸಸೌಧದಲ್ಲಿ ಗುರುವಾರ ಈ ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಕಳೆದ ಜನವರಿ 26-27ರಂದು ಕುಮಾರಪರ್ವತ ಚಾರಣ ಪಥಕ್ಕೆ ಸಾವಿರಾರು ಮಂದಿ ಒಮ್ಮೆಲೇ ಪ್ರವೇಶಿಸಿದ್ದರು. ಅದರಿಂದ ಅಲ್ಲಿನ ಪರಿಸರ ಮತ್ತು ವನ್ಯಜೀವಿಗಳಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಚಾರಣ ಪಥಕ್ಕೆ ಪ್ರವೇಶಿಸುವವರಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಚಾರಣ ಪ್ರಕ್ರಿಯೆಗೆ ಹೊಸ ವ್ಯವಸ್ಥೆ ಜಾರಿಗೊಳಿಸಿ, ಮರುಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸದ್ಯ ಚಾರಣಕ್ಕೆ ಆನ್‌ಲೈನ್‌ ಬುಕಿಂಗ್‌ಗೆ ಮಾತ್ರ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ವನ್ಯಜೀವಿ ಸಫಾರಿ ಮತ್ತು ಬೋಟ್‌ ಸಫಾರಿ ಮುಂಗಡ ಬುಕಿಂಗ್‌ಗೆ ಇದರಲ್ಲೇ ಅವಕಾಶ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

20 ಚಾರಣಿಗರಿಗೊಬ್ಬ ಗೈಡ್‌
ಚಾರಣಕ್ಕೆ ತೆರಳುವವರು ಅಲ್ಲಿನ ಪರಿಸರದ ಬಗ್ಗೆ ವಿವರಿಸಲು ಹಾಗೂ ಮಾರ್ಗವನ್ನು ತೋರಿಸಲು ಗೈಡ್‌ ವ್ಯವಸ್ಥೆ ಮಾಡಲಾಗುವುದು. ಪ್ರತಿ 10ರಿಂದ 20 ಮಂದಿಗೆ ಒಬ್ಬರಂತೆ ಗೈಡ್‌ ಅನ್ನು ನಿಯೋಜಿಸಲಾಗುವುದು. ಇಕೋ ಟೂರಿಸ್‌ಂ ಬೋರ್ಡ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ಗೈಡ್‌ಗಳನ್ನು ಮಾತ್ರ ನೇಮಿಸಲಾಗುವುದು ಎಂದು ಸಚಿವರು ತಿಳಿಸಿದರು.

Advertisement

ಚಾರಣಪಥಕ್ಕೆ ಏಕಬಳಕೆ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಲಾಗಿದೆ. ಚಾರಣಕ್ಕೂ ಮುನ್ನ ಚಾರಣಿಗರು ತಮ್ಮ ಬಳಿಯಲ್ಲಿರುವ ಪ್ಲಾಸ್ಟಿಕ್‌ ವಸ್ತುಗಳನ್ನು, ಮದ್ಯ ಸೇರಿ ಇನ್ನಿತರ ನಿಷೇಧಿತ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಬೇಕು. ಒಂದು ವೇಳೆ ಚಾರಣ ಪೂರ್ಣಗೊಂಡು ವಾಪಸಾದಾಗ ಪ್ಲಾಸ್ಟಿಕ್‌ ಅಥವಾ ಇನ್ನಿತರ ನಿಷೇಧಿತ ವಸ್ತುಗಳು ದೊರೆತರೆ ಚಾರಣಿಗರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಬುಕಿಂಗ್‌ಗಾಗಿ ಚಾರಣಿಗರು ಮಾಡಬೇಕಾದ್ದಿಷ್ಟೇ: ಅರಣ್ಯ ಇಲಾಖೆಯ ವೆಬ್‌ಸೈಟ್‌: //www.aranyavihaara.karnataka.gov.in ಗೆ ಭೇಟಿ ನೀಡಿ, ಅರಣ್ಯ ವಿಹಾರ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು, ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಶುಲ್ಕ ಪಾವತಿಸಿ ಆನ್‌ಲೈನ್‌ ಬುಕಿಂಗ್‌ ಮಾಡಿಕೊಳ್ಳಬಹುದು.

ಚಾರಣಕ್ಕೆ ಅವಕಾಶ ಕಲ್ಪಿಸಿರುವ ತಾಣಗಳು
ಕೊಡಗು: ತಲಕಾವೇರಿ-ನಿಶಾನಿಮೊಟ್ಟೆ, ಸುಬ್ರಹ್ಮಣ್ಯ-ಕುಮಾರಪರ್ವತ-ಸುಬ್ರಹ್ಮಣ್ಯ, ಬೀದಹಳ್ಳಿ-ಕುಮಾರಪರ್ವತ-ಬೀದಹಳ್ಳಿ, ಬೀದಹಳ್ಳಿ-ಕುಮಾರಪರ್ವತ-ಸುಬ್ರಹ್ಮಣ್ಯ, ಚಾಮರಾಜನಗರ: ನಾಗಮಲೈ, ಚಿಕ್ಕಬಳ್ಳಾಪುರ: ಸ್ಕಂದಗಿರಿ, ಶುಲ್ಕ: 200ರಿಂದ 350 ರೂ. (ಜಿಎಸ್ಟಿ ಪ್ರತ್ಯೇಕ)

 

Advertisement

Udayavani is now on Telegram. Click here to join our channel and stay updated with the latest news.

Next