ಚಿಕ್ಕೋಡಿ: ಕೇಂದ್ರ ಸರ್ಕಾರ ನರೇಗಾ ಕೂಲಿ ಮೊತ್ತ ಹೆಚ್ಚಳ ಮಾಡಿದ್ದು, ಚಿಕ್ಕೋಡಿ ಭಾಗದಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಭರದಿಂದ ಸಾಗಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸದಲ್ಲಿ ನಿರತರಾಗಿದ್ದಾರೆ.
ಕೋವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಜನ ಹೊರಗೆ ಬರದಂತೆ ಲಾಕ್‌ಡೌನ್ ಆದೇಶ ಮಾಡಿ ಎಲ್ಲರೂ ಮನೆಯಲ್ಲಿ ಇರಬೇಕೆಂದು ಈ ಮೊದಲು ಆದೇಶ ಹೊರಡಿಸಿತ್ತು. ಆದರೆ ಕೂಲಿ ನಂಬಿಕೊಂಡು ಜೀವನ ನಡೆಸುತ್ತಿರುವ ಜನರು ಬೀದಿಗೆ ಬಿಳುವ ಪರಿಸ್ಥಿತಿ ನಿರ್ಮಾಣವಾಗುವುದನ್ನು ಗಮನಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಮೊತ್ತವನ್ನು 275 ರೂ.ಗೆ ಹೆಚ್ಚಳ ಮಾಡಿ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಿದೆ. ಇದರಿಂದ ಚಿಕ್ಕೋಡಿ ಭಾಗದಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಜನರು ಆಗಮಿಸುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನ 63 ಗ್ರಾಪಂ ವ್ಯಾಪ್ತಿಯಲ್ಲಿ 11,903 ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು 34,147 ಜನರು ಸಕ್ರಿಯ ಉದ್ಯೋಗ ಖಾತ್ರಿ ಚೀಟಿಗಳನ್ನು ಹೊಂದಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿವರೆಗೆ ಮನೆಯಲ್ಲಿದ್ದ ಕೂಲಿ ಕಾರ್ಮಿಕರು ಈಗ ನರೇಗಾ ಕೆಲಸಕ್ಕೆ ಆಸಕ್ತಿ ತೋರುತ್ತಿದ್ದಾರೆ. ತಾಲೂಕಿನ ಮುಗಳಿ ಗ್ರಾಮದಲ್ಲಿ 25 ಜನರು ಮತ್ತು ವಡ್ರಾಳ ಗ್ರಾಮದಲ್ಲಿ 35 ಜನರು ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ನನದಿ ಗ್ರಾಮ ವ್ಯಾಪ್ತಿಯಲ್ಲಿ ಕಾಲುವೆ ಹೂಳೆತ್ತುವಲ್ಲಿ ಮಗ್ನರಾಗಿದ್ದಾರೆ.
ಆಸಕ್ತರು ನರೇಗಾ ಕೆಲಸದಲ್ಲಿ ತೋಡಗಿಕೊಳ್ಳಬೇಕೆಂದು ಅಧಿಕಾರಿಗಳು ತಿಳಿ ಹೇಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ, ಗ್ರಾಮೀಣ ಮೂಲ ಸೌಕರ್ಯ ಕಾಮಗಾರಿಗಳು, ಕೃಷಿ ಹೊಂಡ ನಿರ್ಮಾಣ, ಕೃಷಿ ಬಾವಿ ತೆಗೆಯುವುದು. ರೈತರ ಹೊಲಗದ್ದೆಯಲ್ಲಿ ಬದು ನಿರ್ಮಾಣ, ರೈತರ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿಗಳು, ವಸತಿ ಯೋಜನೆಯಡಿ ಮನೆ ನಿರ್ಮಾಣ ಸೇರಿದಂತೆ ಕೆಲ ಕಾಮಗಾರಿಗಳಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡಬೇಕಿದೆ. ಜನರು ಮನೆಯಲ್ಲಿದ್ದು ಸಮಯ ಹಾಳು ಮಾಡದೇ ಸರ್ಕಾರ ನೀಡುವ ನರೇಗಾ ಕೆಲಸದಲ್ಲಿ ತೊಡಗಿಕೊಂಡು ಕೂಲಿ ಪಡೆಯಬಹುದಾಗಿದೆ.
ತಕ್ಷಣ ಉದ್ಯೋಗ ನೀಡಬೇಕು: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ನಗರ ಮತ್ತು ಪಟ್ಟಣ ಪ್ರದೇಶದಲ್ಲಿರುವ ಕೈಗಾರಿಕೆ ಉದ್ಯಮಗಳು ಸ್ಥಗಿತಗೊಂಡಿವೆ. ಸಣ್ಣ ಉದ್ದಿಮೆಗಳು ಮತ್ತು ಗುಡಿ ಕೈಗಾರಿಕೆಗಳು ಸಹ ಬಂದ್ ಆಗಿವೆ. ಜನರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಂಡು ಜೀವನ ನಡೆಸಲು ಪರದಾಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಅರಸಿ ಬಂದವರಿಗೆ ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ನೀಡಬೇಕೆಂದು ಸೂಚಿಸಲಾಗಿದೆ.
ಕೋವಿಡ್ 19 ಸೋಂಕು ಹರಡುತ್ತಿರುವುದರಿಂದ ನರೇಗಾ ಯೋಜನೆಯಡಿ ಕೆಲಸಕ್ಕೆ ಬರುವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಒಬ್ಬರಿಂದ ಮತ್ತೂಬ್ಬರು ಕನಿಷ್ಠ ಮೂರು ಮೀಟರ್ ಅಂತರದಲ್ಲಿ ಕೆಲಸ ಮಾಡಬೇಕು. ಸರ್ಕಾರದ ಆದೇಶ ಅನ್ವಯ ಉದ್ಯೋಗ ಅರಸಿ ಬಂದವರಿಗೆ ಕೆಲಸ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕೂಲಿ ಮೊತ್ತ 275 ರೂ.ಗೆ ಹೆಚ್ಚಿಸಿದೆ. ಈಗಾಗಲೇ ಚಿಕ್ಕೋಡಿ ತಾಲೂಕಿನಲ್ಲಿ ನರೇಗಾ ಕೆಲಸ ಆರಂಭವಾಗಿದೆ.
– ಕೆ.ಎಸ್.ಪಾಟೀಲ, ತಾಪಂ ಇಒ
-ಮಹಾದೇವ ಪೂಜೇರಿ