Advertisement

ಸಾಲ ಮನ್ನಾ ಸರಣಿ ಆರಂಭ: ಇದೊಂದೇ ಅಲ್ಲ ಪರಿಹಾರ

06:00 AM Dec 20, 2018 | Team Udayavani |

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಾಲಮನ್ನಾದ ವಿಚಾರದ ಮೇಲೆಯೇ ಚುನಾವಣೆ ಎದುರಿಸುವುದು ನಿಚ್ಚಳವಾಗುತ್ತಿದೆ. ಸಾಲಮನ್ನಾ ಭರವಸೆಯ ಮೂಲಕ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಭರವಸೆ ಈಡೇರಿಸಿದೆ. ಇತ್ತ ರಾಜಸ್ಥಾನದಲ್ಲೂ ಬುಧವಾರ ಸಾಲ ಮನ್ನಾ ಘೋಷಣೆಯಾಗಿದೆ. ಬೆನ್ನಲ್ಲೇ ಅಸ್ಸಾಂನ ಬಿಜೆಪಿ ಸರ್ಕಾರ ಕೂಡ 600 ಕೋಟಿ ರೂಪಾಯಿ ಸಾಲಮನ್ನಾ ಮಾಡಿರುವುದನ್ನು ಗಮನಿಸಿದಾಗ, ಮುಂಬರುವ ಲೋಕಸಭಾ ಚುನಾವಣೆ ರೈತಕೇಂದ್ರಿತವಾಗಿರಲಿದೆ ಎನ್ನುವುದು ಸ್ಪಷ್ಟವಾಗುತ್ತದೆ.  2019ರ ಚುನಾವಣೆಗಾಗಿ ವಿಷಯಗಳನ್ನು ಹುಡುಕಾಡುತ್ತಿದ್ದ ಕಾಂಗ್ರೆಸ್‌ಗೆ ಈಗ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ನೋಟ್‌ಬಂದಿ, ಜಿಎಸ್‌ಟಿ ವಿಷಯವನ್ನು ಕೇಂದ್ರದ ವಿರುದ್ಧ ಬಳಸಿಕೊಳ್ಳುವ ಅದರ ಪ್ರಯತ್ನ ಅಷ್ಟಾಗಿ ಫ‌ಲಕೊಡಲಿಲ್ಲ. ರಫೇಲ್‌ ಯುದ್ಧ ವಿಮಾನ ಖರೀದಿ ವಿಷಯದಲ್ಲೂ ಅದಕ್ಕೆ ಬಿಜೆಪಿಯನ್ನು ಕಟ್ಟಿಹಾಕಲು ಆಗುತ್ತಿಲ್ಲ.  

Advertisement

ತಮ್ಮ ಪಕ್ಷ 2019ಕ್ಕೆ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುವವರೆಗೆ ನರೇಂದ್ರ ಮೋದಿಯವರಿಗೆ ನಿದ್ರೆ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್‌,  ತನ್ನದು ಹುಸಿ ಭರವಸೆಯಲ್ಲ ಎಂಬುದನ್ನು ಸಾರಲು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಿಸುತ್ತಿತ್ತು. ಈ ರಾಜ್ಯಗಳಲ್ಲಿ ಮಾತು ತಪ್ಪಿದ್ದರೆ, ಲೋಕಸಭಾ ಚುನಾವಣೆಯ ಸಮಯದಲ್ಲಿ ತನ್ನ ಸಾಲಮನ್ನಾದ ಮಾತು ಬಲ ಕಳೆದುಕೊಳ್ಳುತ್ತದೆ ಎನ್ನುವುದು ಕಾಂಗ್ರೆಸ್‌ಗೆ ಅರಿವಿದೆ. 

ಅನಿವಾರ್ಯತೆ ಏನೇ ಇದ್ದರೂ ಚುನಾವಣೆಗೂ ಮುನ್ನ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಒಳ್ಳೆಯ ನಡೆಯೇ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ನೀಡುವ ಭರವಸೆಗಳು, ನಂತರದಲ್ಲಿ ಹುಸಿ ಎಂದೇ ಸಾಬೀತಾಗುತ್ತವೆ. ಸಹಜವಾಗಿಯೇ, ಈ ವಿದ್ಯಮಾನಗಳೆಲ್ಲ ಬಿಜೆಪಿಯು ತನ್ನ ಚುನಾವಣಾ ತಂತ್ರವನ್ನು ಬದಲಿಸಲು ಕಾರಣವಾಗಲಿವೆ. ಸಾಲಮನ್ನಾ ಅದರ ಪ್ರಣಾಳಿಕೆಯಲ್ಲಿ ಪ್ರಧಾನ ಜಾಗ ಪಡೆಯಬಹುದು. 

ಆದರೆ ಎಂದಿನಂತೆ, ಮತ್ತದೇ ಪ್ರಶ್ನೆ ಎದುರುನಿಲ್ಲುತ್ತಿದೆ. ಸಾಲಮನ್ನಾವೇ ಸಂಕಷ್ಟಕ್ಕೆ ಪರಿಹಾರವೇ? ಸಾಲಮನ್ನಾಕ್ಕೆ ಪೇನ್‌ಕಿಲ್ಲರ್‌ನಂತೆ ಕೆಲಸ ಮಾಡುವ ಶಕ್ತಿ ಇದೆ, ಆದರೆ ನೋವು ನಿವಾರಣೆಯಾದ ಮಾತ್ರಕ್ಕೆ ರೋಗ ನಿವಾರಣೆ ಆಗದು. ನೋವು ನಿವಾರಕದ ಶಕ್ತಿ ಕುಂದುತ್ತದೆ, ಮತ್ತೆ ಯಾತನೆ ಮುನ್ನೆಲೆಗೆ ಬರುತ್ತದೆ. ಪರಿಸ್ಥಿತಿ ಹೇಗಿದೆಯೆಂದರೆ, ರೈತ ಒಮ್ಮೆ ಸಾಲದಿಂದ ಮುಕ್ತನಾದರೂ, ಹವಾಮಾನ, ಉತ್ಪಾದನೆ ಮತ್ತು ಬೆಳೆಯ ದರ ಚಕ್ರ ಹೇಗಿದೆಯೆಂದರೆ, ಆತ ಪದೇ ಪದೆ ಸಾಲದ ಸುಳಿಗೆ ಸಿಲುಕುತ್ತಲೇ ಹೋಗಬೇಕಾಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ. ಮಹಾರಾಷ್ಟ್ರ, ಪಂಜಾಬ್‌, ರಾಜಸ್ಥಾನ ಮತ್ತು ಕೇರಳ ಸರ್ಕಾರಗಳು ಸಾಲಮನ್ನಾ ಹಾದಿ ತುಳಿದಾಗಿದೆ. ಆದರೆ ದೇಶಾದ್ಯಂತ ರೈತರಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯುವವರ ಸಂಖ್ಯೆ ಕೇವಲ 46.2 ಪ್ರತಿಶತವಿದೆ.  ಅಂದರೆ 50 ಪ್ರತಿಶತಕ್ಕಿಂತಲೂ ಕಡಿಮೆ. ಉಳಿದ 50 ಪ್ರತಿಶತದಷ್ಟು ರೈತರು ಸ್ವಸಹಾಯ ಗುಂಪುಗಳಿಂದಲೋ, ಬಡ್ಡಿ ದಂಧೆ ಮಾಡುವವರಿಂದಲೋ ಅಥವಾ ತಮ್ಮ ಸಂಬಂಧಿಕರಿಂದಲೋ ಪಡೆದಿರುತ್ತಾರೆ. ಸರ್ಕಾರಗಳು ಮಾಡುವ ಸಾಲಮನ್ನಾದಿಂದ ಈ ಎರಡನೆಯ ಬಹುದೊಡ್ಡ ವರ್ಗಕ್ಕೆ ನಯಾಪೈಸೆಯೂ ಉಪಯೋಗವಾಗುವುದಿಲ್ಲ. ಇನ್ನು ರಾಜ್ಯಗಳಿಗೆ ಕೇವಲ ಸಹಕಾರಿ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡುವ ಅಧಿಕಾರ ಇರುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಕೇಂದ್ರದ ಸಹಾಯ ಮತ್ತು ಬಜೆಟ್‌ ಹಂಚಿಕೆಯಲ್ಲಿ ಪಾಲು ಪಡೆಯಬೇಕಾಗುತ್ತದೆ. ಬ್ಯಾಂಕುಗಳ ಬದಲು, ಹೊರಗೆ ಸಾಲ ಪಡೆದ ರೈತರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಸಾವಿರಾರು ಕೋಟಿ ರೂಪಾಯಿಗಳ ಸಾಲಮನ್ನಾದಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದರಿಂದ ಅನ್ಯ ಯೋಜನೆಗಳಿಗೂ ಹೊಡೆತ ಬೀಳುತ್ತದೆ. 

ರೈತರ ಸಾಲಮನ್ನಾ ವಿಷಯದಲ್ಲಿ ನೀತಿ ಆಯೋಗ, ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಮತ್ತು ಅರ್ಥಶಾಸ್ತ್ರಜ್ಞರು ಅನೇಕ ಬಾರಿ ಪ್ರಶ್ನೆ ಎತ್ತಿದ್ದಾರೆ. ಬುಧವಾರ ನೀತಿ ಆಯೋಗ “ರೈತನ ಸಮಸ್ಯೆಗಳಿಗೆ’ ಸಾಲಮನ್ನಾ ಪರಿಹಾರವಲ್ಲ ಎಂದು ಹೇಳಿದೆ. ದೀರ್ಘ‌ದೃಷ್ಟಿಯಿಂದ ನೋಡಿದಾಗ ರೈತರ ಸಾಲಮನ್ನಾಕ್ಕಿಂತಲೂ ಅವರ ಆದಾಯವನ್ನು ದ್ವಿಗುಣಗೊಳಿಸಬೇಕೆಂಬ ಮೋದಿ ಸರ್ಕಾರದ ದೃಷ್ಟಿಕೋನ ಸರಿಯಾಗಿಯೇ ಇದೆ. ಆದರೆ, ಇದಕ್ಕೆ ತಕ್ಕಂಥ ನೀತಿಗಳು ರೂಪಪಡೆದು, ಅವು ಯಶಸ್ವಿಯಾಗಿ ಅನುಷ್ಠಾನಕ್ಕೆ ಬರುವುದೂ ಅಷ್ಟೇ ಮುಖ್ಯ. 

Advertisement
Advertisement

Udayavani is now on Telegram. Click here to join our channel and stay updated with the latest news.

Next