Advertisement

ಡ್ರಂಕ್‌ ಆ್ಯಂಡ್‌ ಡ್ರೈವ್‌ ಟೆಸ್ಟ್‌ ಆರಂಭ

11:36 AM Sep 26, 2021 | Team Udayavani |

ಬೆಂಗಳೂರು: ಕೊರೊನಾ ಕಾರಣಕ್ಕೆ ಡ್ರಂಕ್‌ ಆ್ಯಂಡ್‌ ಡ್ರೈವ್‌ ಪರೀಕ್ಷೆಗೆ ತಾತ್ಕಾಲಿಕ ಬ್ರೇಕ್‌ ಹಾಕಿದ್ದ ನಗರ ಸಂಚಾರ ಪೊಲೀಸರು ಶನಿವಾರರಾತ್ರಿಯಿಂದಲೇ ನಗರದೆಲ್ಲೆಡೆ “ಆಲ್ಕೋಮೀಟರ್‌’ ಮೂಲಕ ತಪಾಸಣೆ ಆರಂಭಿಸಿದ್ದಾರೆ ಎಂದು ನಗರ ಸಂಚಾರ ಪೊಲೀಸ್‌ ವಿಭಾಗ ಜಂಟಿ ಪೊಲೀಸ್‌ ಆಯುಕ್ತ ಡಾ ಬಿ.ಆರ್‌.ರವಿಕಾಂತೇಗೌಡ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಕಾರಣಕ್ಕೆ 2020ರ ಮಾರ್ಚ್‌ ಕೊನೇ ವಾರದಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆಗೆ ನಿಲ್ಲಿಸಲಾಗಿತ್ತು. ಆದರೆ, ವಾಹನ ಸವಾರರು ಅದನ್ನು ದುರುಪಯೋಗ ಪಡಿಸಿಕೊಂಡು ಅಪಘಾತಕ್ಕಾಡುಗುತ್ತಿದ್ದರು. ಈಗಾಗಲೇ ಕೊರೊನಾ 2ನೇ ಅಲೆ ಬಳಿಕ ದೇಶದ ಬೇರೆ ಬೇರೆ ಮಹಾನಗರಗಳಲ್ಲಿ ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ಆರಂಭವಾಗಿದೆ. ಹೀಗಾಗಿ ವೈದ್ಯರು, ತಜ್ಞರ ಸಲಹೆ ಪಡೆದು ಮೊದಲಿನಂತೆ ಅಲ್ಕೋಮೀಟರ್‌ ಮೂಲಕ ತಪಾಸಣೆ ನಡೆಯಲಿದೆ. ಈ ಮೂಲಕ ನಗರದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತ ತಡೆಯಲು ಈ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಒಬ್ಬರಿಗೆ ಒಂದೇ ಆಲ್ಕೋಮೀಟರ್‌: ಸಂಚಾರ ಪೊಲೀಸ್‌ ವಿಭಾಗದಲ್ಲಿರುವ 600 ಆಲ್ಕೋಮೀಟರ್‌ಗಳನ್ನು ಸಂಬಂಧಿಸಿದ ಕಂಪನಿಯವರು ಪರಿಶೀಲನೆ ನಡೆಸಿ, ಸಂಪೂರ್ಣವಾಗಿ ಸ್ಯಾನಿಟೈಸರ್‌ ಮಾಡಿಸಲಾಗಿದೆ. ಶನಿವಾರ ರಾತ್ರಿಯಿಂದಲೇ ನಗರದ 44 ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಆಲ್ಕೋ ಮೀಟರ್‌ನಲ್ಲಿಯೆ ತಪಾಸಣೆ ಆರಂಭಿಸಿದ್ದು, ಪ್ರತಿ ಠಾಣೆಗೆ 10 ಆಲ್ಕೋ ಮೀಟರ್‌ ಕೊಡಲಾಗಿದೆ. ಅವುಗಳನ್ನು “ಜಿಪ್‌ ಲಾಕ್‌ ಕವರ್‌’ನಲ್ಲಿ ಇಡಲಾಗಿದೆ. ಒಮ್ಮೆ ಒಬ್ಬರಿಗೆ ಉಪಯೋಗಿಸಿದ ಯಂತ್ರವನ್ನು ಬೇರೆಯವರಿಗೆ ಬಳಸುವುದಿಲ್ಲ. ಅನಂತರ ಅವುಗಳನ್ನು 48 ಗಂಟೆಗಳ ಕಾಲ ಜಿಪ್‌ ಲಾಕ್‌ ಕವರ್‌ನಲ್ಲಿ ಪ್ರತ್ಯೇಕಿಸಿಟ್ಟು, ಸ್ಯಾನಿಟೈಸರ್‌ ಮಾಡಲಾಗುತ್ತದೆ ಎಂದರು.

ಮೊದಲಿಗೆ ವಾಹನ ಸವಾರನ ಬಳಿ ಮೌಖೀಕವಾಗಿ ಮದ್ಯಪಾನ ಮಾಡಿರುವ ಬಗ್ಗೆ ಪರಿಶೀಲಿಸಲಾಗುತ್ತದೆ. ಅನುಮಾನ ಬಂದ ಬಳಿಕ ಆಲ್ಕೋಮೀಟರ್‌ ಮೂಲಕ ತಪಾಸಣೆ ನಡೆಸಲಾಗುತ್ತದೆ. ತಪಾಸಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಸಂಚಾರಪೊಲೀಸರು ಕೂಡ ಸ್ಥಳದಲ್ಲೇ ಸ್ಯಾನಿಟೈಸರ್‌ ಬಳಕೆ, ಹ್ಯಾಂಡ್‌ಗ್ಲೌಸ್‌, ಮಾಸ್ಕ್, ಫೇಸ್‌ಶೀಲ್ಡ್‌ ಬಳಸುವುದರ ಜತೆಗೆ ಪ್ರತಿಬಾರಿಯೂ ತಪಾಸಣೆ ನಡೆಸಿದ ನಂತರ ಹ್ಯಾಂಡ್‌ ಸ್ಯಾನಿಟೈಸರ್‌ ಮಾಡಲಾಗುತ್ತದೆ. ಇದರೊಂದಿಗೆ ಕುಡಿದು ಅನುಮಾನ ಬಂದ ವಾಹನ ಚಾಲಕ/ಸವಾರರ ವಿಡಿಯೋ ಮಾಡಲು ಅಧಿಕಾರಿ-ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

ಒಂದು ವೇಳೆ ಆಲ್ಕೋಮೀಟರ್‌ನಲ್ಲಿ ತಪಾಸಣೆಗೆ ಒಳಗಾಗಲು ಇಚ್ಚಿಸದಿದ್ದರೆ, ವೈದ್ಯಕೀಯ ಪರೀಕ್ಷೆಗೊಳಪಡಬೇಕಾಗುತ್ತದೆ. ಅದಕ್ಕೂ ನಿರಾಕರಿಸಿದರೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋ ಪದಡಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಜತೆಗೆ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ರೌಡಿಪಟ್ಟಿ ತೆರೆಯಲಾಗುತ್ತದೆ ಎಂದು ಎಚ್ಚರಿಸಿದರು.

Advertisement

ಎಎನ್‌ಪಿಆರ್‌ ಕ್ಯಾಮೆರಾ:

ನಗರದಲ್ಲಿ ಸಿದ್ದವಾಗುತ್ತಿರುವ 12 ಎಲಿವೇಟೆಡ್‌ ಕಾರಿಡಾರ್‌ಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಅಧ್ಯಯನ ನಡೆಸಿ ಸಂಬಂಧಿಸಿ ಕಂಪನಿ, ಇಲಾಖೆ ವರದಿ ಕೊಡಲಾಗಿತ್ತು. ಇದೀಗ 2ನೇ ಬಾರಿ ಮತ್ತೂಮ್ಮೆ ಅಧ್ಯಯನ ನಡೆಸಿ ಒಂದೆರಡು ದಿನಗಳಲ್ಲಿ ವರದಿ ಕೊಡಲಾಗುತ್ತದೆ. ನಂತರ ಈ ವೇಳೆ ಎಎನ್‌ಪಿಆರ್‌

ಕ್ಯಾಮೆರಾ(ಆಟೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್‌ನೇಷನ್‌) ಅಳವಡಿಕೆಗೆ ಕೊರಲಾಗುತ್ತದೆ. ಪ್ರತಿ ಎಲಿವೇಟೆಡ್‌ ಕಾರಿಡಾರ್‌ ಬಳಸುವ ಆರಂಭದಲ್ಲಿ ವಾಹನ ಸವಾರ ಎಷ್ಟು ವೇಗವಾಗಿ ವಾಹನ ಚಾಲನೆ ಮಾಡಿದ್ದಾನೆ. ಎಷ್ಟು ಸಮಯದಲ್ಲಿ ಎಲಿವೇಟೆಡ್‌ ಕಾರಿಡಾರ್‌ನಿಂದ ಹೊರಹೋಗಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಈ ಕ್ಯಾಮೆರಾದಲ್ಲಿ ಲಭ್ಯವಾಗಲಿದೆ ಎಂದರು.

ಟೋಯಿಂಗ್‌ ವೇಳೆ ಫೋಟೊ ಕಡ್ಡಾಯ:

ಟೋಯಿಂಗ್‌ ಮಾಡುವಾಗ ಸಂಚಾರ ಪೊಲೀಸರು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳಬೇಕು. ಒಬ್ಬ ಎಎಸ್‌ಐ ಸಮವಸ್ತ್ರದಲ್ಲಿ ಟೋಯಿಂಗ್‌ ವಾಹನದಲ್ಲಿರಬೇಕು. ಟೋಯಿಂಗ್‌ ಸಿಬ್ಬಂದಿ ಕೂಡ ಸಮವಸ್ತ್ರ ಧರಿಸಬೇಕು. ಟೋಯಿಂಗ್‌ಗೆ ಮೊದಲು ಧ್ವನಿವರ್ಧಕದ ಮೂಲಕ ಸೂಚಿಸಬೇಕು. ನಂತರವೂ ವಾಹನ ಮಾಲೀಕರ ಬರದಿದ್ದಾಗ, ವಾಹನದ ನಾಲ್ಕು ಕಡೆಯಿಂದ ಪೋಟೋ ತೆಗೆದುಕೊಂಡು ಟೋಯಿಂಗ್‌ ಮಾಡಬೇಕು.

ಟೋಯಿಂಗ್‌ ಮಾಡುವಾಗ ಮಾಲೀಕ ಬಂದರೆ, ನೋಪಾರ್ಕಿಂಗ್‌ ದಂಡ ಮಾತ್ರ ಕಟ್ಟಿಸಿಕೊಳ್ಳಬೇಕು. ಟೋಯಿಂಗ್‌ ಮಾಡಿದರೆ ಮಾತ್ರ ಟೋಯಿಂಗ್‌, ನೋಪಾರ್ಕಿಂಗ್‌ ದಂಡ ಎರಡನ್ನು ಕಟ್ಟಿಸಿಕೊಳ್ಳಬೇಕು. ಟೋಯಿಂಗ್‌ ಯಾರ್ಡ್‌ನಲ್ಲಿ ಒಬ್ಬ ಸಿಬ್ಬಂದಿ ಇರಲಿದ್ದಾರೆ. ಇದೇ ವೇಳೆ ಟೋಯಿಂಗ್‌ ನಿಯಮ ಪಾಲಿಸದ ಐದು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಜತೆಗೆ ಟೋಯಿಂಗ್‌ ಸಂದರ್ಭದಲ್ಲಿ ಲೈವ್‌ ಸ್ಟ್ರೀಮಿಂಗ್‌ ಮಾಡದ ಟೋಯಿಂಗ್‌ನ 45 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ ಬಿ.ಆರ್‌.ರವಿಕಾಂತೇಗೌಡ ಹೇಳಿದರು.

ಗುಂಡಿ ಮುಚ್ಚಲು ಬಿಬಿಎಂಪಿಗೆ ಸೂಚನೆ: ಪ್ರತಿ ಸಂಚಾರ ಠಾಣಾ ವ್ಯಾಪ್ತಿಯರಸ್ತೆಗಳಲ್ಲಿರುವ ಗುಂಡಿಗಳ ಫೋಟೋ ಸಮೇತ ಬಿಬಿಎಂಪಿಗೆ ಮಾಹಿತಿ ನೀಡಲಾಗು ತ್ತಿದೆ.ಅದೇ ರೀತಿ ಬಿಬಿಎಂಪಿ ಅಧಿಕಾರಿಗಳು ಕೂಡ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ರವಿಕಾಂತೇಗೌಡ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next