Advertisement

ಅಂಗನವಾಡಿಯಲ್ಲೇ ಎಲ್‌ಕೆಜಿ ಆರಂಭಿಸಿ

07:57 PM Sep 22, 2020 | Team Udayavani |

ಚಿತ್ರದುರ್ಗ: ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಸರ್ಕಾರಿ ಪಬ್ಲಿಕ್‌ ಶಾಲೆಗಳಲ್ಲಿ ನಡೆಸುವ ಬದಲು ಅಂಗನವಾಡಿಗಳಲ್ಲೇ ಆರಂಭಿಸಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್‌ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಪ್ರತಿಭಟಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.

ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನಡೆಸುವ ಮೂಲಕ ಐಸಿಡಿಎಸ್‌ ಯೋಜನೆಯನ್ನು ಉಳಿಸಬೇಕು. ಅಂಗನವಾಡಿಗಳಲ್ಲಿ ಎಲ್‌ಕೆಜಿ ಆರಂಭಿಸಿ ಎಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರ ಪರಿಶೀಲಿಸುವುದಾಗಿ ಹೇಳುತ್ತಿರುವುದರಲ್ಲಿ ಅರ್ಥವಿಲ್ಲ ಎಂದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಪಠ್ಯಪುಸ್ತಕಗಳನ್ನು ಒದಗಿಸಿ, ಸಮವಸ್ತ್ರ ವಿತರಿಸಿ, ಪ್ರಾಥಮಿಕ ಶಾಲೆಗೆ ದಾಖಲಾಗಲು ಅಂಗನವಾಡಿ ಕೇಂದ್ರಗಳಿಂದಲೇ ವರ್ಗಾವಣೆ ಪತ್ರ ನೀಡುವಂತೆ ಆದೇಶಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮರಣ ಹೊಂದಿದಾಗ ಅವರ ಮಗಳಿಗೆ ಅನುಕಂಪ ಆಧಾರದ ಮೇಲೆ ಹುದ್ದೆ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕೋವಿಡ್ ವಾರಿಯರ್ಸ್ ಗಳೆಂದು ಪರಿಗಣಿಸಿ ಮೃತಪಟ್ಟ ಸಂದರ್ಭದಲ್ಲಿ 30 ಲಕ್ಷ ರೂ.ವಿಮೆ ಹಾಗೂ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ಜಮುನಾಬಾಯಿ, ಭಾಗ್ಯಮ್ಮ, ವಿನೋದಮ್ಮ, ಸಾವಿತ್ರಮ್ಮ, ರತ್ನಮ್ಮ, ರಾಧಮ್ಮ, ಟಿ.ಆರ್‌.ಉಮಾಪತಿ, ಸತ್ಯಕೀರ್ತಿ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next