ಲಕ್ಷ್ಮೇಶ್ವರ: ಗ್ರಾಮದ ಮಧ್ಯಭಾಗದಲ್ಲಿಯೇ ಹಾದು ಹೋಗಿರುವ ರಸ್ತೆ ಹದಗೆಟ್ಟಿದ್ದು, ಅದರ ದುರಸ್ತಿಗೆ ಒತ್ತಾಯಿಸಿ ಸಮೀಪದ ಶಿಗ್ಲಿಯಲ್ಲಿ ಶನಿವಾರ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರದಿಂದ ಹಾವೇರಿ, ಗುತ್ತಲ, ಬೆಳ್ಳಟ್ಟಿ ಸಂಪರ್ಕಿಸುವ ಕಲ್ಮಲಾ-ಶಿಗ್ಗಾವ್ ರಾಜ್ಯ ಹೆದ್ದಾರಿ ಇದಾಗಿದ್ದು, ಗ್ರಾಮದ ದೊಡ್ಡೂರು ಕ್ರಾಸ್‌ನಿಂದ ಲಿಂಗರಾಜ ಸರ್ಕಲ್ವರೆಗೆ ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಿದೆ. ಐದಾರು ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿಕೊಳ್ಳಲು ಗ್ರಾಮಸ್ಥರಿಗೆ ನೋಟಿಸ್ ನೀಡಿದ್ದರು. ಈ ಸಂದರ್ಭದಲ್ಲಿ ರಸ್ತೆ ಪಕ್ಕದ ಬಹಳಷ್ಟು ನಿವಾಸಿಗಳು ಮನೆಗಳನ್ನು ತೆರವು ಮಾಡಿಕೊಂಡಿದ್ದರು. ಆದರೆ ಕೆಲವರು ಮಾತ್ರ ಅತಿಕ್ರಮಣ ತೆರವು ಮಾಡಿಕೊಳ್ಳದೆ ಕೋರ್ಟ್ ಮೊರೆ ಹೋಗಿದ್ದರು. ಇದರಿಂದಾಗಿ ರಸ್ತೆ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಆದರೆ ಮೊದಲೇ ಹಾಳಾದ ಈ ರಸ್ತೆಯಿಂದ ನಿತ್ಯವೂ ಸಂಚಾರಕ್ಕಷ್ಟೇ ಅಲ್ಲದೇ ಇಲ್ಲಿನ ನಿವಾಸಿಗಳು ಧೂಳು, ಕೆಸರು, ಗಲೀಜಿನಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಜನರು ಶನಿವಾರ ದಿಢೀರ್ ರಸ್ತೆಗೆ ಅಡ್ಡಲಾಗಿ ಕಟ್ಟಿಗೆ ಬಡ್ಡಿಗಳನ್ನಿಟ್ಟು ಟೈರ್‌ಗಳಿಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಮಳೆಗಾಲದಲ್ಲಿ ಒಂದು ರೀತಿಯಾದರೆ, ಬೇಸಿಗೆಯಲ್ಲಿ ಮತ್ತೂಂದು ರೀತಿಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದೇವೆ. ಈ ಸಮಸ್ಯೆ ಉದ್ಭವಿಸಿ ಐದಾರು ವರ್ಷ ಆದರೂ ಇತ್ಯರ್ಥವಾಗಿಲ್ಲ. ನಿತ್ಯ ಈ ಭಾಗದ ಜನರು ಧೂಳು ಸೇವಿಸಿ ಆನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮಕ್ಕಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕಾರಣ ಅಧಿಕಾರಿಗಳು ರಸ್ತೆ ನಿರ್ಮಿಸಲು ಮುಂದಾಗಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಡಿ.ವೈ. ಹುನಗುಂದ ದೂರಿದರು.
ಸಮಸ್ಯೆಯಿಂದ ಸಾಕಷ್ಟು ತೊಂದರೆಗೊಳಗಾಗಿದ್ದು, ಆದಷ್ಟು ಬೇಗನೆ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಸಂತೋಷ ಗೋಣೆಪ್ಪನವರ, ಪ್ರಶಾಂತ ಬಡೆಪ್ಪನವರ, ಕುಮಾರ ಬಿದರಳ್ಳಿ, ನೀಲಪ್ಪ ವಡೆಣ್ಣಿ, ಹನಂತಪ್ಪ ಗೋಣೆಪ್ಪನವರ, ಮಹಮ್ಮದ್‌ಗೌಸ್ ಕುದರಿಮನಿ, ಸದಾನಂದ ಶಿರಹಟ್ಟಿ, ಗಣೇಶ ನವಲೆ, ಮುದಕಣ್ಣ ಗಾಡದ, ಬಸವರಾಜ ಎರಿ, ಸಂತೋಷ ಬದಿ, ಪ್ರವೀಣ ಪತ್ತಾರ ಅನೇಕರು ಎಚ್ಚರಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ವಿಶ್ವನಾಥ ಚೌಗುಲೆ, ಕ್ರೈಮ್ ಪಿಎಸ್‌ಐ ಆರ್.ಬಿ. ಸೌದಾಗರ ಅವರು ಪ್ರತಿಭಟನಾಕರರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕವೇರ್ಪಡಿಸಿ ಸೋಮವಾರ ಸಭೆ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.