Advertisement

ಮೆಕ್ಕೆ ಜೋಳ-ಭತ್ತ ಖರೀದಿ ಕೇಂದ್ರ ಆರಂಭಿಸಿ

07:22 PM Nov 03, 2020 | Suhan S |

ದಾವಣಗೆರೆ: ಮೆಕ್ಕೆಜೋಳ ಹಾಗೂ ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ತೆರೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಆಗ್ರಹಿಸಿದ್ದಾರೆ.

Advertisement

ಸೋಮವಾರ ನಗರದ ಜಯದೇವ ವೃತ್ತದಲ್ಲಿ ಮಾಯಕೊಂಡ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಮೆಕ್ಕೆಜೋಳ ಹಾಗೂ ಭತ್ತದ ಬೆಲೆ ನೆಲಕ್ಕೆ ಕುಸಿದು ರೈತ ಸಂಕಷ್ಟ ಅನುಭವಿಸುತ್ತಿದ್ದಾನೆ. ಆದ್ದರಿಂದ ಸರಕಾರ ಕೂಡಲೇ ಭತ್ತ ಹಾಗೂ ಮೆಕ್ಕೆಜೋಳದ ಖರೀದಿ ಕೇಂದ್ರವನ್ನು ತೆರೆದು ಮಕ್ಕೆಜೋಳ ಕ್ವಿಂಟಾಲ್‌ಗೆ 2000 ರೂ. ಹಾಗೂ ಭತ್ತ ಕ್ವಿಂಟಾಲ್‌ ಗೆ 2500 ರೂ. ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮೆಕ್ಕಜೋಳ ಹಾಗೂ ಭತ್ತದ ಫಸಲು ಬಹುತೇಕ ಹಾನಿಯಾಗಿದೆ. ರೈತರು ಸಂಕಷ್ಟದಲ್ಲಿರುವುದರಿಂದ ಸರ್ಕಾರ ಅಂಥ ರೈತರ ನೆರವಿಗೂ ಸಹ ಬರಬೇಕು ಎಂದರು.

ಕಾಂಗ್ರೆಸ್‌ ಮುಖಂಡ ಮುದೇಗೌಡ್ರ ಗಿರೀಶ್‌ ಮಾತನಾಡಿ, ಈಗಾಗಲೇ ಎಪಿಎಂಸಿಯಿಂದ ಖರೀದಿ ಕೇಂದ್ರ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖರೀದಿ ಆರಂಭಿಸಿದರೆ ಮೆಕ್ಕೆಜೋಳ ಹಾಗೂ ಭತ್ತ ಸಂಗ್ರಹಿಸಲು ಎಪಿಎಂಸಿಯಿಂದ ಗೋದಾಮು ನೀಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಖರೀದಿ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಆರಂಭಿಸದೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಆರಂಭಿಸಿದರೆ ರೈತರು ತಾವುಗಳು ಬೆಳೆದ ಬೆಳೆಯನ್ನು ಖರೀದಿ ಕೇಂದ್ರಗಳಿಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಇದರಿಂದ ರೈತರಿಗೆ ಬೆಳೆ ಸಾಗಾಣಿಕೆಗೆ ಬಾಡಿಗೆ ಕಟ್ಟುವ ಹಣವೂ ಉಳಿಯುತ್ತದೆ ಎಂದರು.

Advertisement

ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್‌, ಶಂಭುಲಿಂಗಪ್ಪ, ಕರಿಬಸಪ್ಪ, ಅಂಜಿನಪ್ಪ ಮಾತನಾಡಿ, ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ರಾಮಗೊಂಡನಹಳ್ಳಿ ಶರಣಪ್ಪ, ಶ್ಯಾಗಲೇ ಸತೀಶ್‌, ವೆಂಕಟೇಶ್‌, ಕಾಂಗ್ರೆಸ್‌ ಕಿಸಾನ್‌ ಸಮಿತಿ ಅಧ್ಯಕ್ಷ ಹಾಲೇಶ್‌, ದೇವೇಂದ್ರಪ್ಪ, ಸಿದ್ದನೂರು ಪ್ರಕಾಶ್‌, ಆನಗೋಡು ಬಸವರಾಜಪ್ಪ, ಹರೋಸಾಗರ ಪ್ರಕಾಶ್‌ ಮತ್ತಿತರರು ಭಾಗಹಿಸಿದ್ದರು.

ಜಯದೇವ ವೃತ್ತದಲ್ಲಿ ಪ್ರತಿಭಟನೆ ನೆಡಸಿದ ಕಾರ್ಯಕರ್ತರು ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಸರಕಾರಕ್ಕೆ ಮನವಿ ಸಲ್ಲಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next