Advertisement

ನಾಗರೆಡ್ಡಿಹಳ್ಳಿಯಲ್ಲಿ ಸರ್ಕಾರಿ ಗೋಶಾಲೆ ಆರಂಭಿಸಿ

05:57 PM Jul 01, 2022 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರೆಡ್ಡಿಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಗೋ ಶಾಲೆಯನ್ನು ಮುಂಬರುವ ಅಕ್ಟೋಬರ್‌ ವೇಳೆಗೆ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಆರ್‌.ಲತಾ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಸರ್ಕಾರಿ ಗೋಶಾಲೆ ತೆರೆಯುವ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಗೋಶಾಲೆಯ ಕಾಮಗಾರಿಗಳನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಿ, ಮುಂದಿನ ಅಕ್ಟೋಬರ್‌ ವೇಳೆಗೆ ಗೋಶಾಲೆಯನ್ನು ಆರಂಭಿಸಬೇಕು. ಜೊತೆಗೆ ಮತ್ತೆರಡು ಸರ್ಕಾರಿ ಗೋ ಶಾಲೆಗಳನ್ನು ತೆರೆಯಲು ಸಂಬಂಧಪಟ್ಟ
ತಹಶೀಲ್ದಾರ್‌ಗಳ ಸಮನ್ವಯತೆಯೊಂದಿಗೆ ಸೂಕ್ತ ಸ್ಥಳಗಳನ್ನು ಗುರುತಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

30 ರಾಸುಗಳ ರಕ್ಷಣೆ: ಜಿಲ್ಲೆಯಲ್ಲಿ ಸಾಮೂಹಿಕ ಪ್ರಾಣಿ ಹತ್ಯೆಯನ್ನು ತಡೆಗಟ್ಟಲು ಹಾಗೂ ಹಬ್ಬದ ದಿನಗಳಲ್ಲಿ ಅನಧಿಕೃತ ಗೋ ಹಾಗೂ ಒಂಟೆಗಳ ಹತ್ಯೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು ವಿಚಾರಣಾ ದಳದ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಲು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ವಿಚಾರಣಾ ದಳವು ಈಗಾಗಲೇ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಚೆಕ್‌ ಪೋಸ್ಟ್‌ ಗಳನ್ನು ತೆರೆದು ಸಿಬ್ಬಂದಿಯನ್ನು ನೇಮಿಸಲಾಗಿದೆ.

ಹಬ್ಬದ ಸಂದರ್ಭಗಳಲ್ಲಿ ಮತ್ತಷ್ಟು ಚುರುಕುಗೊಳಿಸಲಾಗುವುದು. ಇತ್ತೀಚೆಗೆ 6 ಪ್ರಕರಣಗಳನ್ನು ದಾಖಲಿಸಿ 30 ರಾಸುಗಳನ್ನು ರಕ್ಷಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಇಲಾಖೆಯಿಂದಲೇ ಮಾಂಸ ಮಾರಾಟ: ಪಶು ಪಾಲನಾ ಇಲಾಖೆ ಮತ್ತು ಚಿಕ್ಕಬಳ್ಳಾಪುರ ಆಡು ಮತ್ತು ಕುರಿ ಉತ್ಪಾದಕ ರೈತ ಸಂಘದ ಸಹಯೋಗದಲ್ಲಿ ಶುದ್ಧ ಮತ್ತು ಗುಣಮಟ್ಟದ ಕುರಿ ಮತ್ತು ಮೇಕೆ ಮಾಂಸವನ್ನು ಮಾರಾಟ ಮಾಡಲು ಕ್ರಮವಹಿಸಲಾಗಿದೆ. ಮಾಂಸ ಮಾರಾಟ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ತೆರೆಯಲು ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದು, ಮುಂದಿನ ವಾರ ಆರಂಭವಾಗಲಿದೆ. ಈ ಕೇಂದ್ರದಲ್ಲಿ ಆಡು ಮತ್ತು ಕುರಿಗಳನ್ನು ರೈತರಿಂದಲೇ ತೂಕದ ಆಧಾರದ ಮೇಲೆ ಖರೀದಿಸಿ, ಅವುಗಳನ್ನು ಪರೀಕ್ಷೆಗೊಳಪಡಿಸಿ, ನಂತರ ಆರೋಗ್ಯವಂತ ಆಡು ಮತ್ತು ಕುರಿಗಳನ್ನು ಮಾತ್ರ
ಮಾಂಸ ಮಾರಾಟಕ್ಕೆ ಬಳಸಿಕೊಳ್ಳಲಾಗುವುದು.

Advertisement

ವಿಶೇಷ ಎಂದರೆ ಗ್ರಾಮಾಂತರ ಭಾಗಗಳಲ್ಲಿ ಮಾರಾಟವಾಗುವ ಗುಡ್ಡೆ ಮಾಂಸದ ರೀತಿಯಲ್ಲಿ ಮಾಂಸವನ್ನು ಗ್ರಾಹಕರಿಗೆ ಪೂರೈಸಲಾಗುವುದು ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ರಾಸು ಪರಿಪಾಲನೆ ಮಾಡುತ್ತಿರುವ ಖಾಸಗಿ ಗೋಶಾಲೆಗಳ ಮಾಲಿಕರಿಗೆ ರಾಸುಗಳ ಸಂಖ್ಯೆ ಮತ್ತು ಪರಿಪಾಲನೆಯನ್ನು ಖಾತ್ರಿಪಡಿಸಿಕೊಂಡು ಸಹಾಯಧನ ನೀಡಲು ತೀರ್ಮಾನಿಸಲಾಯಿತು. ಗೌರವ ಅನಿಮಲ್‌ ವೆಲ್‌ ಪೇರ್‌ ವಾರ್ಡನ್‌ ಮತ್ತು ಗೌರವ ವಕೀಲರನ್ನು ನೇಮಿಸಲು ಒಪ್ಪಿಗೆ ನೀಡಲಾಯಿತು.ಪುಣ್ಯಕೋಟಿ ದತ್ತು ಯೋಜನೆಯಡಿ ಹೈನು ರೈತರಿಂದ ಸಹಾಯಧನಕ್ಕಾಗಿ ಆನ್‌ಲೈನ್‌ನಲ್ಲಿ ಹೆಚ್ಚಿನ ನೋಂದಣಿ ಮಾಡಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌, ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ರವಿ, ವನ್ಯಜೀವಿ ಸಂರಕ್ಷಕ ಪೃಥ್ವಿರಾಜ್‌, ಪ್ರಾಣಿ ದಯಾ ಸಂಘದ ಪದಾಧಿಕಾರಿ ರಾಧ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next