Advertisement

ಸ್ಟಾರ್‌ಗಳು ಸರ್‌ ಸ್ಟಾರ್‌ಗಳು

01:20 PM Jul 01, 2019 | Sriram |

ವರ್ಷಗಟ್ಟಲೆ ಪಾಠ ಹೇಳಿದ ಸಂಗೀತ ಗುರುಗಳಿಗಿಂತ ಒಂದು ರಿಯಾಲಿಟಿ ಶೋದಲ್ಲಿ ಭಾಗವಹಿಸಿದ ಮಕ್ಕಳಿಗೆ ಹೆಚ್ಚಿನ ಗೌರವ ಸಿಗುವಾಗ, ಸರಳತೆಯೇ ಜೀವನವಾಗಿ ಬದುಕುತ್ತ ಬಂದವರು ತಳಮಳಗೊಳ್ಳುವುದು ಸಹಜ.

Advertisement

ನಾವು ಪುಟ್ಟಮಕ್ಕಳಾಗಿದ್ದಾಗ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್‌ ಹೌ ಐ ವಂಡರ್‌ ವಾಟ್ ಯು ಆರ್‌ ಈ ಹಾಡನ್ನು ಕೇಳಿ ಸಂಭ್ರಮಿಸುತ್ತಿದ್ದೆವು. ನಮ್ಮ ಪ್ರೀತಿಯ ಪಾರು ಕುಟ್ಟಿ ಟೀಚರ್‌ ಇದನ್ನು ಹಾವಭಾವ ಸಹಿತ ಮನದಟ್ಟಾಗುವಂತೆ ಹೇಳಿಕೊಡುತ್ತಿದ್ದರು. ಕಡು ಕಪ್ಪು ಆಗಸದಲ್ಲಿನ ಮಿಣುಕು ತಾರೆಗಳ ಸೌಂದರ್ಯಕ್ಕೆ ಮಾರುಹೋಗದವರು ಯಾರು? ಬಹುಶಃ ತಾರೆಗಳು ನಮ್ಮಿಂದ ದೂರ ಇರುವ ಕಾರಣವೇ ಅವುಗಳ ಬಗ್ಗೆ ಆಕರ್ಷಣೆ ಇದ್ದಿರಬೇಕು.ಈಗ ನಮ್ಮಲ್ಲಿಯೂ ‘ಸ್ಟಾರ್‌’ ಆಗಬೇಕೆಂದು ಹಂಬಲಿಸುವವರಿದ್ದಾರೆ. ಬಹುಶಃ ತಾರೆಯಾಗುವುದು ಸುಲಭವಲ್ಲದ ಕಾರಣದಿಂದಲೇ ಈ ತವಕವಿರಬೇಕು ! ಆದರೆ, ಇಂದಿನ ನವಮಾಧ್ಯಮಗಳು ಸುಲಭವಾಗಿ ‘ಸ್ಟಾರ್‌’ ಆಗುವುದಕ್ಕೆ ಪ್ರೇರಣೆ ನೀಡುತ್ತಿವೆ. ರಿಯಾಲಿಟಿ ಶೋಗಳಲ್ಲಿ ಸ್ಟಾರ್‌ ಆಗಿ ಮಿಂಚುವವರಿದ್ದಾರೆ. ಟಿಕ್‌ ಟಾಕ್‌ ಇನ್ನಿತರ ‘ಆಪ್‌’ಗಳ ಬಗ್ಗೆ ವಿಪರೀತವಾದ ಕ್ರೇಜ್‌ ಬೆಳೆಯುತ್ತಿದೆ.

ಹಾಗಿದ್ದರೆ ಈ ‘ಸ್ಟಾರ್‌’ಗಳು, ಸೆಲೆಬ್ರಿಟಿಗಳು ಎಂದರೆ ಯಾರು? ಅವರು ಹೇಗೆ ಉದ್ಭವವಾಗುತ್ತಾರೆ? ‘ಸ್ಟಾರ್‌’ಗಳು ಹುಟ್ಟುವುದು ಜನರ ನಡುವಿನಿಂದಲೇ. ಜನರು ಮೆಚ್ಚುವ ಏನೋ ಆಕರ್ಷಣೆ, ಅನುಕರಣೀಯ ಅಂಶಗಳು ಅವರಲ್ಲಿ ಇರುವುದರಿಂದಲೇ, ತಮ್ಮ ವಿಚಾರಗಳನ್ನು , ಮೌಲ್ಯಗಳನ್ನು ಬಹುಪಾಲು ಜನರು ಮೆಚ್ಚುವಂತೆ ಹೇಳಲು ಅವರಿಗೆ ಸಾಧ್ಯವಿರುವುದರಿಂದಲೇ ಅವರು ‘ಸ್ಟಾರ್‌’ ಆಗುತ್ತಾರೆ. ಕುಟುಂಬದಿಂದ ಹಿಡಿದು ದೇಶದವರೆಗೆ ತಮ್ಮ ಪುಟ್ಟ ಪುಟ್ಟವಲಯದಲ್ಲಾದರೂ ಸರಿಯೇ ನಾವು ‘ಸ್ಟಾರ್‌’ಗಳನ್ನು ನೋಡಿರುತ್ತೇವೆ. ಮನದ ಮೂಲೆಯಲ್ಲಾದರೂ, ಹೆಚ್ಚಿನವರಿಗೆ ತಾವೂ ಗುರುತಿಸಲ್ಪಡಬೇಕು, ವೇದಿಕೆಗಳಲ್ಲಿ ಮಿಂಚಬೇಕು ಎಂದೆಲ್ಲ ಆಸೆಗಳಿರುತ್ತವೆ. ಖ್ಯಾತಿ ಎನ್ನುವ ಮಾಯಾ ಜಿಂಕೆಯ ಆಕರ್ಷಣೆಯೇ ಅಂತದ್ದು. ಹಾಗೆಂದು ಯಶಸ್ಸಿಗೆ ಬೇಕಾದ ತಪನ, ನಿರಂತರ ಪ್ರಯತ್ನ, ತಾಳ್ಮೆ ನಮ್ಮಲ್ಲಿ ಇದೆಯೇ ಎನ್ನುವುದೂ ಇಲ್ಲಿ ಗಮನಿಸಬೇಕಾದ ಅಂಶ. ಯಶಸ್ಸಿನ ಅಲೆಗಳ ಮೇಲೆ ವಿಹರಿಸುವಾಗಿನ ಆನಂದವೇ ಅಂಥಾದ್ದು. ಅದೊಂದು ನಶೆ, ಅಮಲು. ಹಾಗೆಂದು ಯಶಸ್ಸು ಸದಾ ಕಾಲ ನಮ್ಮ ಕೈಯಲ್ಲಿರುವುದಿಲ್ಲ. ಚಪ್ಪಾಳೆ ತಟ್ಟುವ ಕೈಗಳು ಸ್ತಬ್ಧವಾದಂತೆ, ದಿಢೀರನೆ ವಾಸ್ತವದ ಅರಿವಾದಾಗ ಅದೇನೋ ಹೇಳಲಾಗದ ಕಸಿವಿಸಿ. ಹೀಗಾಗಿಯೇ ಪ್ರಸಿದ್ಧಿಯ ಉತ್ತುಂಗಕ್ಕೇರಿದ್ದ ಸಿನೆಮಾ ನಟರು, ಕಲಾವಿದರು, ಹೆಚ್ಚೇಕೆ ಸಾಹಿತಿಗಳು ಕೂಡ ತಮಗಿರುವ ಬೇಡಿಕೆ ಕಡಿಮೆ ಆದಾಗ ಮೂಲೆಗುಂಪಾಗಿ ಖನ್ನತೆಗೊಳಗಾಗಿರುವುದನ್ನು ನೋಡಿರುತ್ತೇವೆ. ಹಾಗಿದ್ದರೂ ‘ಸ್ಟಾರ್‌’ ಗಳು ಜನ ಮಾನಸದ ಮೇಲೆ ಬೀರುವ ಪ್ರಭಾವ ಅಪಾರ. ಅವರನ್ನು ಅತಿಯಾಗಿ ಹಚ್ಚಿಕೊಳ್ಳುವ ಅಭಿಮಾನಿಗಳು ಅತಿರೇಕವಾಗಿ ವರ್ತಿಸುವುದೂ ಇದೆ. ಇತ್ತೀಚೆಗೆ ಮಲಯಾಳದ‌ಲ್ಲಿ ಮಂಜು ವಾರಿಯರ್‌ ನಟಿಸಿದ ಮೋಹನ್‌ ಲಾಲ್ ಸಿನೆಮಾದಲ್ಲಿ ನಾಯಕಿ ಮೋಹನ್‌ಲಾಲ್ ಮೇಲೆ ಅದೆಷ್ಟು ಅಭಿಮಾನ ಬೆಳೆಸಿಕೊಳ್ಳುತ್ತಾಳೆಂದರೆ ಮಾನಸಿಕ ರೋಗಿಯಾಗುವಷ್ಟು. ಕೊನೆಗೆ ಆಕೆ ವಾಸ್ತವವನ್ನು ಒಪ್ಪಿಕೊಂಡು ಸ್ಕ್ರೀನ್‌, ರಿಯಲ್ ಎಂದೆಲ್ಲ ವ್ಯತ್ಯಾಸ ಅರಿಯುತ್ತಾಳೆ. ಅಭಿಮಾನಿ ಸಂಘಗಳು, ಕಟೌಟ್, ಮಾರಾಮಾರಿಗಳು… ಹೀಗೆ ಫಿಲ್ಮ್ ಸ್ಟಾರ್‌ ಗಳದ್ದೊಂದು ವಿಸ್ಮಯ.

ಸೆಲೆಬ್ರಿಟಿಗಳ ಜಗತ್ತು
ಸೆಲೆಬ್ರಿಟಿಗಳಲ್ಲಿ ಜನಸಾಮಾನ್ಯರಲ್ಲಿ ಇರದ ಆತ್ಮ ಸ್ಥೈರ್ಯ, ಬದುಕಿನ ಕಷ್ಟಗಳನ್ನು ಮೀರುವ ಫೀನಿಕ್ಸ್‌ ನಂತಹ ಜೀವಂತಿಕೆ, ಛಲ ಇರುವುದರಿಂದಲೇ ಅವರನ್ನು ಜನ ಆರಾಧಿಸುತ್ತಾರೆ. ತಾವು ಬಯಸುವ, ಆದರೆ ಜನಾಭಿಪ್ರಾಯಕ್ಕೆ ಹೆದರಿ ಕೈಗೂಡದ ಜೀವನ ಶೈಲಿಯೂ ಒಂದು ರೀತಿಯ ಆಕರ್ಷಣೆ. ಇನ್ನು ಜನಪ್ರಿಯ ವ್ಯಕ್ತಿಗಳು ಪ್ರಭಾವಿ ವ್ಯಕ್ತಿಗಳೂ ಆಗಿರುತ್ತಾರೆ. ಅಸಲಿಗೆ ದೊಡ್ದ ಜನಸಮೂಹವನ್ನು ಪ್ರಭಾವಿಸಲು ಸಾಧ್ಯವಾಗಿರುವುದರಿಂದಲೇ ಅವರು ಸೆಲೆಬ್ರಿಟಿಗಳಾಗಿರುತ್ತಾರೆ. ಸಾಮಾನ್ಯವಾಗಿ ನಾವು ನಮ್ಮ ಆಸಕ್ತಿಯ ವಲಯಗಳಲ್ಲಿ ಸೆಲೆಬ್ರಿಟಿಗಳನ್ನು ಕಂಡುಕೊಳ್ಳುತ್ತಿರುತ್ತೇವೆ. ಅವರು ನಮಗೊಂದು ಮಾದರಿಯನ್ನು , ಕನಸುಗಳನ್ನು ಕಟ್ಟಿ ಕೊಡುತ್ತಿರುತ್ತಾರೆ.

ಇದೀಗ ಟೆಕ್ನಾಲಜಿಯ ವರವೋ ಶಾಪವೋ ಇನ್ನೊಂದು ಟ್ರೆಂಡ್‌ ಬೆಳೆಯುತ್ತಲಿದೆ; ಅದು ದಿಢೀರ್‌ ಜನಪ್ರಿಯತೆಯ ಹುಚ್ಚು. ಇದಕ್ಕೆ ಕಾರಣ ಸಾಮಾಜಿಕ ಮಾಧ್ಯಮಗಳು. ಫ‚ೇಸ್‌ ಬುಕ್‌, ವಾಟ್ಸ್‌ ಆಪ್‌, ಇನ್‌ಸ್ಟ್ರಾಗ್ರಾಂ ಎಂದೆಲ್ಲ ತಾವು ಉಪ್ಪಿಟ್ಟು ತಿಂದಿದ್ದು, ಚಹಾ ಕುಡಿದಿದ್ದು, ಗೋವಾಗೆ ಹೋಗಿದ್ದು ಹೀಗೆ ಪ್ರತಿಯೊಂದನ್ನೂ ಅಪ್‌ಲೋಡ್‌ ಮಾಡುತ್ತ, ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿಕೊಳ್ಳುತ್ತ… ನಿಧಾನವಾಗಿ ಒಂದು ವರ್ಚುವಲ್ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂದೆನಿಸುತ್ತಿದೆ. ತೀರಾ ‘ಗೀಳು’ ಎನ್ನಲಾಗದಿದ್ದರೂ ಹೆಚ್ಚಿನವರು ಒಂದಲ್ಲ ಒಂದು ಸಾಮಾಜಿಕ ಮಾಧ್ಯಮದಲ್ಲಿ, ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಇನ್ನು ಫೇಸ್‌ ಬುಕ್‌ನಲ್ಲೋ ಯಾವುದೋ ವಾಟ್ಸ್‌ ಆಪ್‌ ಗ್ರೂಪ್‌ನಲ್ಲೋ ನಾವು ಇದ್ದೇ ಇರುವ ಕಾರಣ ನಮ್ಮ ಬಗ್ಗೆ ಯಾರು ಬೇಕಾದರೂ ವಿವರಗಳನ್ನು ಪಡೆದುಕೊಳ್ಳಲು ನಾವೇ ಅವಕಾಶ ಮಾಡಿಕೊಟ್ಟಿರುತ್ತೇವೆ. ಠಣ್ಣನೆ ಮೊಬೈಲ್ಗೆ ಬಂದು ಬೀಳುವ ಈಮೈಲ್ಗಳು, ಮೆಸೇಜ್‌ಗಳು, ನೋಟಿಫಿಕೇಶನ್‌ಗಳು… ಹೀಗೆ ಈ ಆಕರ್ಷಣೆಗಳಿಂದ ಬಿಡಿಸಿಕೊಳ್ಳಲು ಗಟ್ಟಿ ಮನಸ್ಸು ಬೇಕು. ತನ್ನ ಸೆಲ್ಫಿಗೆ ಹೆಚ್ಚು ಲೈಕ್‌ ಬರಲಿಲ್ಲ ಎಂದು ಸುಸೈಡ್‌ ಮಾಡಿಕೊಂಡ ಹುಡುಗಿ, ಅಪಾಯಕಾರಿ ಸ್ಥಳಗಳಲ್ಲಿ ಫೊಟೊ ಕ್ಲಿಕ್ಕಿಸಲು ಹೋಗಿ ಸಾವಿಗೀಡಾಗುವ ಯುವಕರು… ಹೀಗೆ ಇದರ ವೃತ್ತ. ಇತ್ತೀಚೆಗೆ ಟಿಕ್‌ ಟಾಕ್‌ಆ್ಯಪ್‌ ಬಂದ ಮೇಲೆ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ವಿಡಿಯೋಗಳನ್ನು ಹಂಚಿಕೊಂಡು ಪ್ರಸಿದ್ಧಿ ಪಡೆದವರ ಉದಾಹರಣೆಗಳು ಇರುವಂತೆಯೇ ತೀರಾ ಸಂಕಟದ ಕತೆಗಳೂ ಇವೆ. ಕೆಲವರಂತೂ ಯದ್ವಾತದ್ವಾ ಕುಣಿದು ಟ್ರೋಲ್ ಆಗುತ್ತಿರುತ್ತಾರೆ. ತಮಿಳುನಾಡಿನಲ್ಲಂತೂ ಒಬ್ಟಾಕೆ ಟಿಕ್‌ ಟಾಕ್‌ ಗೆ ಅದೆಷ್ಟು ಅಡಿಕ್ಟ್ ಆಗಿದ್ದಾಳೆಂದರೆ, ‘ಅದನ್ನು ಬಿಟ್ಟುಬಿಡು’ ಎಂದು ಬುದ್ಧಿ ಹೇಳಿದ್ದಕ್ಕೆ ಆಕೆ ಟಿಕ್‌ ಟಾಕ್‌ ನಲ್ಲೇ ವಿಡಿಯೋ ಮಾಡಿ ವಿಷ ಕುಡಿದು ತೀರಿಕೊಂಡಳು. ಆಗೊಮ್ಮೆ ಈಗೊಮ್ಮೆ ಟಿಕ್‌ ಟಾಕ್‌, ಡಬ್‌ ಸ್ಮಾಶ್‌ ಎಂದು ಖುಷಿ ಪಡುವವರ ಬಗ್ಗೆ ಇಲ್ಲಿ ಹೇಳುತ್ತಿಲ್ಲ.

Advertisement

ತಮ್ಮ ಪಾಡಿಗೆ ತಾವು ವೆಬ್‌ ಸಿರೀಸ್‌, ಶಾರ್ಟ್‌ ಫಿಲಂ ಎಂದೆಲ್ಲ ಬಿಜಿಯಾಗಿರುತ್ತ, ಅದು ವೈರಲ್ ಆದರೆ ಖುಷಿ ಪಡುತ್ತ, ಫ‚ೇಸ್‌ಬುಕ್‌ನಲ್ಲೋ , ಸಾಹಿತ್ಯದ ಗ್ರೂಪ್‌ನಲ್ಲೋ ಸಕ್ರಿಯರಾಗಿರುತ್ತ ಆರಾಮಾಗಿರುವವರಿದ್ದಾರೆ. ಸಣ್ಣದಾಗಿ ಸಾಮಾಜಿಕ ಜಾಲತಾಣಗಳಲ್ಲಿಯೇ ಅವಕಾಶಗಳಿವೆ. ಕಥಾಗುಚ್ಛ, ಪ್ರತಿಲಿಪಿ, ಪಾರಿಜಾತ ಗ್ರೂಪ್‌ ಎಂದೆಲ್ಲ ಗ್ರೂಪ್‌ಗ್ಳಿವೆ, ಅಂತರ್ಜಾಲ ಪತ್ರಿಕೆಗಳಿವೆ, ವಾಟ್ಸಾಪ್‌ ಗ್ರೂಪ್‌ಗ್ಳಿವೆ. ತಮ್ಮ ಕತೆ, ಕವಿತೆ, ಅಡುಗೆ, ಚಿತ್ರ ಹೀಗೆಲ್ಲ ಹಂಚಿಕೊಳ್ಳುತ್ತಿರುತ್ತಾರೆ. ಮೊಳಕೆಯಲ್ಲಿರುವ ತಮ್ಮ ಅಭಿರುಚಿಗಳನ್ನು ಗಂಭೀರವಾಗಿ ಪೋಷಿಸಿಕೊಳ್ಳಲು ಇವು ಸಹಕಾರಿ.

-ಜಯಶ್ರಿ ಬಿ.

Advertisement

Udayavani is now on Telegram. Click here to join our channel and stay updated with the latest news.

Next