ಅಂತೂ ಇಂತೂ ಐಟಿ ದಾಳಿ ಅಂತ್ಯಗೊಂಡಿದೆ. ಕಳೆದ ಎರಡು ದಿನಗಳಿಂದಲೂ ಭಾರೀ ಸುದ್ದಿಯಲ್ಲಿದ್ದ ನಟ, ನಿರ್ಮಾಪಕರ ಮನೆ ಮೇಲಿನ ಐಟಿ ದಾಳಿ ಬಹುತೇಕ ಪೂರ್ಣಗೊಂಡಿದೆ. ಸದ್ಯಕ್ಕೆ ನಟರೆಲ್ಲರೂ ತಮ್ಮ ತಮ್ಮ ಕೆಲಸಗಳತ್ತ ಮುಖ ಮಾಡಿದ್ದಾರೆ. ನಟರೆಲ್ಲರೂ ಐಟಿ ದಾಳಿ ವೇಳೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಅಲ್ಲಿಗೆ ಅಧಿಕಾರಿಗಳು ತಮ್ಮ ಕೆಲಸ ಮುಗಿಸಿಕೊಂಡು ನಟರುಗಳ ಮನೆಯಿಂದ ಹೊರನಡೆದಿದ್ದಾರೆ. ಅತ್ತ ನಟರು ಕೂಡ ಎಂದಿನಂತೆ ತಮ್ಮ ಚಿತ್ರಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ ಖುಷಿಯಾಗಿದೆ.
ಪುನೀತ್‌ರಾಜಕುಮಾರ್ ಅವರು ಐಟಿ ದಾಳಿ ವೇಳೆ ಸಂಪೂರ್ಣ ಅಧಿಕಾರಿಗಳಿಗೆ ಸಹಕರಿಸಿದ್ದಲ್ಲದೆ, ಎಲ್ಲದ್ದಕ್ಕೂ ಉತ್ತರ ಕೊಟ್ಟು, ಶನಿವಾರ ಹುಬ್ಬಳ್ಳಿ ಕಡೆ ಪಯಣ ಬೆಳೆಸಿ, ಅಲ್ಲಿ ನಡೆದ ಅವರ ಅಭಿನಯದ “ನಟ ಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರಷ್ಟೇ ಅಲ್ಲ, ಅವರ ಕುಟುಂಬ ವರ್ಗ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಇನ್ನು, ಶಿವರಾಜಕುಮಾರ್ ಅವರು ಸಹ ಎರಡು ದಿನಗಳ ಕಾಲ ಮನೆಯಲ್ಲೇ ಇದ್ದರು. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟರು.
ಶನಿವಾರ ಎಂದಿನಂತೆ, ಸ್ವತಃ ಅವರೇ ತಮ್ಮ ಕಾರು ಚಾಲನೆ ಮಾಡಿಕೊಂಡು ಲಾಂಗ್ ಡ್ರೈವ್ ಹೊರಟಿದ್ದು ವಿಶೇಷ. ಇನ್ನು, ಸುದೀಪ್ ಕೂಡ “ಬಿಗ್‌ಬಾಸ್’ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ. ಅತ್ತ ಯಶ್ ಕೂಡ ತುಂಬಾ ಕೂಲ್ ಆಗಿಯೇ ತಮ್ಮ ಕುಟುಂಬದವರ ಜೊತೆ ಮಾತುಕತೆಯಲ್ಲಿ ತೊಡಗಿ ಅಲ್ಲಿಂದ ಹುಬ್ಬಳ್ಳಿಗೆ “ನಟಸಾರ್ವಭೌಮ’ ಆಡಿಯೋ ಬಿಡುಗಡೆಗೆ ತೆರಳಿದರು. ಹೀಗೆ ಎರಡ್ಮೂರು ದಿನಗಳಿಂದ ಐಟಿ ದಾಳಿಯ ಸುದ್ದಿಯಾಗಿದ್ದ ನಟರು, ಶನಿವಾರ ಹಸನ್ಮುಖರಾಗಿಯೇ ಮನೆಯಿಂದ ಹೊರಗಡೆ ಬಂದು ಅಭಿಮಾನಿಗಳಿಗೆ ದರ್ಶನ ಭಾಗ್ಯ ನೀಡಿದರು.
ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅದಕ್ಕೆ ನಮ್ಮ ಕುಟುಂಬ ಕೂಡ ಸಹಕರಿಸಿದೆ. ಐಟಿ ದಾಳಿಯಾದ ಬಗ್ಗೆ ನಮಗೆ ಅಸಮಾಧಾನ ಇಲ್ಲ. ಅಷ್ಟಕ್ಕೂ ಈ ರೀತಿಯ ದಾಳಿ ನಡೆದಾಗ ನಾಗರೀಕರಾಗಿ ಸಹಕಾರ ತೋರಬೇಕಿರುವುದು ನನ್ನ ಧರ್ಮ. ಅಂತೆಯೇ ತೋರಿದ್ದೇವೆ. ಅಧಿಕಾರಿಗಳು ಸಹ ಸೌಮ್ಯದಿಂದಲೇ ವರ್ತಿಸಿದ್ದಾರೆ. ಅನುಮಾನ ಇಲ್ಲವೇ ದೂರು ಬಂದಾಗ ಉದ್ಯಮಿಗಳು ಅಥವಾ ನಟರ ಮೇಲೆ ಐಟಿ ದಾಳಿ ನಡೆಯುವುದು ಸಾಮಾನ್ಯ. ಇದು ಸಹ ಹಾಗೆಯೇ ನಡೆದಿದೆ. ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸಿದ್ದವರ ಮನೆ ಮೇಲಷ್ಟೇ ಈ ದಾಳಿ ನಡೆದಿದೆ ಎಂಬುದು ಗೊತ್ತಿಲ್ಲ. ಆ ಉದ್ದೇಶದಿಂದ ಅಧಿಕಾರಿಗಳು ದಾಳಿ ನಡೆಸಿಲ್ಲ. ಹಾಗೆ ನೋಡಿದರೆ, ನಮ್ಮ ಮನೆಯ ಮೇಲೆ ಐಟಿ ದಾಳಿ ಇದು ಮೊದಲಲ್ಲ. 1984 ರಲ್ಲಿ ಚೆನ್ನೈನಲ್ಲಿ ನಾವು ವಾಸವಿದ್ದ ಮನೆಯ ಮೇಲೂ ಐಟಿ ದಾಳಿಯಾಗಿತ್ತು. ಬೆಂಗಳೂರಿನ ಕಚೇರಿ, ಫಾರ್ಮ್ ಹೌಸ್ ಮೇಲೂ ದಾಳಿಯಾಗಿತ್ತು ಆಗಲೂ ನಾವು ಸರಿಯಾಗಿ ತೆರಿಗೆ ಪಾವತಿಸಿದ್ದೆವು. ಅದೇನೆ ಇರಲಿ, ದಾಳಿ ಅಂತ್ಯವಾಗಿ, ಐಟಿ ಅಧಿಕಾರಿಗಳು ನೋಟಿಸ್ ನೀಡಿದಾಗ ನಾನು ಮತ್ತು ಕುಟುಂಬದವರು ಹೋಗಿ ಹೇಳಿಕೆ ನೀಡುತ್ತೇವೆ
-ಪುನೀತ್‌ರಾಜಕುಮಾರ್, ನಟ
ಗುರುವಾರ ಬೆಳಗ್ಗೆ ವಾಕಿಂಗ್ ಹೋಗಬೇಕಿತ್ತು. ಆದರೆ, ಅವತ್ತು ಹೋಗಲಿಲ್ಲ. ಲೇಟ… ಆಗಿ ಹೋದರಾಯ್ತು ಅಂತ ಸುಮ್ಮನಿದ್ದಾಗಲೇ ಐಟಿ ಅಧಿಕಾರಿಗಳು ಬಂದರು. ಗುರುವಾರ, ಶುಕ್ರವಾರ ವಾಕಿಂಗ್ ಮಾಡಲಿಲ್ಲ. ಪತ್ನಿ ಗೀತಾ ಮತ್ತು ಮಗಳ ಜೊತೆ ಬಾಲ್ಕನಿಯಲ್ಲೇ ಓಡಾಡಿದೆ. ಇದು ಸ್ವಲ್ಪಮಟ್ಟಿಗೆ ಕಿರಿಕಿರಿಯಾಗಿತ್ತು. ದಾಳಿ ವೇಳೆ ಬೇಜಾರಾಗಿತ್ತು. ಸತತ ಎರಡು ದಿನ ಪರಿಶೀಲನೆ ನಡೆಸಿದರು. ಅಭಿಮಾನಿಗಳ ಆಶೀರ್ವಾದದಿಂದ ನಮ್ಮ ಮನೆ ದೊಡ್ಡದಿದೆ. ಹಾಗಾಗಿ, ಅಷ್ಟು ಸಮಯ ಬೇಕಾಯಿತು. ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾವು ಸಹಕರಿಸುತ್ತಿದ್ದೆವು. ಈ ಮೂರು ದಿನಕ್ಕೆ ಯಾವ ಕಾರ್ಯಕ್ರಮವೂ ಇರಲಿಲ್ಲ. ಸಾಮಾನ್ಯವಾಗಿ ಪತ್ನಿ ಜೊತೆ ಲಾಂಗ್ ಡ್ರೈವ್ ಹೋಗುತ್ತಿದ್ದೆ. ಇಲ್ಲವೆಂದರೆ,ಯಾವುದಾದರೊಂದು ಚಿತ್ರ ನೋಡುತ್ತಿದ್ದೆ.
-ಶಿವರಾಜಕುಮಾರ್, ನಟ
“ಐಟಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಹಾಜರು ಪಡಿಸಬೇಕಾಗಿದ್ದರಿಂದ ಎರಡು ದಿನಗಳಿಂದ ಅದೇ ಕೆಲಸದಲ್ಲಿ ನಿರತವಾಗಿದ್ದೆ. ಹಾಗಾಗಿ ಮನೆಯಲ್ಲಿ ಹೆಂಡತಿ ಹಾಗೂ ಮಗಳನ್ನೂ ಬಿಟ್ಟಿರಬೇಕಾಯಿತು. ಇದು ನನಗೆ ಕಷ್ಟವಾಯಿತು. ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮುಂದೆ ಈ ವಿಚಾರಕ್ಕೆ ಕರೆದರೆ ಖಂಡಿತಾ ಹೋಗುತ್ತೇನೆ. ಐಟಿ ದಾಳಿಯ ಬಗ್ಗೆ ಸಾಕಷ್ಟು ಊಹಾಪೋಹ ಮಾತುಗಳು ಕೇಳಿ ಬರುತ್ತಿದೆ. ವಿಜಯ್ ಕಿರಗಂದೂರ್ ಅವರ ವಿಚಾರಕ್ಕೆ ನಮ್ಮ ಮನೆ ಮೇಲೆ ದಾಳಿ ಆಗಿದೆ ಎಂಬ ಮಾತು ಕೇಳುತ್ತಿದೆ. ಕೆಲವರು ಅಷ್ಟು ಸಿಕು¤, ಇಷ್ಟು ಸಿಕು¤ ಅಂತಿದ್ದಾರೆ. ಅದೆಲ್ಲ ಬುಲ್‌ಶಿಟ್‌ಗಳನ್ನ ತೋರಿಸಬಾರದು. ಇನ್ನು ಐಟಿ ದಾಳಿಯ ವಿಷಯವನ್ನು ಕೇಳಿದ ಅಭಿಮಾನಿಗಳು ಮನೆಮುಂದೆ ಕಾಯುತ್ತಿದ್ದರು ಅಂತ ಕೇಳಿದೆ. ಆ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಐಟಿ ಸಂಬಂಧಿಸಿದ ಗೊಂದಲಗಳಿಗೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.
-ಯಶ್ ನಟ
ಇದು ತಲೆಕೆಡಿಸಿಕೊಳ್ಳುವ ವಿಷಯವಲ್ಲ.ಕೆಜಿಎಫ್ ದೊಡ್ಡ ಯಶಸ್ಸು ಕಂಡಿದೆ. ಎರಡನೇ ವಾರ ಮುಗಿಯುವ ಹೊತ್ತಿಗೆ ಅಧಿಕಾರಿಗಳು ಬಂದು ದಾಖಲೆ ಪರಿಶೀಲಿಸಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ. ಪುನಃ ವಿಚಾರಣೆ ಮಾಡಿದರೆ ಸ್ಪಂದಿಸುತ್ತೇವೆ. ಆದರೂ, ಕೆಜಿಎಫ್ ಪ್ರಚಾರ ಮಾಡುವ ವೇಳೆ ದಾಳಿ ಮಾಡಿದ್ದು ಬೇಸರವಾಗಿದೆ. ನಾವು ಇನ್ನೂ ಪ್ರಚಾರದ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದೆವು. ಆದರೂ ಅವರು ಮಾಹಿತಿ ಆಧರಿಸಿ ಬಂದಿದ್ದಾರೆ.
-ವಿಜಯ್ ಕಿರಗಂದೂರು, ನಿರ್ಮಾಪಕ