Advertisement

ಥಿಯೇಟರ್ ‘ರೀ ಓಪನ್’ಗೆ ಸ್ಟಾರ್ ಸಿನಿಮಾವೇ ಔಷಧಿ: ಇನ್ನೂ ತೆರೆಯದ 500ಕ್ಕೂ ಅಧಿಕ ಚಿತ್ರಮಂದಿರ

09:31 AM Sep 28, 2021 | Team Udayavani |

ಇದೇ ಅಕ್ಟೋಬರ್‌ 1 ರಿಂದ ಥಿಯೇಟರ್‌ಗಳಲ್ಲಿ 100% ಪ್ರೇಕ್ಷಕರ ಪ್ರವೇಶಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಕಳೆದ ಮೂರು ತಿಂಗಳಿನಿಂದ ಥಿಯೇಟರ್‌ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಪ್ರದರ್ಶಕರು ಮತ್ತು ನಿರ್ಮಾಪಕರ ಬೇಡಿಕೆ ಕಡೆಗೂ ಈಡೇರಿದೆ.

Advertisement

ಸರ್ಕಾರದಿಂದ 100% ಪ್ರೇಕ್ಷಕರ ಪ್ರವೇಶಾವಕಾಶಕ್ಕೆ ಅನುಮತಿ ಹೊರಬೀಳುತ್ತಿದ್ದಂತೆ, ಸ್ಯಾಂಡಲ್‌ ವುಡ್‌ನ‌ಲ್ಲಿ ಸಿನಿಮಾಗಳ ಬಿಡುಗಡೆ ತಯಾರಿ ಕೂಡ ಜೋರಾಗುತ್ತಿದೆ. ಒಂದೆಡೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ತಮ್ಮ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿಕೊಳ್ಳುತ್ತಿದ್ದರೆ, ಮತ್ತೂಂದೆಡೆ ಥಿಯೇಟರ್‌ ಮಾಲೀಕರು ಕೂಡ ಬಿಡುಗಡೆಯಾಗಲಿರುವ ಸಿನಿಮಾಗಳಿಗೆ ತಮ್ಮ ಥಿಯೇಟರ್‌ನಲ್ಲಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಕ್ಟೋಬರ್‌ ಮೊದಲ ವಾರದಿಂದಲೇ ರಾಜ್ಯದ ಎಲ್ಲ ಥಿಯೇಟರ್‌ ಗಳಲ್ಲೂ ಸಿನಿಮಾಗಳು ಮತ್ತೆ ಮೊದಲಿನಂತೆಯೇ ಪ್ರದರ್ಶನವಾಗುತ್ತವೆ ಎಂದು ಹೇಳಲಾಗದು.

ಚಿತ್ರರಂಗದ ಮೂಲಗಳ ಮಾಹಿತಿ ಪ್ರಕಾರ, ರಾಜ್ಯದಲ್ಲಿರುವ 630ಕ್ಕೂ ಹೆಚ್ಚು ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳ ಪೈಕಿ ಸದ್ಯಕ್ಕೆ ಸುಮಾರು 100 ಥಿಯೇಟರ್‌ಗಳಲ್ಲಷ್ಟೇ 50% ಪ್ರೇಕ್ಷಕರ ಪ್ರವೇಶಾತಿಯಲ್ಲಿ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಯಾವುದೂ ರಿಲೀಸ್‌ ಆಗದಿರುವುದರಿಂದ, ಅದರಲ್ಲೂ ಹೆಚ್ಚಿನ ಥಿಯೇಟರ್‌ಗಳಲ್ಲಿ ಪರಭಾಷಾ ಸಿನಿಮಾಗಳೇ ಪ್ರದರ್ಶನ ಕಾಣುತ್ತಿವೆ. ಬಾಕಿಯಿರುವ ಸುಮಾರು 500ಕ್ಕೂ ಹೆಚ್ಚು ಥಿಯೇಟರ್‌ಗಳು ಇನ್ನಷ್ಟೇ ಬಾಗಿಲು ತೆರೆಯ ಬೇಕಾಗಿದೆ.

ಇನ್ನು ಅಕ್ಟೋಬರ್‌ ಮೊದಲ ದಿನದಿಂದ ಸರ್ಕಾರ 100% ಪ್ರೇಕ್ಷಕರ ಪ್ರವೇಶಾತಿಗೆ ಅನುಮತಿ ನೀಡಿದ್ದರೂ, ಅಭಿಮಾನಿಗಳನ್ನು ಭಾರೀ ದೊಡ್ಡ ಪ್ರಮಾಣದಲ್ಲಿ ಥಿಯೇಟರ್‌ಗಳತ್ತ ಕರೆದುಕೊಂಡು ಬರುವಂತ ಯಾವ ಸ್ಟಾರ್ ಸಿನಿಮಾಗಳೂ ಕನ್ನಡದಲ್ಲಿ ರಿಲೀಸ್‌ ಆಗದಿರುವುದರಿಂದ, ಅಕ್ಟೋಬರ್‌ ಮೊದಲ ವಾರದಿಂದಲೇ ರಾಜ್ಯಾದ್ಯಂತ ಎಲ್ಲ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಓಪನ್‌ ಆಗುತ್ತವೆ ಎಂದು ಖಚಿತವಾಗಿ ಹೇಳುವಂತಿಲ್ಲ.

ಕಂಟೆಂಟ್‌ ಕೊರತೆ : ಇನ್ನು ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೂ ಆ ಸಿನಿಮಾಗಳ ನಿರ್ಮಾಪಕರು, ವಿತರಕರ ಗಮನ ಮೊದಲ ಒಂದೆರಡು ವಾರ ಎ ಮತ್ತು ಬಿ ಸೆಂಟರ್‌ಗಳ ಕಡೆಗಷ್ಟೇ ಹೆಚ್ಚಾಗಿ ಇರುವುದರಿಂದ, ಸಿ ಸೆಂಟರ್‌ಗಳಿಗೆ ಸ್ಟಾರ್ ಸಿನಿಮಾಗಳ ಕಂಟೆಂಟ್‌ ಸಿಗಬೇಕು ಅಂದ್ರೆ ಕನಿಷ್ಟ ಎರಡು-ಮೂರು ವಾರಗಳಾದರೂ ಬೇಕು. ಸದ್ಯದ ಮಟ್ಟಿಗೆ ಅಕ್ಟೋಬರ್‌ 14ಕ್ಕೆ ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿನಯದ “ಕೋಟಿಗೊಬ್ಬ-3′ ಮತ್ತು ದುನಿಯಾ ವಿಜಯ್‌ ಅಭಿನಯದ “ಸಲಗ’ ಎರಡು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾದರೂ, 450 ರಿಂದ 500 ಥಿಯೇಟರ್‌ಗಳಿಗಷ್ಟೇ ಸ್ಟಾರ್ ಸಿನಿಮಾ ಕಂಟೆಂಟ್‌ ಸಿಗುತ್ತದೆ. ಬಾಕಿ ಇರುವ ಇನ್ನೂ 100 ರಿಂದ 150 ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಿಗೆ ಸ್ಟಾರ್ ಸಿನಿಮಾ ಕಂಟೆಂಟ್‌ ಸಿಗಬೇಕಾದ್ರೆ, ಇನ್ನೂ ಎರಡು-ಮೂರು ವಾರಗಳು ಬೇಕಾಗುತ್ತದೆ ಅನ್ನೋದು ಪ್ರದರ್ಶಕರ ಮಾತು. ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಬ್ಯಾಕ್‌ ಟು ಬ್ಯಾಕ್‌ ಸ್ಟಾರ್ ಸಿನಿಮಾಗಳು ಸಿನಿಮಾ ರಿಲೀಸ್‌ ಆದರೂ, ರಾಜ್ಯದ ಎಲ್ಲ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಮತ್ತೆ ಮೊದಲಿನಂತಾಗಲೂ ಕನಿಷ್ಟ ಮೂರು-ನಾಲ್ಕು ವಾರಗಳಾದರೂ ಬೇಕು ಅನ್ನೋದು ಗಾಂಧಿನಗರದ ಸಿನಿಮಂದಿಯ ಒಕ್ಕೊರಲ ಅಭಿಪ್ರಾಯ.

Advertisement

ಹೊಂದಾಣಿಕೆಯಿಂದ ಸಿನಿಮಾ ರಿಲೀಸ್‌ ಮಾಡಿ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರವೇಶಾತಿಗೆ ಅನುಮತಿ ಸಿಕ್ಕ ಬೆನ್ನಲ್ಲೇ ಮೂರು ಸ್ಟಾರ್‌ ಸಿನಿಮಾಗಳು ಬಿಡುಗಡೆಯ ದಿನಾಂಕ ಘೋಷಿಸಿವೆ. ಅದರಲ್ಲೂ “ಸಲಗ’ ಹಾಗೂ “ಕೋಟಿಗೊಬ್ಬ-3′ ಚಿತ್ರಗಳು ಅಕ್ಟೋಬರ್‌ 14ರಂದು ಬರಲಿವೆ. ಎರಡು ಸ್ಟಾರ್‌ ಸಿನಿಮಾಗಳು ಒಂದೇ ಬರುವ ಘೋಷಣೆ ಮಾಡಿದ್ದು, ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ನಟ ಶಿವರಾಜ್‌ಕುಮಾರ್‌ ಮಾಧ್ಯಮ ಜೊತೆ ಮಾತನಾಡಿದ್ದು, “ಪ್ರತಿಯೊಬ್ಬ ನಿರ್ಮಾಪಕರಿಗೂ ತಾವು ಹಾಕಿರುವ ಬಂಡವಾಳ ವಾಪಾಸ್‌ ಬರಬೇಕೆಂಬ ಆಸೆ ಇರುತ್ತದೆ. ಈ ನಿಟ್ಟಿನಲ್ಲಿ ಹೊಂದಾಣಿಕೆಯಿಂದ ಸಿನಿಮಾ ಬಿಡುಗಡೆ ಮಾಡಿದರೆ ಒಳ್ಳೆಯದು. ಇಲ್ಲಿ ಎಲ್ಲರೂ ನಮ್ಮವರೇ. ನನ್ನ ಪ್ರಕಾರ, ತೊಂದರೆಯಾಗದಂತೆ ಇಬ್ಬರು ನಿರ್ಮಾಪಕರು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುವುದು ಶಿವಣ್ಣ ಮಾತು. ಚಿತ್ರಮಂದಿರಕ್ಕೆ ಬರುವ ಅಭಿಮಾನಿಗಳು ಕೂಡಾ ಕೋವಿಡ್ ಕಡಿಮೆಯಾಗುವವರೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಕಿವಿ ಮಾತು ಹೇಳಿದರು

ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರ 100% ಪ್ರೇಕ್ಷಕರ ಪ್ರವೇಶಾತಿಗೆ ಅವಕಾಶ ಕೊಟ್ಟಿದ್ದು ಖುಷಿಯಿದೆ. ಸರ್ಕಾರದ ಮಾರ್ಗಸೂಚಿಯಂತೆ ಥಿಯೇಟರ್‌ಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಈಗಾಗಲೇ ಸಿನಿಮಾಗಳಿಲ್ಲದೆ ಸ್ಥಗಿತಗೊಳಿಸಿರುವ ಥಿಯೇಟರ್‌ಗಳು ತಕ್ಷಣವೇ ಮತ್ತೆ ಪ್ರದರ್ಶನ ಶುರು ಮಾಡುತ್ತವೆ ಎಂದು ಹೇಳಲಾಗದು. ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್‌ಗಳನ್ನು ತೆರೆದರೂ, ಬೇಕಾದಷ್ಟು ಸಿನಿಮಾ ಕಂಟೆಂಟ್‌ ಇಲ್ಲ. ಅದರಲ್ಲೂ ಎರಡು-ಮೂರು ಬಿಗ್‌ ಸ್ಟಾರ್ ಸಿನಿಮಾಗಳು ರಿಲೀಸ್‌ ಆದ ಮೇಲಷ್ಟೇ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬರೋದಕ್ಕೆ ಶುರು ಮಾಡುತ್ತಾರೆ. ಹಾಗಾಗಿ ಬಿ ಮತ್ತು ಸಿ ಸೆಂಟರ್‌ಗಳು ಮತ್ತೆ ಮೊದಲಿನಂತಾಗಲೂ ಕನಿಷ್ಟ ಮೂರು-ನಾಲ್ಕು ವಾರಗಳಾದ್ರೂ ಬೇಕಾಗುತ್ತದೆ.

 -ಕೆ. ವಿ ಚಂದ್ರಶೇಖರ್‌, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಸಧ್ಯಕ

Advertisement

Udayavani is now on Telegram. Click here to join our channel and stay updated with the latest news.

Next