ಬೆಂಗಳೂರು: ಕಾನೂನು ಬಾಹಿರವಾಗಿ ನಿರ್ಮಿಸುತ್ತಿರುವ ಕಟ್ಟಡಗಳ ತಪಾಸಣೆಗೆ ರಾಜರಾಜೇಶ್ವರಿ ನಗರ ವಲಯದ ಪಾಲಿಕೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜರಾಜೇಶ್ವರಿ ವಲಯದ ಹಿಲ್‌ಟಾಪ್ ಮತ್ತು ಬೆಥಲ್ ಶಿಕ್ಷಣ ಸಂಸ್ಥೆಗಳು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿವೆ ಎಂಬ ಸಾರ್ವಜನಿಕರ ದೂರಿನ ಮೇರೆ ಗುರುವಾರ ತಪಾಸಣೆ ನಡೆಸಲು ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದರು. ತಪಾಸಣೆ ಕುರಿತು ಒಂದು ವಾರದ ಮೊದಲೇ ಮಾಹಿತಿ ನೀಡದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಬರಲಿಲ್ಲ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು,’ ಎಂದು ಅವರು ಆಯುಕ್ತರನ್ನು ಒತ್ತಾಯಿಸಿದ್ದಾರೆ.
“ಬೆಥೆಲ್ ಶಿಕ್ಷಣ ಸಂಸ್ಥೆ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆದಿದೆ. ಆದರೆ, ನಿಯಮ ಬಾಹಿರವಾಗಿ ಎರಡು ಅಂತಸ್ತುಗಳನ್ನು ನಿರ್ಮಿಸುತ್ತಿದೆ. 15 ವರ್ಷಗಳ ಹಳೆ ಕಟ್ಟಡದ ಮೇಲೆ ಪರಿಷ್ಕೃತ ನಕ್ಷೆ ಮಂಜೂರಾತಿ ಪಡೆಯದೆ ಕಟ್ಟಡ ನಿರ್ಮಿಸುತ್ತಿದ್ದು, ಕಟ್ಟಡ ತಪಾಸಣೆಯ ವೇಳೆ ಅಧಿಕಾರಿಗಳು ಹಾಜರಾಗದೆ ಪರೋಕ್ಷವಾಗಿ ಕಟ್ಟಡ ಮಾಲೀಕರಿಗೆ ಸಹಕರಿಸುತ್ತಿದ್ದಾರೆ,’ ಎಂದು ದೂರಿದರು.
“ಈ ಭಾಗದ ಕೆಲವೊಂದು ಕಟ್ಟಡಗಳು ಕೊಳಚೆ ನಿರ್ಮೂಲನಾ ಮಂಡಳಿ ಜಾಗ ಒತ್ತುವರಿ ಮಾಡಿರುವ ಬಗ್ಗೆ ಆರೋಪಗಳಿವೆ. ಈ ಕುರಿತು ತನಿಖೆ ನಡೆಸಲು ಪಾಲಿಕೆಯ ಅಧಿಕಾರಿಗಳು ಮುಂದಾಗುತ್ತಿಲ್ಲ. ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ ಪಾಲಿಕೆಗೆ ನಷ್ಟವನ್ನುಂಟು ಮಾಡುತ್ತಿದ್ದಾರೆ,’ ಎಂದು ಆರೋಪಿಸಿದರು.
“ದಾಸರಹಳ್ಳಿ ವಲಯದ ಹೆಸರುಘಟ್ಟ ಮುಖ್ಯ ರಸ್ತೆಯ “ಹಿಂದೂಜಾ ಪ್ರಾಪರ್ಟಿಸ್’ ಹಿಲ್‌ಟಾಪ್ ಹೆಸರಿನಲ್ಲಿ ವಸತಿ ಸಮುತ್ಛಯ ನಿರ್ಮಿಸುತ್ತಿದ್ದು, ಸ್ಥಾಯಿ ಸಮಿತಿ ಸದಸ್ಯರು ಪರಿಶೀಲನೆ ತೆರಳಿದರೆ ಅಧಿಕಾರಿಗಳು ಗೈರಾಗಿದ್ದಾರೆ. ಕಟ್ಟಡ ಮಾಲೀಕರು ರ್‍ಯಾಂಪ್ ಪ್ರದೇಶ ಮತ್ತು ಬಾಲ್ಕನಿ ನಿರ್ಮಿಸುವಲ್ಲಿ ಕಾನೂನು ಪಾಲಿಸುತ್ತಿಲ್ಲ. ಇದರೊಂದಿಗೆ ಕಟ್ಟಡದ ಪಕ್ಕದಲ್ಲಿ ರಾಜಕಾಲುವೆಯಿರುವ ಅನುಮಾನವಿದೆ,’ ಎಂದರು.
ನಗರದ ಯೋಜನೆ ಸಮಿತಿ ಸ್ಥಾಯಿ ಸಮಿತಿ ಸದಸ್ಯರು ಪೂರ್ವ ನಿಯೋಜಿತವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿ ತಪಾಸಣೆ ನಡೆಸಿದರೂ, ಅಧಿಕಾರಿಗಳು ಗೈರಾಗಿರುವ ಬಗ್ಗೆ ದೂರು ನೀಡಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಮಂಜುಳಾ ನಾರಾಯಣಸ್ವಾಮಿ ಅವರು ತಮಗಾಗಲಿ ಅಥವಾ ಆಯುಕ್ತರಿಗಾಗಲಿ ಪ್ರಕರಣ ಕುರಿತು ಮಾಹಿತಿ ನೀಡದೇ ನೇರವಾಗಿ ಮಾಧ್ಯಮಗಳ ಮುಂದೆ ವಿಷಯ ಪ್ರಸ್ತಾಪಿಸಿರುವುದು ಸರಿಯಲ್ಲ.
– ಜಿ.ಪದ್ಮಾವತಿ, ಮೇಯರ್