Advertisement
ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷೇತರ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಕಸರತ್ತು ನಡೆಸಿವೆ. ಶುಕ್ರವಾರ ರಾತ್ರಿ ಬಿಜೆಪಿ ನಾಯಕರು ಪಕ್ಷೇತರರೊಂದಿಗೆ ಸಭೆ ನಡೆಸಿದರೆ, ಶನಿವಾರ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಪಕ್ಷೇತರರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
Related Articles
Advertisement
ಇದೀಗ ಮತ್ತೆ ಬಿಜೆಪಿ ಪಕ್ಷೇತರ ಸದಸ್ಯರನ್ನು ತನ್ನತ್ತ ಸೆಳೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ಮತ್ತೂಮ್ಮೆ ರೆಸಾರ್ಟ್ ರಾಜಕೀಯ ಶುರುವಾಗುವ ಸಾಧ್ಯತೆಯಿದೆ. ಅದರಂತೆ ಪಕ್ಷೇತರ 8 ಸದಸ್ಯರ ಪೈಕಿ 7 ಸದಸ್ಯರನ್ನು ಸೆ. 27ರವರೆಗೆ ಗೋವಾದ ರೆಸಾರ್ಟ್ ಒಂದಕ್ಕೆ ಕಳುಹಿಸಲು ನಿರ್ಧರಿಸಲಾಗಿದ್ದು, ಎರಡು ದಿನಗಳಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರೊಂದಿಗೆ ಪಕ್ಷೇತರ ಸದಸ್ಯರು ಗೋವಾಗೆ ತೆರಳಲಿದ್ದಾರೆ ಎನ್ನಲಾಗಿದೆ.
ಪ್ರಮುಖ ಸಮಿತಿಗಳ ಮೇಲೆ ಪಕ್ಷೇತರರ ಕಣ್ಣು: ಪಕ್ಷೇತರ ಸದಸ್ಯರಿಗೆ ಕಳೆದ ಮೂರು ವರ್ಷಗಳಲ್ಲಿ ಪ್ರಮುಖ ಸ್ಥಾಯಿ ಸಮಿತಿಗಳು ದೊರಕಿಲ್ಲ. ಹೀಗಾಗಿ ಈ ಬಾರಿಯಾದರೂ ಪ್ರಮುಖ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷೇತರರು ಬೇಡಿಕೆ ಇಟ್ಟಿದ್ದಾರೆ. ಅದರಂತೆ ನಗರಯೋಜನೆ, ಬೃಹತ್ ಯೋಜನೆ, ವಾರ್ಡ್ ಮಟ್ಟದ ಕಾಮಗಾರಿಯಂತಹ ಸ್ಥಾಯಿ ಸಮಿತಿಗಳು ಪಕ್ಷೇತರರ ಪಾಲಾಗಲಿವೆ.
ಪಕ್ಷೇತರರಿಗೆ ನಾಲ್ಕು ಸ್ಥಾಯಿ ಸಮಿತಿ ನೀಡಿದ ನಂತರ ಉಳಿಯುವ 8 ಸ್ಥಾಯಿ ಸಮಿತಿಗಳ ಪೈಕಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ನಾಲ್ಕು ಸ್ಥಾಯಿ ಸಮಿತಿಗಳನ್ನು ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಅದರಲ್ಲೂ ಕಳೆದ ಬಾರಿ ಜೆಡಿಎಸ್ ಪಾಲಾಗಿದ್ದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಈ ಬಾರಿ ಕಾಂಗ್ರೆಸ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.