ಹೊಸದಿಲ್ಲಿ: ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಸತತ ಎರಡು ಬಾರಿ ಈ ಕ್ಷೇತ್ರದಿಂದ ಅವರು ಗೆದ್ದಿದ್ದಾರೆ. ಇದೇ ವೇಳೆ, ಅವರ ಪುತ್ರ, ಪಕ್ಷದ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಅಧಿಕವಾಗಿದೆ. ಒಂದು ವೇಳೆ ಅವರಿಗೆ ಪಕ್ಷದ ಟಿಕೆಟ್ ದೊರೆತರೆ, ಉದಯನಿಧಿ ಅವರ ಚೊಚ್ಚಲ ಚುನಾವಣಾ ಸ್ಪರ್ಧೆ ಇದಾಗಿರಲಿದೆ.
ಶಾ ವಿರುದ್ಧ ಸ್ಟಾಲಿನ್ ಟೀಕೆ: ತಮ್ಮ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿರುವ ಡಿಎಂಕೆ ಅಧ್ಯಕ್ಷ ಸ್ಟಾಲಿನ್, “”ತಮಿಳುನಾಡಿನಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಎಐಎಡಿಎಂಕೆ ಪಕ್ಷ ದೊಂದಿಗೆ ಕೈ ಜೋಡಿಸಿರುವ ಬಿಜೆಪಿ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು” ಎಂದಿದ್ದಾರೆ.
ಬಿಜೆಪಿಯನ್ನು ದೂರವಿಡಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 3 ದಿನಗಳ ತಮಿಳುನಾಡು ಪ್ರವಾಸ ಅಂತ್ಯವಾಗಿದೆ. 3ನೇ ದಿನವಾದ ಸೋಮವಾರವೂ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. “ಭಾಷೆ, ಸಂಸ್ಕೃತಿಯ ಬಗ್ಗೆ ಶತ್ರುತ್ವ ಹೊಂದಿರುವ ಹಾಗೂ ಒಂದು ಸಂಸ್ಕೃತಿ, ಒಂದು ದೇಶ, ಒಂದು ಇತಿಹಾಸ ಎಂಬ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಶಕ್ತಿಗಳಿಂದ ದೂರವಿರುವ ಮೂಲಕ ತಮಿಳುನಾಡು ಇಡೀ ದೇಶಕ್ಕೇ ದಾರಿ ತೋರಿಸಬೇಕಿದೆ’ ಎಂದು ರಾಹುಲ್ ಹೇಳಿದ್ದಾರೆ. ಈ ಮೂಲಕ ಬಿಜೆಪಿಯನ್ನು ದೂರವಿಡಿ ಎಂಬ ಸಂದೇಶವನ್ನು ನೀಡಿದ್ದಾರೆ.
ಸುಪ್ರೀಂಗೆ ಅರ್ಜಿ: ಪಶ್ಚಿಮ ಬಂಗಾಲದಲ್ಲಿ 8 ಹಂತಗಳ ಮತದಾನ ಘೋಷಿಸಿರುವ ಚುನಾವಣ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ವಕೀಲ ಎಂ.ಎಲ್. ಶರ್ಮಾ ಎಂಬವರು ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿ ಸಿದ್ದು, 8 ಹಂತದ ಮತದಾನ ನಿರ್ಧಾರ ವಾಪಸ್ ಪಡೆಯುವಂತೆ ಆಯೋಗಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದ್ದಾರೆ.
ಅಸ್ಸಾಂನಲ್ಲಿ ಪ್ರಿಯಾಂಕಾ ಡಾನ್ಸ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅಸ್ಸಾಂನಲ್ಲಿ ಭರ್ಜರಿ ಚುನಾವಣ ಪ್ರಚಾರ ಕೈಗೊಂಡಿದ್ದಾರೆ. ಲಖೀಂಪುರದಲ್ಲಿ ಬುಡಕಟ್ಟು ಜನಾಂಗದ ಯುವತಿಯರೊಂದಿಗೆ ಸಾಂಪ್ರದಾಯಿಕ “ಜುಮುರ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ದೇಶದೆಲ್ಲೆಡೆ ಹೋಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಆದರೆ ಅಸ್ಸಾಂನಲ್ಲಿ ಮಾತ್ರ ಅದರ ಬಗ್ಗೆ ತುಟಿ ಬಿಚ್ಚುವುದಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ದೀದಿಗೆ ತೇಜಸ್ವಿ ಬಲ
ಅಚ್ಚರಿಯ ಬೆಳವಣಿಗೆಯೆಂಬಂತೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿಗೆ ಬೆಂಬಲ ಘೋಷಿಸಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಆರ್‌ಜೆಡಿ, ಪ.ಬಂಗಾಲದಲ್ಲಿ ಕಾಂಗ್ರೆಸ್-ಎಡ ಪಕ್ಷಗಳ ಮೈತ್ರಿಗೆ ಬೆಂಬಲ ಸೂಚಿಸುವ ಬದಲು ಮಮತಾಗೆ ಸಾಥ್ ನೀಡಿದ್ದಾರೆ. ಜತೆಗೆ, ಬಿಜೆಪಿಯನ್ನು ನಿಯಂತ್ರಿಸುವುದೇ ನಮ್ಮ ಮೊದಲ ಗುರಿ. ಹೀಗಾಗಿ, ಇಲ್ಲಿ ನೆಲೆ ನಿಂತಿರುವ ಬಿಹಾರಿಗರು ಟಿಎಂಸಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.