Advertisement

ಸಂಪುಟ ಪುನಾರಚನೆಗೆ ಮುಂದಾದ ಸ್ಟಾಲಿನ್‌?

12:57 AM May 09, 2023 | Team Udayavani |

ಚೆನ್ನೈ: ಸಂಪುಟ ಪುನಾರಚನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮುಂದಾಗಿದ್ದಾರೆಯೇ?

Advertisement

ತಮಿಳುನಾಡು ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌(ಪಿಟಿಆರ್‌) ಅವರು ಸ್ಟಾಲಿನ್‌ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ಆಡಿಯೋ ಬಿಡುಗಡೆಯಾದ ಬೆನ್ನಲ್ಲೇ ತಮಿಳುನಾಡು ಸಿಎಂ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಮುಂದಿನ ಎರಡು ವಾರಗಳಲ್ಲಿ ಸಂಪುಟ ಪುನಾರಚನೆಯಾಗುವ ಸಾಧ್ಯತೆಯಿದೆ. ಏಕೆಂದರೆ ಈ ತಿಂಗಳ ಅಂತ್ಯದಲ್ಲಿ ಸ್ಟಾಲಿನ್‌ ಅವರು ವಿದೇಶಕ್ಕೆ ಪ್ರವಾಸ ಹೊರಡಲಿದ್ದಾರೆ.

ಮಾಜಿ ಕೇಂದ್ರ ಸಚಿವ ಟಿ.ಆರ್‌.ಬಾಲು ಅವರ ಪುತ್ರ, ಮೂರು ಬಾರಿಯ ಶಾಸಕ ಟಿಆರ್‌ಬಿ ರಾಜಾ ಹಾಗೂ ಶಂಕರಕೋವಿಲ್‌ ಕ್ಷೇತ್ರದ ಶಾಸಕ ಇ.ರಾಜಾ ಸಂಪುಟ ಸೇರ್ಪಡೆಯಾಗಲಿದ್ದಾರೆ. ಇದೇ ವೇಳೆ ಸಚಿವ ಪಿಟಿಆರ್‌ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ.

ಪ್ರಸ್ತುತ ತಮಿಳುನಾಡು ಸಂಪುಟದಲ್ಲಿ 53 ಸಚಿವರಿದ್ದಾರೆ. ಹೊಸಬರನ್ನು ಸೇರ್ಪಡೆಗೊಳಿಸ ಬೇಕಾದರೆ, ಕೆಲವು ಹಾಲಿ ಸಚಿವರನ್ನು ಕೈಬಿಡಬೇಕಾಗುತ್ತದೆ. ಸ್ಟಾಲಿನ್‌ ಕುಟುಂಬದ ಆಸ್ತಿ ಹಾಗೂ ಸ್ಟಾಲಿನ್‌ ಪುತ್ರ ಉದಯನಿಧಿ ಮತ್ತು ಅಳಿಯ ವಿ.ಶಬರೀಶನ್‌ ಅವರು ಅಕ್ರಮ ಹಣಕಾಸು ಸಂಗ್ರಹದಲ್ಲಿ ತೊಡಗಿರುವ ಕುರಿತು ಸಚಿವ ಪಿಟಿಆರ್‌ ಮಾತನಾಡಿದ್ದಾರೆ ಎನ್ನಲಾದ ಎರಡು ಆಡಿಯೋಗಳನ್ನು ಇತ್ತೀಚೆಗೆ ಬಿಜೆಪಿ ಬಿಡುಗಡೆಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next