Advertisement

Politics: ಇಂದು ಸ್ಟಾಲಿನ್‌- ಕೇಜ್ರಿವಾಲ್‌ ಭೇಟಿ 

09:55 PM May 31, 2023 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿಯ ಆಡಳಿತಾತ್ಮಕ ಸೇವೆಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ವಿರೋಧಿಸಲು ಬೆಂಬಲ ಕೋರಿ ತಮಿಳುನಾಡು ಹಾಗೂ ಜಾರ್ಖಂಡ್‌ ಮುಖ್ಯಮಂತ್ರಿಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭೇಟಿಯಾಗಲಿದ್ದಾರೆ.

Advertisement

ಈ ಕುರಿತಂತೆ ಟ್ವೀಟ್‌ ಮಾಡಿರುವ ಅವರು “ಜೂ.1ರಂದು ತಮಿಳುನಾಡು ಸಿಎಂ, ಡಿಎಂಕೆ ನಾಯಕರಾದ ಸ್ಟಾಲಿನ್‌ ಹಾಗೂ ಜೂ.2ರಂದು ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಅವರನ್ನು ರಾಂಚಿಯಲ್ಲಿ ಭೇಟಿಯಾಗಲಿದ್ದೇನೆ. ಈ ಮೂಲಕ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿ ದೆಹಲಿ ಜನರ ಮೇಲೆ ಮೋದಿ ಸರ್ಕಾರ ತೋರುತ್ತಿರುವ ದರ್ಪವನ್ನು ವಿರೋಧಿಸಲು ಬೆಂಬಲ ಕೋರುತ್ತೇನೆ’ ಎಂದಿದ್ದಾರೆ.

ಸ್ಟಾಲಿನ್‌, ಸೊರೇನ್‌ ಮಾತ್ರವಲ್ಲದೇ ಬಿಜೆಪಿಯೇತರ ಪಕ್ಷಗಳ ನಾಯಕರೆಲ್ಲರ ಬೆಂಬಲವನ್ನೂ ಕೋರಲು ಕೇಜ್ರಿವಾಲ್‌ ಯೋಜಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಮೂಲಕ ಸಂಸತ್‌ನಲ್ಲಿ ಸುಗ್ರೀವಾಜ್ಞೆಯನ್ನು ಕಾಯ್ದೆಯನ್ನಾಗಿ ಪರಿವರ್ತಿಸುವ ಕೇಂದ್ರಸರ್ಕಾರದ ಹೆಜ್ಜೆಗೆ ಬ್ರೇಕ್‌ ಹಾಕಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈಗಾಗಲೇ ತೆಲಂಗಾಣ ಸಿಎಂ ಕೆಸಿಆರ್‌, ಶಿವಸೇನೆ (ಉದ್ದವ್‌ ಬಣ) ನಾಯಕ ಉದ್ದವ್‌ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕೇಜ್ರಿವಾಲ್‌ಗೆ ಬೆಂಬಲ ಸೂಚಿಸಿದ್ದಾರೆ. ಶೀಘ್ರದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲೂ ಸಿದ್ಧತೆ ನಡೆಸಲಾಗುತ್ತಿದೆ.

ಸಿಸೋಡಿಯಗೆ ಜಾಮೀನು ನೀಡದಿರಲು ಕಾರಣವೇನು ?
ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯ ಅವರಿಗೆ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾಮೀನು ನೀಡಲು ಪದೇಪದೆ ಕೋರ್ಟ್‌ಗಳೇಕೆ ನಿರಾಕರಿಸುತ್ತಿವೆ, ಇದರ ಹಿಂದಿನ ಕಾರಣವೇನು ಎಂಬುದನ್ನು ಸಿಎಂ ಅರವಿಂದ್‌ ಕೇಜ್ರಿವಾಲ್‌ ತಿಳಿಸಲೇ ಬೇಕು ಎಂದು ಬಿಜೆಪಿ ದಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ್‌ ಪಟ್ಟು ಹಿಡಿದಿದ್ದಾರೆ.ನಾವು ಬರೀ ಸತ್ಯವನ್ನೇ ಹೇಳುತ್ತೇವೆ ಎಂದು ಹೇಳಿಕೊಳ್ಳುವ ಪಕ್ಷಕ್ಕೆ ತನ್ನ ನಾಯಕನ ವಿರುದ್ಧದ ಆರೋಪವೇನು? ಅದರ ಹಿಂದಿನ ಸತ್ಯಗಳೇನು? ಯಾವ ಕಾರಣಕ್ಕೆ ಜಾಮೀನು ನಿರಾಕರಿಸಲಾಗುತ್ತಿದೆ ಎಂಬುದೂ ಗೊತ್ತಿದೆ ಅಲ್ಲವೇ? ಈಗೇಕೆ ಸಿಎಂ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next