Advertisement
ಬೇಕಲ ಕೋಟೆಯ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರ ಹಾಗೂ ಸಮೀಪದ ಗ್ರಾಮ ಪಂಚಾಯತ್‌ಗಳಿಗೆ ಕುಡಿಯುವ ನೀರು ಸಂಗ್ರಹಿಸುತ್ತಿದ್ದ ಹೊಳೆಯು ಇದೀಗ ಬತ್ತಿ ಬರಡಾಗಿದೆ. ಪೊಯಿನಾಚಿ ಬಳಿಯ ಕರಿಚ್ಚೇರಿ ಹೊಳೆಯ ಕಾಯಕುನ್ನು ಪ್ರದೇಶದಲ್ಲಿ ನೀರು ಪೂರ್ತಿಯಾಗಿ ಬತ್ತಿ ಒಣಗುತ್ತಿದೆ.
ಕರಿಚ್ಚೇರಿ ಹೊಳೆಯ ಕಾಯಕುನ್ನು ಬಂಗಾಡ್‌ನಲ್ಲಿ ಕುಡಿಯುವ ನೀರಿನ ಪಂಪಿಂಗ್ ಸ್ಟೇಷನ್ ಸ್ಥಾಪಿಸಲಾಗಿದೆ. ಇದಕ್ಕಾಗಿ ನಿರ್ಮಿಸಿದ ಅಣೆಕಟ್ಟಿನಿಂದ ಅಲ್ಪದೂರದಲ್ಲಿ ಹೊಳೆಯ ಮಧ್ಯ ಭಾಗದಲ್ಲಿ ನೀರು ಸಂಗ್ರಹದ ಬಾವಿ ಹಾಗೂ ಪಂಪ್ ಹೌಸ್ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಹೊಳೆ ಪೂರ್ಣವಾಗಿ ಬತ್ತಿದ್ದು, ಪಂಪಿಂಗ್ ಸ್ಟೇಷನ್ ಸನಿಹದಲ್ಲಿ ಇದೀಗ ಹೊಯ್ಗೆ ಮಾತ್ರವೇ ಕಾಣಿಸುತ್ತಿದೆ.
Related Articles
Advertisement
ಇದೇ ಸ್ಥಿತಿ ಮುಂದುವರಿದರೆ ನೀರು ವಿತರಣೆ ಪೂರ್ಣವಾಗಿ ನಿಲ್ಲಬಹುದು ಎಂದು ಆತಂಕಪಡಲಾಗಿದೆ.
ಹಾಗಾದಲ್ಲಿ ಪಳ್ಳಿಕೆರೆ, ಚೆಮ್ನಾಡು, ಉದುಮ ಗ್ರಾಮ ಪಂಚಾಯತ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಬಾಧಿಸಲಿದೆ. ಪೆರಿಯ ನವೋದಯ ವಿದ್ಯಾಲಯಕ್ಕೆ ನೀರು ತಲುಪಿಸುವ ಇಡೀ ವ್ಯವಸ್ಥೆಯು ಕಾಯಕುನ್ನು ಕುಡಿಯುವ ನೀರು ಯೋಜನೆಯದ್ದಾಗಿದೆ.
ಬೇಕಲಕೋಟೆ ಮಾತ್ರವಲ್ಲದೆ ಜಿಲ್ಲೆಯ ಇನ್ನಿತರ ಕೋಟೆ ಕೊತ್ತಲಗಳು, ಪ್ರವಾಸಿ ತಾಣಗಳು, ಆಕರ್ಷಣೀಯ ಪ್ರದೇಶಗಳು, ಸಮುದ್ರ ಕಿನಾರೆ ಭಾಗಗಳು ಅಲ್ಲದೆ ಪಾರ್ಕ್‌ಗಳು ನೀರಿನ ಕೊರತೆಯಿಂದ ಸಮಸ್ಯೆ ಎದುರಿಸುತ್ತಿವೆ. ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಅತೀ ಹೆಚ್ಚು ಕೈಬೀಸಿ ಕರೆಯುವ ಬೇಕಲಕೋಟೆ ಪರಿಸರದಲ್ಲಿ ಜಲಕ್ಷಾಮ ಎದುರಾಗಿದೆ. ಇದರಿಂದಾಗಿ ಪ್ರವಾಸಿಗರಿಗೆ ಅಗತ್ಯದ ನೀರು ಲಭಿಸದೆ ಅಲ್ಲಿಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ.
ರಾಣಿಪುರಂನಲ್ಲೂ ನೀರಿನ ಸಮಸ್ಯೆಜಿಲ್ಲೆಯ ರಾಣಿಪುರಂ ಸಹಿತ ಇನ್ನಿತರ ಪ್ರವಾಸಿ ಕೇಂದ್ರಗಳಲ್ಲೂ ನೀರಿನ ಸಮಸ್ಯೆ ಕಂಡುಬರುತ್ತಿದೆ. ಮಲೆನಾಡು ಭಾಗದ ಪ್ರವಾಸಿ ತಾಣಗಳಲ್ಲಿ ಕೂಡ ನೀರಿನ ಪೂರೈಕೆ ಕಡಿಮೆಯಾಗಿದೆ. ಪ್ರವಾಸಿ ಕೇಂದ್ರಗಳಲ್ಲಿರುವ ಜಲಮೂಲಗಳು ಅಥವಾ ಜಲಾಶಯಗಳು ಬತ್ತಿ ಬರಡಾಗಿದ್ದು, ಇದರಿಂದಾಗಿ ಹೊರಗಿನಿಂದ ವಾಹನಗಳಲ್ಲಿ ನೀರು ಪೂರೈಕೆಯಾಗುತ್ತಿದೆ. ಇದು ಅಗತ್ಯಕ್ಕೆ ತಕ್ಕಂತೆ ನಡೆಯುತ್ತಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಬೇಸಗೆ ಮಳೆ ಬೀಳದಿದ್ದಲ್ಲಿ ತೀವ್ರ ಸಂಕಷ್ಟ
ಕಾಸರಗೋಡು ಜಿಲ್ಲೆಯಲ್ಲಿ ಈ ಬಾರಿ ಬೇಸಗೆ ಮಳೆಯ ಭಾರೀ ಕೊರತೆಯಿದೆ. ಸರಿಯಾದ ಬೇಸಗೆ ಮಳೆ ಬೀಳದಿರುವುದರಿಂದ ಭೂಮಿ ಸಂಪೂರ್ಣ ವಾಗಿ ಒಣಗಿದ್ದು, ಜಲಾಶಯಗಳಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಇನ್ನು ಜೂನ್ ಮೊದಲ ವಾರದಲ್ಲಿ ಮಳೆಗಾಲವೇ ಆರಂಭವಾಗುವುದಾದರೆ ಮುಂದಿನ 15 ದಿನಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಇನ್ನಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಲಿವೆ. ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಈ ಬಾರಿ ಬೇಸಗೆ ಮಳೆ ತೀರಾ ಕಡಿಮೆಯಾಗಿದ್ದು, ಇದು ಪ್ರವಾಸೋದ್ಯಮ ರಂಗದ ಹಿನ್ನಡೆಗೂ ಕಾರಣವಾಗಿದೆ. ಕುಡಿಯುವ ನೀರಿನ ಭಾರೀ ತೊಂದರೆ ಅನುಭವಿಸುತ್ತಿರುವ ಜಿಲ್ಲೆ ಯಲ್ಲಿ ನೀರಿನಿಂದಾವೃತ ಪ್ರವಾಸಿ ಕೇಂದ್ರವನ್ನು ಉಳಿಸಿ ಬೆಳೆಸಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ. – ಪ್ರದೀಪ್ ಬೇಕಲ್