Advertisement

Winter Assembly Session: ಇಂದಿನಿಂದ ಉತ್ತರಾಧಿವೇಶನ

01:15 AM Dec 09, 2024 | Team Udayavani |

ಬೆಂಗಳೂರು: ಬೆಳಗಾವಿ ಅಧಿವೇಶನ ಸೋಮವಾರ ಆರಂಭವಾಗಲಿದೆ. ನಿರೀಕ್ಷೆಗಳು, ಕನಸುಗಳು ನೂರಾರಿದ್ದು, ಅಧಿವೇಶನ ಎಷ್ಟರ ಮಟ್ಟಿಗೆ ಅರ್ಥಪೂರ್ಣವಾಗಲಿದೆ ಎಂಬುದು ಸದ್ಯದ ಪ್ರಶ್ನೆ. ಸಾಮಾನ್ಯವಾಗಿ ಅಧಿವೇಶನಗಳಲ್ಲಿ ಆಡಳಿತ ಪಕ್ಷದ ಮೇಲೆ ವಿಪಕ್ಷಗಳು ಮುಗಿಬೀಳುತ್ತವೆ. ಹಗರಣಗಳ ಪಟ್ಟಿ ಮಾಡಿ, ಅಸ್ತ್ರಗಳಾಗಿ ಪ್ರಯೋಗಿಸಿ ಇಕ್ಕಟ್ಟಿಗೆ ಸಿಲುಕಿಸುತ್ತವೆ. ಆದರೆ ಈ ಬಾರಿ ಚಿತ್ರಣ ಬದಲಾಗಿದೆ. ವಿಪಕ್ಷಗಳ ದಾಳಿ ಎದುರಿಸುವುದರ ಜತೆಗೆ ಅಷ್ಟೇ ಪ್ರಬಲವಾಗಿ ಪ್ರತಿದಾಳಿಯನ್ನೂ ನಡೆಸಲು ಆಡಳಿತಾರೂಢ ಕಾಂಗ್ರೆಸ್‌ ಸಜ್ಜಾಗಿದೆ. ಆ ಮೂಲಕ ರಾಜಕೀಯ ಹಣಾಹಣಿಗೆ ಬೆಳಗಾವಿ ಅಧಿವೇಶನ ವೇದಿಕೆ ಆಗಲಿದೆ.

Advertisement

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶ ನಾಲಯವು ನೀಡಿರುವ ನೋಟಿಸ್‌ ಸಹಿತ ಆಡಳಿತ ಪಕ್ಷದ ವಿರುದ್ಧ ಹಲವು ಹಗರಣಗಳ ಆರೋಪಗಳ ಜತೆಗೆ ಉತ್ತರ ಕರ್ನಾಟಕದಲ್ಲೇ ನಡೆದ ಬಾಣಂತಿಯರ ಸಾವು ಮತ್ತಿತರ ಪ್ರಮುಖ ಅಸ್ತ್ರಗಳು ಮೈತ್ರಿಪಕ್ಷ ಬಿಜೆಪಿ- ಜೆಡಿಎಸ್‌ ಬಳಿ ಇವೆ.

ಆದರೆ ಉಪಚುನಾವಣೆಯಲ್ಲಿ ಹೀನಾಯ ಸೋಲು ಮತ್ತು ಬಣಗಳ ಮೇಲಾಟ ಆ ಪಕ್ಷಗಳ ನೈತಿಕ ಸ್ಥೈರ್ಯ ಕುಗ್ಗುವಂತೆ ಮಾಡಿದೆ. ಇದೆಲ್ಲದರ ಮಧ್ಯೆ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಆಡಳಿತಾ ರೂಢ ಕಾಂಗ್ರೆಸ್‌ ಒಂದೊಂದಾಗಿ ಕೈಗೆತ್ತಿಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಕೇವಲ ಒಂದು ದಿನ ಬಾಕಿ ಇರುವಂತೆ ಬಿಜೆಪಿಯಲ್ಲಿ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಕೋರ್‌ ಕಮಿಟಿ ಸಭೆ ನಡೆಸಿ, ಬಣ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ನಡೆದಿದೆ. ಒಗ್ಗಟ್ಟಿನ ಮಂತ್ರ ಪಠಿಸಲಾಗಿದೆ. ನಾಯ ಕತ್ವದ ಬಗೆಗಿನ ಗೊಂದಲ ನಿವಾರಿಸುವ ಕಸರತ್ತು ಮಾಡಲಾಗಿದೆ. ಆದರೆ ಅದು ಎಷ್ಟರಮಟ್ಟಿಗೆ ಫ‌ಲಿಸಲಿದೆ ಎಂಬುದಕ್ಕೆ ಅಧಿವೇಶನದಲ್ಲಿ ಉತ್ತರ ಸಿಗಲಿದೆ.

“ಕೈ’ ಪಾಳಯದಲ್ಲೂ ಬಿರುಕು
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ ಎಂದೇನಿಲ್ಲ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಹಲವು ಆರೋಪ ಗಳ ನಡುವೆಯೂ ಉಪಚುನಾವಣೆ ಯಲ್ಲಿ “ಕ್ಲೀನ್ ಸ್ವೀಪ್’ ಮಾಡಿ ಮೇಲ್ನೋಟಕ್ಕೆ ತುಸು ಆತ್ಮವಿಶ್ವಾಸದಿಂದ ಬೀಗುತ್ತಿರಬಹುದು. ಆದರೆ ಹಾಸನ ಸಮಾವೇಶದ ರೂಪದಲ್ಲಿ ಉಂಟಾದ ಬಣಗಳ ಪ್ರತಿಷ್ಠೆ, ಅನಂತರ ಅದನ್ನು ಪಕ್ಷದ ಸಮಾವೇಶವಾಗಿ ಪರಿವರ್ತಿಸಿ ತೇಪೆ ಹಚ್ಚುವ ಪ್ರಯತ್ನ ನಡೆದುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಮಧ್ಯೆ ಈಗಾಗಲೇ ಅಧಿಕಾರ ಹಸ್ತಾಂತರದ ಒಪ್ಪಂದವನ್ನು ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಣ ನೆನಪು ಮಾಡಿಕೊಟ್ಟಿದೆ. ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ” ಅಂತಹ ಯಾವುದೇ ಒಪ್ಪಂದ ಆಗಿಲ್ಲ’ ಎಂದು ಹೇಳಿದರಾದರೂ ಇದಕ್ಕೆ ಉಪಮುಖ್ಯಮಂತ್ರಿಯ ಮೌನವು ಬಣಗಳ ನಡುವಿನ ಬಿರುಕನ್ನು ಎತ್ತಿತೋರಿಸಿದೆ.

Advertisement

ಇದರ ಜತೆಗೆ ಮುಡಾ ನಿವೇಶನ ಹಂಚಿಕೆ ಪ್ರಕರಣವನ್ನು ವಿಪಕ್ಷಗಳು ಎಲ್ಲಿಯವರೆಗೆ ತೆಗೆದುಕೊಂಡು ಹೋಗಬಹುದು ಎಂಬ ಆತಂಕ ಆಡಳಿತ ಪಕ್ಷದ ನಾಯಕರಲ್ಲಿದೆ. ಅಲ್ಲದೆ ಗ್ಯಾರಂಟಿಗಳಿಗೆ ಅನುದಾನ ಹಂಚಿಕೆ ನಡುವೆ ನೇಪಥ್ಯಕ್ಕೆ ಸರಿದ ಅಭಿವೃದ್ಧಿ, ಸ್ವತಃ ಆಡಳಿತ ಪಕ್ಷದ ಶಾಸಕರಿಂದ “ಗ್ಯಾರಂಟಿ ಬಿಡಿ ಅನುದಾನ ಕೊಡಿ’ ಎಂಬ ಕೂಗು ಕೇಳಿಬರುತ್ತಿರುವುದೂ ವಿಪಕ್ಷಗಳಿಗೆ ಪ್ರಮುಖ ಅಸ್ತ್ರಗಳಾಗಿವೆ.

ಗೌಣವಾಗದಿರಲಿ ಅಭಿವೃದ್ಧಿ
ಈ ರಾಜಕೀಯ ಹಣಾಹಣಿ ನಡುವೆ ರಾಜ್ಯದ ಗಂಭೀರ ವಿಷಯ ಗಳು ಗೌಣವಾಗಬಾರದು. ಅಕಾಲಿಕ ಮಳೆಯಿಂದ ಬೆಳೆ ಹಾನಿ ಆಗಿರು ವುದು, ಅಭಿವೃದ್ಧಿ ಕಾರ್ಯಕ್ರಮ ಗಳು, ಮಹಾದಾಯಿ ಸಹಿತ ಉತ್ತರ ಕರ್ನಾ ಟಕದ ನೀರಾವರಿ ಯೋಜನೆಗಳು, ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕುರಿತ ಚರ್ಚೆ ಆಗಬೇಕಿದೆ. ಬೆಳಗಾವಿ ಅಧಿವೇಶನದಲ್ಲಿ ಂಥ ಚರ್ಚೆಗಳಿಗೆ ಕೊನೇ ಗಳಿಗೆಯಲ್ಲಿ ಅವಕಾಶ ನೀಡ ಲಾಗುತ್ತದೆ. ಈ ಬಾರಿಯಾದರೂ ಆದ್ಯತೆ ಮೇರೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಾಗಬೇಕು.

ವಿಪಕ್ಷಗಳ ಅಸ್ತ್ರ
- ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ
-ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ
- ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಇ.ಡಿ. ನೋಟಿಸ್‌
- ಅಬಕಾರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಆರೋಪ
-ರೈತರ ಜಮೀನುಗಳಿಗೆ ವಕ್ಫ್ ನೋಟಿಸ್‌ ವಿವಾದ
-ಗ್ಯಾರಂಟಿ ಮಧ್ಯೆ ಅನುದಾನದ ಕೊರತೆಯ ಕೂಗು
-ಸಿಎಂ-ಡಿಸಿಎಂ ಮಧ್ಯೆ ಅಧಿಕಾರ ಹಸ್ತಾಂತರ ಒಪ್ಪಂದ

ಸರಕಾರದ ಪ್ರತ್ಯಸ್ತ್ರ
-ಬಿಜೆಪಿಯೊಳಗಿನಬಣ ಬಡಿದಾಟ
-ಉಪಚುನಾವಣೆಯಲ್ಲಿ ಹೀನಾಯ ಸೋಲು
-ಬಿಜೆಪಿ ಅವಧಿಯ ಹಗರಣಗಳು
-ಕೇಂದ್ರ ಸರಕಾರದಿಂದ ಅನುದಾನ ತಾರತಮ್ಯ ನೀತಿ
-ಕೋವಿಡ್‌ ಕಾಲದಲ್ಲಿ ನಡೆದ ಅವ್ಯವಹಾರ ಆರೋಪ
-ಡಿನೋಟಿಫಿಕೇಶನ್‌ ಪ್ರಕರಣಗಳ ತನಿಖೆ
-ಪೋಕ್ಸೋ ಮತ್ತಿತರ ಪ್ರಕರಣಗಳು

ನಿಗದಿಯಂತೆ ಡಿ. 9 ರಿಂದ 20ರ ವರೆಗೆ ಅಧಿವೇಶನ ನಡೆಯಲಿದೆ. ಮಂಡ್ಯ ಸಾಹಿತ್ಯ ಸಮ್ಮೇಳನ ಕ್ಕಾಗಿ ಡಿ. 19ಕ್ಕೆ ಕಲಾಪ ಮೊಟಕುಗೊಳಿಸುವ ಚರ್ಚೆ ಸರಕಾರದ ಮಟ್ಟದಲ್ಲಿ ನಡೆದಿರಬಹುದು.
-ಯು.ಟಿ. ಖಾದರ್‌, ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next